ADVERTISEMENT

ಕೆಡಿಪಿ ಸದಸ್ಯರಾಗಿ ಯತೀಂದ್ರ ನೇಮಕ?

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಡಾ.ಯತೀಂದ್ರ
ಡಾ.ಯತೀಂದ್ರ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ)  ಜಿಲ್ಲಾ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರಾಗಿ ನೇಮಿಸಿ, ಹಿಂಬಾಗಿಲಿನಿಂದ ಅಧಿಕಾರ ನೀಡುವ ಯತ್ನ  ನಡೆದಿದೆ’ ಎಂಬ ಟೀಕೆಗಳು ವ್ಯಕ್ತವಾಗಿವೆ.

ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ಕಾರ್ಯ ಕಲಾಪ ಪಟ್ಟಿಯಲ್ಲಿ ಯತೀಂದ್ರ ಅವರನ್ನು ನಾಮನಿರ್ದೇಶಿತ ಸದಸ್ಯರಾಗಿ  ನೇಮಕ ಮಾಡುವ ವಿಷಯ ಸೇರಿತ್ತು. ಆದರೆ,  ಅದನ್ನು ಕೊನೆಗಳಿಗೆಯಲ್ಲಿ ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಂಸದ ಆರ್.ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ಯತೀಂದ್ರ ಅವರನ್ನು ನೇಮಕ ಮಾಡಲು ಚಿಂತನೆ ನಡೆದಿದೆ  ಎಂದು ತಿಳಿಸಿದರು.
ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಾದ್ಯಂತ ಓಡಾಡುತ್ತಿರುವ ಅವರು ಅಧಿಕಾರಿಗಳ ಸಭೆ ನಡೆಸುವುದು ಹಾಗೂ ಕಾಮಗಾರಿಗಳ ಬಗ್ಗೆ  ಸೂಚನೆ ನೀಡುತ್ತಿರುವುದು ಸಾರ್ವಜನಿಕ ಹಾಗೂ ರಾಜಕೀಯ  ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿತ್ತು.

ADVERTISEMENT

‘ಯಾವುದೇ ಚುನಾಯಿತ ಪ್ರತಿನಿಧಿ ಅಥವಾ ಅಧಿಕಾರಿಯಲ್ಲದ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ’ ಎಂದು ವಿರೋಧ ಪಕ್ಷದ ಸದಸ್ಯರು ಆಪಾದಿಸಿದ್ದರು.

‘ಇಂಥ ಟೀಕೆಗಳಿಂದ ಪಾರಾಗಲು ಕೆಡಿಪಿ ಸಮಿತಿ ಸದಸ್ಯರಾಗಿ ಅವರನ್ನು ನೇಮಿಸಿ, ವಿಶೇಷ ಅಧಿಕಾರ ನೀಡುವ ಯತ್ನ ಮುಖ್ಯಮಂತ್ರಿ ಸೂಚನೆ ಮೇರೆಗೆ ನಡೆದಿದೆ’ ಎಂದು ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.