ADVERTISEMENT

ಕೆಪಿಎಸ್‌ಸಿ ಆಯ್ಕೆ ಪಟ್ಟಿಗೆ ಕೆಎಟಿ ತಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದ್ದ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ (ಎ ಮತ್ತು ಬಿ ವೃಂದ) ಅಂತಿಮ ಆಯ್ಕೆ ಪಟ್ಟಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಎರಡು ತಿಂಗಳ ಅವಧಿಗೆ ತಡೆಯಾಜ್ಞೆ ನೀಡಿದೆ.

ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಡಾ.ಎಚ್‌.ಪಿ.ಎಸ್‌. ಮೈತ್ರಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ಪೀಠ, ‘ಅಂತಿಮ ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡಲು ಸೂಕ್ತವಾದ ಆಧಾರಗಳು ಈ ಪ್ರಕರಣದಲ್ಲಿವೆ. ಮಾರ್ಚ್‌ 21ರಂದು ಪ್ರಕಟಿಸಲಾದ ಅಂತಿಮ ಆಯ್ಕೆ ಪಟ್ಟಿಗೆ ಎರಡು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ತಡೆಯಾಜ್ಞೆ ನೀಡಲಾಗಿದೆ’ ಎಂದು ಬುಧವಾರ ಆದೇಶಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಉದಯ ಹೊಳ್ಳ, ‘ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ನಂತರ, ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತು. 2013ರ ಸೆಪ್ಟೆಂಬರ್‌ 10ರಂದು ಸಿಐಡಿ ವರದಿ ಸಲ್ಲಿಸಿದೆ. ಆಯೋಗ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅದನ್ನು ಪರಿಗಣಿಸಿಲ್ಲ’ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಆಯೋಗದ ಪರವಾಗಿ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್‌. ರಾಜಗೋಪಾಲ್‌, ‘ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡುವ ಸಂದರ್ಭ ಎದುರಾಗಿಲ್ಲ. ಅಂತಿಮ ಆಯ್ಕೆ ಪಟ್ಟಿ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳದೇ ಇರುವ ಕಾರಣ  ತಡೆಯಾಜ್ಞೆ ನೀಡಬೇಕೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದರು.

ಆದೇಶದಲ್ಲೇನಿದೆ?: ಕೆಪಿಎಸ್‌ಸಿ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸರ್ಕಾರದ ಸೂಚನೆ ಮೇರೆಗೆ 2013ರ ಜೂನ್‌ನಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಯಿತು.

ಆರೋಪಗಳ ಕುರಿತು ತನಿಖೆ ನಡೆಸಿದ ಸಿಐಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದೆ. ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಪ್ಪೆಸಗಲಾಗಿದೆ ಎಂಬುದನ್ನು ಸಿಐಡಿ ವರದಿ ಉಲ್ಲೇಖಿಸಿದೆ.

ಈ ವರದಿಯನ್ನು ಅಂಗೀಕರಿಸಿದ ಸರ್ಕಾರ, ಸಂದರ್ಶನ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ಆದೇಶಿಸಿದೆ. ಆದರೂ, ಆಯೋಗವು ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ ಎಂದು ಕೆಎಟಿಯ ಮಧ್ಯಾಂತರ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಮಧ್ಯಾಂತರ ತಡೆಯಾಜ್ಞೆ ನೀಡಲು ಇದು ಸೂಕ್ತವಾದ ಪ್ರಕರಣ ಎಂದು ಕೆಎಟಿ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.