ADVERTISEMENT

ಕೆರೆಗಳಿಗೆ ನೀರು ಹರಿಸುವುದೇ ನನ್ನ ಗುರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 20:12 IST
Last Updated 16 ಏಪ್ರಿಲ್ 2017, 20:12 IST
ಕೆರೆಗಳಿಗೆ ನೀರು ಹರಿಸುವುದೇ ನನ್ನ ಗುರಿ
ಕೆರೆಗಳಿಗೆ ನೀರು ಹರಿಸುವುದೇ ನನ್ನ ಗುರಿ   

ಕೋಲಾರ: ‘ನಾನು ವಚನ ಭ್ರಷ್ಟನಾಗುವುದಿಲ್ಲ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು ಎಂಬುದೇ ನನ್ನ ಗುರಿ’ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದರು.

ತಾಲ್ಲೂಕಿನ ನರಸಾಪುರ ಕೆರೆಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಅವಿಭಜಿತ ಕೋಲಾರ ಜಿಲ್ಲೆಯ ಕೆರೆಗಳಿಗೆ ಆಗಸ್ಟ್‌ 15ಕ್ಕೆ ಆಗದಿದ್ದರೂ ನವೆಂಬರ್‌ ವೇಳೆಗೆ ನೀರು ಹರಿಸುವುದು ಖಚಿತ’ ಎಂದರು.

‘ಇನ್ನು ಒಂದೂವರೆ ವರ್ಷದಲ್ಲಿ ಎತ್ತಿನ ಹೊಳೆಯ ಯೋಜನೆಯಿಂದ ನೀರು ಬರುವ ನಿರೀಕ್ಷೆಯಿದೆ. ಬೈರಗೊಂಡ್ಲು ಬಳಿ ಖಾಸಗಿಯವರಿಂದ ಜಮೀನು ಖರೀದಿಸಿ ಸ್ವಾಧೀನಕ್ಕೆ ಪಡೆದ ನಂತರ ಕಾಮಗಾರಿ ನಡೆಯಲಿದೆ. ತುಮಕೂರು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

‘ಕೆಸಿ ವ್ಯಾಲಿಯಲ್ಲಿ 440 ಎಂಎಲ್‌ಡಿ ನೀರು ಹರಿಯುತ್ತದೆ. ಯಾವುದೇ ಅನುಮಾನ ಬೇಡ. ಇದು ಜಿಲ್ಲೆಯ ಜನರಲ್ಲಿ ನಂಬಿಕೆ ಮೂಡಿಸುವ ಯೋಜನೆಯಾಗಿದೆ. ನಾನು ವಚನಭ್ರಷ್ಟನಲ್ಲ. ಯೋಜನೆ ಪೂರ್ಣಗೊಳಿಸುವ ಕುರಿತಾಗಿ ಸರ್ಕಾರದಿಂದ ನನಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ತ್ರಿಲೋಕಚಂದ್ರ ಮಾತನಾಡಿ, ‘ಮೊದಲ ಹಂತದಲ್ಲಿ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ. ನಗರ ಸಮೀಪದ ಕೋಡಿಕಣ್ಣೂರು ಮತ್ತು ಕೋಲಾರಮ್ಮ ಕೆರೆಗಳನ್ನು ಪುನಶ್ಚೇತನಗೊಳಿಸಲು ಮೆಘಾ ಕಂಪೆನಿಯವರು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.