ADVERTISEMENT

ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:53 IST
Last Updated 29 ಏಪ್ರಿಲ್ 2017, 19:53 IST

ಹುಬ್ಬಳ್ಳಿ: ‘ರಾಜ್ಯದಲ್ಲಿರುವ ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಒತ್ತಾಯಿಸಿದರು.

‘ಕೇರಳದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಾಗಲೇ ಮಲಯಾಳಂ ಅನ್ನು ಒಂದು ಭಾಷೆಯಾಗಿ ಬೋಧಿಸಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಮಾಡಬೇಕು’ ಎಂದು ಅವರು ಆಗ್ರಹಪಡಿಸಿದರು.

ಕರ್ನಾಟಕ ಏಕೀಕರಣ ಹೋರಾಟದ ವಜ್ರಮಹೋತ್ಸವದ ಅಂಗವಾಗಿ, ಪಾಟೀಲ ಪುಟ್ಟಪ್ಪ ಅವರನ್ನು ಇಲ್ಲಿಯ ಅಶೋಕ ನಗರದ  ನಿವಾಸದಲ್ಲಿ ಶನಿವಾರ ಸನ್ಮಾನಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

‘ಕೇಂದ್ರ ಸರ್ಕಾರ ಹಿಂದಿಯನ್ನು ಕಡ್ಡಾಯಗೊಳಿಸುತ್ತಿರುವ ಕ್ರಮ ಸರಿಯಲ್ಲ. ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಇಲ್ಲದಿದ್ದರೆ, ತೀವ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ’ ಎಂದು ಅವರು ಎಚ್ಚರಿಸಿದರು.

‘ಹೊರನಾಡ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ. ಹೊರನಾಡ ಕನ್ನಡಿಗರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಕುಂ. ವೀರಭದ್ರಪ್ಪ ನೇತೃತ್ವದ ಸಮಿತಿ ಈಗಾಗಲೇ ವರದಿ ಸಲ್ಲಿಸಿದ್ದು, ಇದರಲ್ಲಿ ಪ್ರಸ್ತಾಪಿಸಿರುವ ಕೆಲವು ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.