ADVERTISEMENT

ಕೊಡಗಿನಲ್ಲಿ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2016, 19:30 IST
Last Updated 9 ಜೂನ್ 2016, 19:30 IST
ಹಾವೇರಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜಲಾವೃತಗೊಂಡಿದ್ದ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗುತ್ತಿದ್ದ ಶಾಲಾ ಮಕ್ಕಳಿದ್ದ ಆಟೊ ರಿಕ್ಷಾ.
ಹಾವೇರಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜಲಾವೃತಗೊಂಡಿದ್ದ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗುತ್ತಿದ್ದ ಶಾಲಾ ಮಕ್ಕಳಿದ್ದ ಆಟೊ ರಿಕ್ಷಾ.   

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಗುರುವಾರ ಸಹ ಮಳೆ ಮುಂದುವರಿದಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕಿನ ಬಹುತೇಕ ಕಡೆ ಉತ್ತಮ ಮಳೆ ಸುರಿದಿದೆ. ತಲಕಾವೇರಿ, ನಾಪೋಕ್ಲು, ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಮಳೆ ಸುರಿಯಿತು.

ಕರಾವಳಿ, ಮಲೆನಾಡಿನಲ್ಲಿ ಮಳೆ: ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ ಹಾಗೂ ಕಡೂರು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಕೊಟ್ಟಿಗೆಹಾರ, ಭೈರಾಪುರ, ಗುತ್ತಿ, ದೇವವೃಂದ, ಬೆಟ್ಟದಮನೆ, ಹೊಸಕೆರೆ, ಬಾಳೂರು, ಬಣಕಲ್‌, ಕಳಸ ಭಾಗದಲ್ಲೂ ಕಳೆದ ರಾತ್ರಿಯಿಂದಲೂ ಜೋರು ಮಳೆ ಸುರಿಯುತ್ತಿದೆ. ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದ ಬಿಟ್ಟು ಬಿಟ್ಟು ತುಂತುರು ಮಳೆಯಾಗುತ್ತಿದೆ.

ಬಾಗಲಕೋಟೆಯಲ್ಲಿ ಭಾರಿ ಮಳೆ: ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ. ಬಾಗಲಕೋಟೆ ನಗರ ಮತ್ತು ಬಾದಾಮಿಯಲ್ಲಿ ಗುರುವಾರ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಭಸದ ಮಳೆಯಾಗಿದೆ.

ಬೆಳಗಾವಿ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು ಅರ್ಧ ತಾಸು, ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಭಸದ ಮಳೆಯಾಗಿದೆ. ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಕಾರವಾರದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಸಂಜೆವರೆಗೂ ಎಡೆಬಿಡದೇ ಸುರಿಯಿತು.

ಶಿರಸಿಯಲ್ಲಿ ಮಧ್ಯಾಹ್ನ 2 ತಾಸಿಗೂ ಅಧಿಕ ಕಾಲ ಮಳೆ ಸುರಿದಿದೆ. ಸಿದ್ದಾಪುರ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮಾಣಿಹೊಳೆ ಸೇತುವೆಯ ಪಕ್ಕದ ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿ ಧಕ್ಕೆಗೀಡಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಸಾಧಾರಣ ಮಳೆ: ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಗುರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ತುಂತುರು ಮಳೆಯಾಗಿದೆ. ಹೊಳಲ್ಕೆರೆ, ಧರ್ಮಪುರ, ನಾಯಕನಹಟ್ಟಿ, ತುರುವನೂರು, ಚಿಕ್ಕಜಾಜೂರು, ಭರಮಸಾಗರ ಭಾಗದಲ್ಲಿ ಸೋನೆಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲ್ಲೂಕುಗಳಲ್ಲಿ ಸಾಧಾರಣ, ದಾವಣಗೆರೆ ನಗರ ಮತ್ತು ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.