ADVERTISEMENT

ಕೊನೆಗೂ ‘ಕಿಂಗ್‌ಪಿನ್’ ಸೆರೆ

ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ: ಸಿಕ್ಕಿಬಿದ್ದ ಶಿವಕುಮಾರಯ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2016, 5:09 IST
Last Updated 4 ಮೇ 2016, 5:09 IST
ಕೊನೆಗೂ ‘ಕಿಂಗ್‌ಪಿನ್’ ಸೆರೆ
ಕೊನೆಗೂ ‘ಕಿಂಗ್‌ಪಿನ್’ ಸೆರೆ   

ಬೆಂಗಳೂರು: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಶಿವಕುಮಾರಯ್ಯ ಅಲಿಯಾಸ್ ಗುರೂಜಿ (66) ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಭೂಗತನಾಗಿದ್ದ ಶಿವಕುಮಾರಯ್ಯ, ಬೆಂಗಳೂರು, ಕೋಲಾರ, ಮಾಲೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ಸುತ್ತಾಡುತ್ತಿದ್ದ. ಕೊನೆಗೆ ಹೊಂಗಸಂದ್ರಕ್ಕೆ ಬಂದು ಒಂದು ವಾರದಿಂದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ತಂಗಿದ್ದ.

‘ಆತನ ಪ್ರೇಯಸಿ ನೀಡಿದ ಸುಳಿವಿನಿಂದಲೇ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಯಿಂದ ₹ 50 ಸಾವಿರ ನಗದು, ವಿಸ್ಕಿ ಬಾಟಲಿಗಳು, ಎರಡು ಸಿಮ್‌ ಕಾರ್ಡ್‌ ಹಾಗೂ ಬ್ಯಾಗ್ ಜಪ್ತಿ ಮಾಡಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರಂತರ ನಿಗಾ: ‘ನಂದಿನಿ ಲೇಔಟ್‌ನಲ್ಲಿರುವ ತನ್ನ ಮನೆಗೆ ಬೀಗ ಜಡಿದು ಪರಾರಿಯಾದ ಶಿವಕುಮಾರಯ್ಯ, ಹೊಸಕೆರೆ ಹಳ್ಳಿಯಲ್ಲಿರುವ ಸ್ನೇಹಿತನ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಉಳಿದುಕೊಂಡಿದ್ದ  ಎನ್ನಲಾಗಿದೆ.

‘ಎರಡು ದಿನಗಳ ಬಳಿಕ ಮತ್ತೆ ಕೋಲಾರಕ್ಕೆ ವಾಸ್ತವ್ಯ ಬದಲಿಸಿದ್ದ. ಆತನಿಗೆ ಆಶ್ರಯ ನೀಡಿದ್ದವರು, ಬಂಧಿತ 11 ಆರೋಪಿಗಳು, ಪ್ರೇಯಸಿಯರು ನೀಡಿದ ಮಾಹಿತಿ ಆಧರಿಸಿ ಆತನ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲಾಗಿತ್ತು’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಟೊಮಾಟೊ’ ಕೋಡ್‌ವರ್ಡ್:  ಶಿವಕುಮಾರಯ್ಯ ಹಾಗೂ ಆತನ ಸಹಚರರು ರಹಸ್ಯ ಪದಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತಿದ್ದರು. ಅದಕ್ಕೆ ಕಿಂಗ್‌ಪಿನ್ ಇಟ್ಟಿದ್ದ ಹೆಸರು ‘ಟೊಮಾಟೊ– ₹ 150’!

‘ಶಿವಕುಮಾರಯ್ಯ ಮೊಬೈಲ್ ಇಟ್ಟುಕೊಂಡಿರಲಿಲ್ಲ. ಆದರೆ, ತನ್ನ ಎಲ್ಲ ಪ್ರೇಯಸಿಯರಿಗೂ ಸ್ಮಾರ್ಟ್‌ಫೋನ್ ಕೊಡಿಸಿದ್ದ ಆತ, ಜಾಲದ ಸದಸ್ಯರ ಜತೆ ಸಂಪರ್ಕಕ್ಕೆ ಆ ಫೋನ್‌ಗಳನ್ನು ಬಳಸುತ್ತಿದ್ದ.’

‘ಯಾರಿಗಾದರೂ ಕರೆ ಮಾಡಿದ ಕೂಡಲೇ ಈತ ಟೊಮಾಟೊ ಎನ್ನುತ್ತಿದ್ದ. ಆ ಕಡೆಯಿಂದ ಕೆ.ಜಿಗೆ 150 ರೂಪಾಯಿ ಎಂಬ ಉತ್ತರ ಬಂದರೆ ಮಾತ್ರ ಮಾತು ಮುಂದುವರಿಸುತ್ತಿದ್ದ. ಇಲ್ಲದಿದ್ದರೆ ತಕ್ಷಣ ಕರೆ ಸ್ಥಗಿತಗೊಳಿಸಿ ಪ್ರೇಯಸಿಗೆ ಮೊಬೈಲ್ ವಾಪಸ್ ಕೊಟ್ಟು ಕಳುಹಿಸುತ್ತಿದ್ದ. ಆತನ ಸಹಚರರು
ಸಹ  ಇದೇ ಕೋಡ್‌ ವರ್ಡ್‌ ಬಳಸುತ್ತಿದ್ದರು.’

‘ಶಿವಕುಮಾರಯ್ಯ ಊರಿನಲ್ಲಿರುವ ತನ್ನ 12 ಎಕರೆ ಜಮೀನಿನಲ್ಲಿ ಮೊದಲು ಟೊಮಾಟೊ ಬೆಳೆಯುತ್ತಿದ್ದ. ಈ ಕಾರಣದಿಂದ ಅದೇ ಬೆಳೆಯನ್ನು ಕೋಡ್ ವರ್ಡ್‌ ಆಗಿ ಇಟ್ಟುಕೊಂಡಿರಬಹುದು’ ಎಂದು ತನಿಖಾಧಿಕಾರಿಗಳು ಹೇಳಿದರು.

10 ದಿನ ಪೊಲೀಸ್‌ ಕಸ್ಟಡಿ: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ  ಎಲ್ಲ ಆರೋಪಿಗಳ ವಿರುದ್ಧವೂ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಕಿಂಗ್‌ಪಿನ್‌ ಶಿವಕುಮಾರಯ್ಯನನ್ನು 10 ದಿನ ಪೊಲೀಸರ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

‘ಮಾರ್ಚ್ 21 ಹಾಗೂ 31ರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಶಿವಕುಮಾರಯ್ಯ, ನಂತರ ಸಿಇಟಿ ಪ್ರಶ್ನೆಪತ್ರಿಕೆಗಳನ್ನೂ ಬಯಲು ಮಾಡಲು ಸಂಚು ರೂಪಿಸಿಕೊಂಡಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

35 ಖಜಾನೆಗಳಿಂದ ಪತ್ರಿಕೆ ಎತ್ತಬಲ್ಲ!: ‘ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸಂಗ್ರಹಕ್ಕೆ 187 ಖಜಾನೆಗಳಿದ್ದು, ಅದರಲ್ಲಿ ಸುಮಾರು 35 ಖಜಾನೆಗಳಿಂದ ಪ್ರಶ್ನೆಪತ್ರಿಕೆ ಎತ್ತುವ ತಾಕತ್ತು ಶಿವಕುಮಾರಯ್ಯನಿಗಿದೆ. ಈವರೆಗಿನ ತನಿಖೆ ಪ್ರಕಾರ ಮಾಲೂರು, ತುಮಕೂರು, ಹುಬ್ಬಳ್ಳಿ ಅಥವಾ ಹಾವೇರಿ ಖಜಾನೆಯಿಂದ ಪ್ರಶ್ನೆಪತ್ರಿಕೆ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

30ಕ್ಕೂ ಹೆಚ್ಚು ಪ್ರೇಯಸಿಯರು
‘ಶಿವಕುಮಾರಯ್ಯನಿಗೆ ಬೆಂಗಳೂರು, ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ 16 ರಿಂದ 40 ವರ್ಷ ವಯೋಮಾನದ 30ಕ್ಕೂ ಅಧಿಕ ಪ್ರೇಯಸಿಯರಿದ್ದಾರೆ. ಕೆಲ ದಿನಗಳ ಹಿಂದೆ 35 ವರ್ಷದ ಮಹಿಳೆಯನ್ನು ತನ್ನೂರಾದ ಗುಬ್ಬಿ ತಾಲ್ಲೂಕಿನ ಕಗ್ಗೆರೆ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಆತ, ಈಕೆ ನನ್ನ ಹೆಂಡತಿ ಎಂದು ಪರಿಚಯಿಸಿದ್ದ.’

‘ಮೊಬೈಲ್ ಬಳಸದ ಕಾರಣ ಶಿವಕುಮಾರಯ್ಯನ ಬಂಧನ ಕಷ್ಟವಾಗಿತ್ತು. ಆದರೆ, ಆತ ಆ ಮಹಿಳೆ ಜತೆ ಸಂಪರ್ಕದಲ್ಲಿರುವ ವಿಷಯ ಬಂಧಿತರ ವಿಚಾರಣೆಯಿಂದ ತಿಳಿಯಿತು. ನಂತರ ಆ ಮಹಿಳೆಯ ಮೊಬೈಲ್‌ ಕರೆ ವಿವರಗಳ (ಸಿಡಿಆರ್) ಮೇಲೆ ನಿಗಾ ಇಡಲಾಯಿತು. ಆಕೆಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಶಿವಕುಮಾರಯ್ಯ ತನ್ನನ್ನು ಹೊಂಗಸಂದ್ರ ಸಮೀಪದ ಕಟ್ಟಡದ ಬಳಿ ಬರುವಂತೆ ಹೇಳಿರುವುದಾಗಿ ಬಾಯ್ಬಿಟ್ಟಳು. ಅದರಂತೆ ಆ ಕಟ್ಟಡದ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಗುರೂಜಿ’ ಎಂದೇ ಖ್ಯಾತಿ !
ಕಾಟನ್‌ಪೇಟೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಸ್ವಯಂ ನಿವೃತ್ತಿ ಪಡೆದಿದ್ದ ಶಿವಕುಮಾರಯ್ಯ, ನಂದಿನಿ ಲೇಔಟ್‌ನ ತನ್ನ ಮನೆಯಲ್ಲಿ ಸಂಗೀತ ಹಾಗೂ ಯೋಗ ತರಬೇತಿ ನೀಡುತ್ತಿದ್ದ. ಹೀಗಾಗಿ ಸ್ಥಳೀಯರು ಆತನನ್ನು ‘ಗುರೂಜಿ’ ಎಂದೇ ಕರೆಯುತ್ತಿದ್ದರು.

‘ಆತನ ಮನೆ ಮೇಲೆ ದಾಳಿ ಮಾಡಿದಾಗ ವೀಣೆ, ಮೃದಂಗ, ತಬಲ, ಪಿಟೀಲು, ಪಿಯಾನೊ ಮತ್ತಿತರ ಸಂಗೀತ ಉಪಕರಣಗಳು ಪತ್ತೆಯಾಗಿದ್ದವು. ಬೆಳಿಗ್ಗೆ ಎದ್ದ ಕೂಡಲೇ ಹಾಡುವ ಹವ್ಯಾಸ ಹೊಂದಿದ್ದ ಆತ, ಸಂಜೆ ವೇಳೆ 40ಕ್ಕೂ ಹೆಚ್ಚು ಮಂದಿಗೆ  ಸಂಗೀತ ಹೇಳಿಕೊಡುತ್ತಿದ್ದ. ಈ ನಡುವೆ ಯೋಗ ತರಬೇತಿಯನ್ನೂ ಪ್ರಾರಂಭಿಸಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಆತ ವಾರಕ್ಕೊಮ್ಮೆ ಮನೆಗೆಲಸದಾಕೆಯನ್ನು ಬದಲಾಯಿಸುತ್ತಿದ್ದ. ಪತಿಯಿಂದ ಪ್ರತ್ಯೇಕವಾಗಿರುವ ಮಧ್ಯಮ ವರ್ಗದ ಮಹಿಳೆಯರನ್ನು ಗುರುತಿಸುತ್ತಿದ್ದ ಶಿವಕುಮಾರಯ್ಯ, ಹಣದ ಆಮಿಷ ಒಡ್ಡಿ ಅವರನ್ನು ಕೆಲಸಕ್ಕಿಟ್ಟುಕೊಳ್ಳುತ್ತಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ ಆತ, ಮನೆಯಲ್ಲಿ ವಿದೇಶಿ ಮದ್ಯಗಳ ನೂರಾರು ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದ’ ಎಂದು ಮಾಹಿತಿ ನೀಡಿದರು.

ಕಿಂಗ್‌ಪಿನ್ ಆಗಿದ್ದು ಹೇಗೆ?
‘ನಕಲಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಅಪರಾಧ ಕೃತ್ಯಗಳನ್ನು ಪ್ರಾರಂಭಿಸಿದ ಈತ, ಮಗ ದಿನೇಶ್ ಹಾಗೂ ಅಣ್ಣನ ಮಗ ಕಿರಣ್ ಜತೆ ಸೇರಿಕೊಂಡು ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡ. ಕ್ರಮೇಣ ಶಿಕ್ಷಕರನ್ನೇ ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಆದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಹಣ ಕೊಡುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬರುವಂತೆ ಮಾಡುವುದರ ಜತೆಗೆ, ಪ್ರತಿಷ್ಠಿತ ಕಾಲೇಜುಗಳಲ್ಲಿ ಅವರಿಗೆ ಪ್ರವೇಶ ಕೊಡಿಸುವವರೆಗೂ ಈತನ ಜಾಲ ಕೆಲಸ ಮಾಡಲಾರಂಭಿಸಿತು.’

‘ಅವ್ಯವಹಾರದಿಂದ ಗಳಿಸಿದ ಹಣದಲ್ಲಿ ನಂದಿನಿ ಲೇಔಟ್‌ ಬಳಿ ದೊಡ್ಡ ಮನೆ ಕಟ್ಟಿಸಿರುವ ಈತ, ಐದು ಐಷಾರಾಮಿ ಕಾರುಗಳನ್ನು ಹೊಂದಿದ್ದಾನೆ. ಅಲ್ಲದೆ, ಅಕ್ರಮ ಚಟುವಟಿಕೆಗಳಿಗಾಗಿಯೇ ರಾಜ್ಯದಾದ್ಯಂತ 12 ಟ್ಯುಟೋರಿಯಲ್‌ಗಳನ್ನು ತೆರೆದಿದ್ದು, ತುಮಕೂರಿನಲ್ಲಿ ಸ್ವಂತ ಫಾರ್ಮ್‌ಹೌಸ್ ಹೊಂದಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆತ್ತಲಾಗಿ ಮಲಗಿದ್ದ
‘ಸೋಮವಾರ ರಾತ್ರಿ ಕಟ್ಟಡದ ಮೇಲೆ ದಾಳಿ ನಡೆಸಿದಾಗ ಶಿವಕುಮಾರಯ್ಯ ಬೆತ್ತಲಾಗಿ ಮಲಗಿದ್ದ. ಪಾನಮತ್ತನಾಗಿದ್ದ ಆತ, ನೀವೆಲ್ಲ ಯಾರು? ಏಕೆ ಬಂಧಿಸುತ್ತಿದ್ದೀರಿ? ಎಂದೆಲ್ಲ ಪ್ರಶ್ನಿಸಿದ. ಕೊನೆಗೆ ಬಟ್ಟೆ ತೊಡಿಸಿ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಯಿತು. ಆದರೆ, ಆತ ಯಾವುದೇ ಮಾಹಿತಿ ನೀಡಲಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಗೂ ತನಗೂ ಸಂಬಂಧ ವಿಲ್ಲವೆಂದು ಅಳತೊಡಗಿದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

* ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ 40 ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಶಿವಕುಮಾರಯ್ಯನನ್ನು ಪತ್ತೆ ಮಾಡಿದೆ. ಆತನ ಮಗ ದಿನೇಶ್, ಅಣ್ಣನ ಮಗ ಕಿರಣ್ ಅಲಿಯಾಸ್ ಕುಮಾರಸ್ವಾಮಿಗಾಗಿ  ಶೋಧ ನಡೆಯುತ್ತಿದೆ

ಕಿಶೋರ್‌ಚಂದ್ರ
ಡಿಜಿಪಿ, ಸಿಐಡಿ

ಮುಖ್ಯಾಂಶಗಳು
* ಪ್ರೇಯಸಿ ನೀಡಿದ ಸುಳಿವು
* ಹೊಂಗಸಂದ್ರದ ಕಟ್ಟಡದಲ್ಲಿದ್ದ
* ರಹಸ್ಯ ಪದಗಳಿಂದ ಸಂವಹನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.