ADVERTISEMENT

ಕೋಲಾರದ ಜನ ಸತ್ತಿದ್ದಾರೆಯೇ?

ಸರ್ಕಾರಕ್ಕೆ ನೀರಿಳಿಸಿದ ಕಾಂಗ್ರೆಸ್‌ ಶಾಸಕ ರಮೇಶಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ‘ರಾಜ್ಯದ ಬರಪೀಡಿತ ಜಿಲ್ಲೆಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸುವಾಗ ನಮ್ಮ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ನಿಮಗೆ ನೆನಪೇ ಆಗಲಿಲ್ಲವೆ? ನಾವೆಲ್ಲ ಸತ್ತಿದ್ದೇವೆ ಎಂದುಕೊಂಡಿದ್ದೀರಾ? ಹೌದು ಸ್ವಾಮಿ, ನಿಮ್ಮನ್ನು ಇನ್ನು ದೂರಲ್ಲ; ನಮ್ಮ ನೋವನ್ನು ನಾವೇ ಅನುಭವಿಸುತ್ತೇವೆ. ಮೂರನೇ ಮಹಡಿಯಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಿ’ ರಾಜ್ಯ ಸರ್ಕಾರವನ್ನು ವಿಧಾನಸಭೆಯಲ್ಲಿ ಶುಕ್ರವಾರ ಹೀಗೆ ತರಾಟೆಗೆ ತೆಗೆದುಕೊಂಡಿದ್ದು ಸ್ವತಃ ಆಡಳಿತ (ಕಾಂಗ್ರೆಸ್‌) ಪಕ್ಷದ ಶಾಸಕ ಕೆ.ಆರ್‌. ರಮೇಶಕುಮಾರ್‌.

‘ಬೇರೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆರೆಗಳಿಗೆ ನೀರು ಹರಿಸುತ್ತಾರೆ. ನಮ್ಮಿಂದ ಆ ಕೆಲಸ ಅಸಾಧ್ಯ ಆಗಿದ್ದಕ್ಕೆ ಜನ ಉಗಿಯುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಮಗೊಂದು ಡೋಲು ಮತ್ತು ನಾಗಸ್ವರ ಕೊಡಿಸಿ ಪುಣ್ಯ ಕಟ್ಟಿಕೊಳ್ಳಬೇಕು. ಬೇರೆ ಕ್ಷೇತ್ರಗಳ ಶಾಸಕರಿಗೆ ಸನ್ಮಾನ ಮಾಡುವಾಗ ಡೋಲು ಬಾರಿಸುತ್ತಾ ನಾವೂ ಸಂತೋಷ ಅನುಭವಿಸುತ್ತೇವೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ನ್ಯಾಯ ಹಾಗೂ ತೀರ್ಪು ಎರಡೂ ಬೇರೆ ಬೇರೆ. ತೀರ್ಪು ಇದ್ದಲ್ಲಿ ನ್ಯಾಯ ಇರಲ್ಲ. ಆದರೆ, ದೇಶದಲ್ಲಿ ತೀರ್ಪಿಗೆ ಮಾತ್ರ ಮಾನ್ಯತೆಯಿದೆ. ಇದೇ ಕಾರಣದಿಂದ ಸಾಮಾಜಿಕ ನ್ಯಾಯ ಎನ್ನುವುದು ಸಂವಿಧಾನದ ಆಶಯವಾಗಿ ಮಾತ್ರ ಉಳಿದಿದೆ’ ಎಂದು ವಿಶ್ಲೇಷಿಸಿದರು.
‘ಬಡವರಿಗೆ, ಕೃಷಿಕರಿಗೆ ಸಾಲ ನೀಡಲು ಅವರ ಆಸ್ತಿಯನ್ನೇ ಅಡಮಾನ ಇಟ್ಟುಕೊಳ್ಳಲಾಗುತ್ತದೆ. ದೊಡ್ಡ ಜನ ಇಂತಹ ಕಿರಿಕಿರಿಯಿಲ್ಲದೆ ಸಾಲ ಪಡೆಯುತ್ತಾರೆ. ಹಾಗೆ ಸಾಲ ಪಡೆದವರು ಬ್ಯಾಂಕ್‌ಗೆ ವಾಪಸ್‌ ಪಾವತಿ ಮಾಡುವುದಿಲ್ಲ. ದೇಶದಲ್ಲಿ ಹೀಗೆ ಶ್ರೀಮಂತರು ಮರಳಿ ಪಾವತಿಸದ ಸಾಲದ ಪ್ರಮಾಣವೇ₹ 4.95 ಲಕ್ಷ ಕೋಟಿಯಷ್ಟಿದೆ’ ಎಂದು ವಿವರಿಸಿದರು.

‘ಕಪ್ಪು ಹಣದ ರಹದಾರಿಗಳು ಎಲ್ಲಿಂದ ಎಲ್ಲಿಯೋ ಚಾಚಿರುತ್ತವೆ. ಅದರಿಂದ ಬೆಳೆಯುವ ಸಮಾನಾಂತರ ಅರ್ಥವ್ಯವಸ್ಥೆ ಚುನಾವಣೆಗೂ ಹಣ ಹರಿಸುತ್ತದೆ. ಬಡವನ ಉದ್ಧಾರ ಇಲ್ಲಿ ಯಾರಿಗೆ ಬೇಕಿದೆ’ ಎಂದು ಕೇಳಿದರು. ‘ಸಹಕಾರಿ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಇದುವರೆಗೆ ಸಾಲ ಸಿಕ್ಕಿರುವುದು ಶೇ 6.5 ಜನರಿಗೆ ಮಾತ್ರ. ಉಳಿದವರಿಗೆ ಖಾಸಗಿ ಸಾಲವೇ ಗತಿ. ಮೀಟರ್‌ ಬಡ್ಡಿಯ ತಾಂಡವ ನೃತ್ಯವನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿದರು.

‘ಬಡವರ ಸಣ್ಣ–ಪುಟ್ಟ ಚಿನ್ನಾಭರಣ ಅಡವು ಇಟ್ಟುಕೊಂಡ ಸಂಸ್ಥೆಯೊಂದು ಹರಾಜಿಗೆ ಹಾಕಿದಾಗ ಅದು ಸಾವಿರ ಕೆ.ಜಿಯಷ್ಟು ಆಗಿತ್ತು. ಅದು ಆಭರಣಗಳ ಹರಾಜಲ್ಲ, ನಮ್ಮ ತಾಯಿ, ಅಕ್ಕ–ತಂಗಿಯರ ಮಾನದ ಹರಾಜು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಕೃಷಿ ಬೆಲೆ ಆಯೋಗದಿಂದ ರೈತರಿಗೆ ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಕೃಷಿ ಇಲಾಖೆಗೆ ನೀಡಿದ್ದ ಅನುದಾನದಲ್ಲಿ ಕಳೆದ ಐದು ವರ್ಷಗಳಿಂದ ಉಳಿಕೆ ಆಗುತ್ತಲೇ ಇದೆ.

ಈ ಸಲವೂ ನೀವು ಕೇಳಿದ ಮೊತ್ತಕ್ಕೆ ಯಾಕೆ ಮಂಜೂರಾತಿ ಕೊಡಬೇಕು’ ಎಂದು ಪ್ರಶ್ನಿಸಿದರು. ‘ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತರಲು ನಮ್ಮ ಸಮಿತಿ ಶಿಫಾರಸು ಮಾಡಿತ್ತು. ಇದುವರೆಗೆ ಅದರ ಕಡೆಗೆ ಗಮನಹರಿಸಿಲ್ಲ. ಏಕೆ, ತಾವೇನಾದರೂ ಮೂಲಭೂತವಾಗಿ ಬದಲಾಗಿದ್ದೀರಾ ಮುಖ್ಯಮಂತ್ರಿಯವರೇ’ ಎಂದು ಅವರು ಕೆಣಕಿದರು.

‘ಕೆಲವು ಕ್ಷೇತ್ರಗಳಲ್ಲಿ ಮುಖ್ಯ ಮಂತ್ರಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಮುಂದೆ ನಡೆಸಲಿರುವ ಕಸರತ್ತು ಮನದಲ್ಲಿಟ್ಟುಕೊಂಡು ನಾನೇನು ಬೆಣ್ಣೆ ಸವರುತ್ತಿಲ್ಲ’ ಎಂದು ರಮೇಶ್‌ ಕುಮಾರ್‌  ಹೇಳಿದರು.

ಬೃಹತ್‌ ನೀರಾವರಿ ಯೋಜನೆ ಎನ್ನುತ್ತೇವೆ. ಹನಿ ನೀರೂ ಹರಿಸುವುದಿಲ್ಲ. ಆತ್ಮ ವಂಚನೆ ಎಂದರೆ ಇದಲ್ಲವೆ?
- ಕೆ.ಆರ್‌. ರಮೇಶಕುಮಾರ್‌ ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.