ADVERTISEMENT

ಗಿರಿಜನ ಮಹಿಳೆ ಮೇಲೆ ಕರಡಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 20:09 IST
Last Updated 24 ಏಪ್ರಿಲ್ 2015, 20:09 IST

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮವೊಂದರ ಜಮೀನಿನಲ್ಲಿ ಕರಡಿ ದಾಳಿ ನಡೆಸಿದ ಪರಿಣಾಮ ಗಿರಿಜನ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ತಾಲ್ಲೂಕಿನ ಕಾಡಂಚಿನ ಮೂಕಹಳ್ಳಿ ಕಾಲೊನಿಯ ಗಿರಿಜನ ಜನಾಂಗದ ಮಂಜಯ್ಯ ಎಂಬುವವರ ಪತ್ನಿ ವೆಂಕಟಮ್ಮ ಕರಡಿ ದಾಳಿಗೊಳಗಾದ ಮಹಿಳೆ.

ವೆಂಕಟಮ್ಮ ಅವರು ಇತರ ಮೂವರು ಕೂಲಿಯಾಳುಗಳೊಂದಿಗೆ ಅದೇ ಗ್ರಾಮದ ಕೆಲಸೂರುಪುರ ರಾಜಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮೆಣಸಿನಕಾಯಿ ಬಿಡಿಸುವಾಗ ಪೊದೆಯಲ್ಲಿದ್ದ ಕರಡಿ ದಿಢೀರ್‌ ದಾಳಿ ನಡೆಸಿತು. ಈ ವೇಳೆ ಮಹಿಳೆಯ ಪಕ್ಕೆಲುಬಿಗೆ ತೀವ್ರ ಗಾಯಗಳಾಗಿದ್ದು, ಕರುಳಿನ ಭಾಗ ಹೊರಬಂದು ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರ ಕಿರುಚಾಟ ಕೇಳಿದ ಕರಡಿಯು ಹೊಂಗಹಳ್ಳಿ ಗ್ರಾಮದ ಗುರುವಿನ ಗುಡ್ಡದ ಕಡೆಗೆ ಓಡಿ ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗ್ರಾಮದ ಗಿರಿಜನ ಮುಖಂಡ ಮುದ್ದಯ್ಯ ಮತ್ತು ಇತರರು ಗಾಯಾಳುವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.