ADVERTISEMENT

ಗೋರಿಯ ಮೇಲಿನ ಚಾದರ್‌ ಅಲುಗಾಟ

ಕೌತುಕ ನೋಡಲು ಜನಸಾಗರ: ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಮದ್ದೂರು ಹೊಳೆಬೀದಿಯ ಹಜರತ್‌ ದರ್ಗಾದಲ್ಲಿ ಬುಧವಾರ ರಾತ್ರಿ ಅಲುಗಾಡುತ್ತಿದೆ ಎನ್ನಲಾದ ಮಹಾತ್ಮರ ಸಮಾಧಿ ಮೇಲಿನ ಚಾದರ್‌
ಮದ್ದೂರು ಹೊಳೆಬೀದಿಯ ಹಜರತ್‌ ದರ್ಗಾದಲ್ಲಿ ಬುಧವಾರ ರಾತ್ರಿ ಅಲುಗಾಡುತ್ತಿದೆ ಎನ್ನಲಾದ ಮಹಾತ್ಮರ ಸಮಾಧಿ ಮೇಲಿನ ಚಾದರ್‌   
ಮದ್ದೂರು:  ಪಟ್ಟಣದ ಹೊಳೆಬೀದಿಯ ಹಜರತ್‌ ದರ್ಗಾದಲ್ಲಿನ ‘ಜಮಾ ಕಾ ಮಕಾನ್‌’ ಗೋರಿ ಮೇಲಿನ ಚಾದರ್‌ ಅಲುಗಾಟ ಗುರುವಾರವೂ ಮುಂದುವರಿದಿದೆ. 
 
ಬುಧವಾರ ರಾತ್ರಿ 8.30ರ ಸಮಯದಲ್ಲಿ ದರ್ಗಾದಲ್ಲಿರುವ ಮೂವರು  ಸಂತರ ಸಮಾಧಿಗಳ ಮೇಲಿನ ಚಾದರವು ಅಲುಗಾಡುತ್ತಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ‘ಒಳಗಿರುವ ಸಂತರ ಹೃದಯ ಮಿಡಿಯುತ್ತಿದೆ’ ಎಂಬ ಸುದ್ದಿಯೂ ಹರಡಿತು. ಈ ಕೌತುಕವನ್ನು ನೋಡಲು ಪಟ್ಟಣದ ಸಾವಿರಾರು ಜನರು  ಮುಗಿಬಿದ್ದರು.
 
ದರ್ಗಾದ ಮುಂದೆ ಜನಸಾಗರವೇ ನೆರೆದು ಗೊಂದಲ ಏರ್ಪಟ್ಟ ಕಾರಣ ಸ್ಥಳಕ್ಕೆ ಮೀಸಲು ತುಕಡಿಯೊಂದಿಗೆ ಬಂದ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್‌ ಏರ್ಪಡಿಸಿದರು. ಜನರು ಸರತಿ ಸಾಲಿನಲ್ಲಿ ದರ್ಗಾ ಪ್ರವೇಶಿಸಲು ಬ್ಯಾರಿಕೇಡ್‌ ಅಳವಡಿಸಿ ಅವಕಾಶ ಕಲ್ಪಿಸಿದರು. 
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌ ರೆಡ್ಡಿ, ಡಿವೈಎಸ್‌ಪಿ ಮ್ಯಾಥ್ಯೂ ಥಾಮಸ್‌ ಬುಧವಾರ ರಾತ್ರಿ  ಗೋರಿಗಳ ಪರಿಶೀಲನೆ ನಡೆಸಿದರು. ಗೋರಿ ಮೇಲಿನ ಹೊದಿಕೆ ತೆರವುಗೊಳಿಸಲು ದರ್ಗಾ ಮೌಲ್ವಿಗಳು ಅವಕಾಶ ನೀಡದ ಕಾರಣ  ಮರಳಿದರು. 
 
ಮಧ್ಯರಾತ್ರಿ 2ರ ಸಮಯದಲ್ಲಿ ಚಾದರ್‌ ಅಲುಗಾಟ ನಿಂತ ಕಾರಣ ಜನರೂ ಅಲ್ಲಿಂದ ಮರಳಿದರು. ಪುನಃ ಬೆಳಿಗ್ಗೆ 10ರ ಸಮಯದಲ್ಲಿ ಚಾದರ್‌ ಅಲುಗಾಟ ಆರಂಭಗೊಂಡಿದೆ ಎಂಬ ಸುದ್ದಿ ತಿಳಿದು ಜನರು ತಂಡೋಪತಂಡವಾಗಿ ದರ್ಗಾಕ್ಕೆ ಬಂದರು.
****
ಪವಾಡವಲ್ಲ
‘ಈ ಬಗ್ಗೆ ಪ್ರತಿಕ್ರಿಯಿಸಿರುವ ಪವಾಡ ಭಂಜಕ ಹುಲಿಕಲ್‌ ನಟರಾಜು, ‘ಇದೊಂದು ಪ್ರಚಾರದ ಗೀಳು. ಸತ್ಯಾಸತ್ಯತೆ ಪರಿಶೀಲಿಸದೇ ಇದನ್ನು ನಂಬುವುದು ಮೂರ್ಖತನದ ಪರಮಾವಧಿ. ದರ್ಗಾದಲ್ಲಿನ ಗೋರಿಯನ್ನು ಸಿಮೆಂಟ್‌ನಿಂದ ಕಟ್ಟಲಾಗಿರುತ್ತದೆ.
 
ನೂರಾರು ವರ್ಷಗಳ ಹಿಂದೆ ಹೂಳಲಾದ ವ್ಯಕ್ತಿಯ ದೇಹವಿರಲಿ. ಮೂಳೆಯೂ ಇರಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಹೃದಯ ಮಿಡಿಯುತ್ತಿದೆ ಎನ್ನುವುದು ಅಪ್ಪಟ ಸುಳ್ಳು’ ಎಂದರು.

‘ಬಳ್ಳಾರಿ, ಕೊಪ್ಪಳ, ಹೊಸಪೇಟೆಗಳಲ್ಲೂ ಇಂಥದ್ದೇ ವದಂತಿ ಹಬ್ಬಿ ಅಲ್ಲಿಗೆ ಭೇಟಿ ನೀಡಿದ್ದೆ. ಚಾದರ್‌ ತೆಗೆಯಲು ಅಲ್ಲಿನ ಮೌಲ್ವಿಗಳು ಅವಕಾಶ ನೀಡದ ಕಾರಣ ಪವಾಡ ರಹಸ್ಯ ಬಯಲು ಮಾಡಲು ಸಾಧ್ಯವಾಗಲಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು. 

‘ದರ್ಗಾಗಳಲ್ಲಿ ಮಹಾತ್ಮರ ಗೋರಿಗಳನ್ನು ಅಲಂಕೃತ ಚಾದರದ ಮೂಲಕ ಬಿಗಿಯಾಗಿ ಕಟ್ಟಲಾಗಿರುತ್ತದೆ. ಚಾದರ್‌ ಮತ್ತು ಸಮಾಧಿ ನಡುವೆ ನಿರ್ವಾತ ಪ್ರದೇಶವಿರುತ್ತದೆ. ಒಳಗಿರುವ ಗಾಳಿಯು ಒತ್ತಡದಿಂದಾಗಿ ಈಚೆಗೆ ಬರಲು ಯತ್ನಿಸಿದಾಗ ಅಲ್ಲಲ್ಲಿ ಚಾದರ್ ಗುಳ್ಳೆಯಂತೆ ಉಬ್ಬುತ್ತದೆ.

ಅಲ್ಲದೇ ಅಲುಗಾಡುತ್ತ, ಸಣ್ಣ ಪ್ರಮಾಣದ ಸದ್ದೂ ಹೊರ ಹೊಮ್ಮುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಕೆಲವರು ಸಂತರ ಹೃದಯ ಮಿಡಿಯುತ್ತಿದೆ ಎಂದು ಮುಗ್ಧರನ್ನು ನಂಬಿಸುವುದು ಮೌಢ್ಯದ ಸಂಕೇತ’ ಎಂದು ಹುಲಿಕಲ್‌ ನಟರಾಜು ವಿವರಿಸಿದರು.

ADVERTISEMENT

‘ಯಾವುದೇ ಭೂಕಂಪ ಆಗದ ಕಾರಣ ಗೋರಿಗಳು ಅಲುಗಾಡಿರುವುದು ಸುಳ್ಳು. ಇದು ಕೇವಲ ವದಂತಿ, ಜನರು ನಂಬಬಾರದು’ ಎಂದು ಭೂವಿಜ್ಞಾನ ಹಾಗೂ ಗಣಿ ಇಲಾಖೆ ಹಿರಿಯ ವಿಜ್ಞಾನಿ ಡಾ.ನಾಗಭೂಷಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.