ADVERTISEMENT

ಚಕ್ರ ಬಿಚ್ಚಿಕೊಳ್ಳದ ಸಿ.ಎಂ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:39 IST
Last Updated 1 ಫೆಬ್ರುವರಿ 2015, 19:39 IST

ಶ್ರವಣಬೆಳಗೊಳ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗಾಗಿ ಭಾನುವಾರ ಶ್ರವಣ ಬೆಳಗೊಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿ ಸುತ್ತಿದ್ದ ಹೆಲಿಕಾಪ್ಟರ್‌ ನೆಲಸ್ಪರ್ಶ ವಾಗುವ ಸಂದರ್ಭದಲ್ಲಿ ಚಕ್ರಗಳು ಬಿಚ್ಚಿಕೊಳ್ಳದೆ ಸ್ವಲ್ಪ ಹೊತ್ತು ಆತಂಕಕ್ಕೆ ಕಾರಣವಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯ­ಚಂದ್ರ ಅವರು ಪವನ್‌ ಹಂಸ್ ಸಂಸ್ಥೆಗೆ ಸೇರಿದ  ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 10ಗಂಟೆಯ ಸುಮಾರಿಗೆ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟು 10.35ಕ್ಕೆ ಶ್ರವಣಬೆಳ­ಗೊಳದ ಕೆ.ಆರ್‌. ಪೇಟೆ ರಸ್ತೆಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಸೇರಿದಂತೆ ಶಾಸಕರು, ಅಧಿಕಾರಿಗಳು ಮುಖ್ಯಮಂತ್ರಿ ಸ್ವಾಗತಕ್ಕೆ ಬಂದಿದ್ದರು.

ಹೆಲಿಕಾಪ್ಟರ್‌ ನೆಲಕ್ಕಿಂತ 2ರಿಂದ 3 ಅಡಿ ಮೇಲೆ ಬರುವವರೆಗೂ ಚಕ್ರಗಳು ಬಿಚ್ಚಿಕೊಳ್ಳಲಿಲ್ಲ.
ಕೆಳಗೆ ನಿಂತಿದ್ದವರಲ್ಲಿ ಸಚಿವರು, ಅಧಿಕಾರಿಗಳು ಅದನ್ನು ನೋಡಿ ಆತಂಕಕ್ಕೆ ಒಳಗಾದರು.
ತಕ್ಷಣ ಎಚ್ಚೆತ್ತ ಪೈಲಟ್‌ ಹೆಲಿ ಕಾಪ್ಟರ್‌ನ್ನು ಪುನಃ ಐದು ಅಡಿ­ಯಷ್ಟು ಮೇಲೆ ಏರಿಸಿಕೊಂಡರು. ಬಳಿಕ ಚಕ್ರಗಳು ಬಿಚ್ಚಿದ ಬಳಿಕ ಹೆಲಿಕಾಪ್ಟರ್‌ ಅನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡ ಲಾಯಿತು.

ಭದ್ರತಾ ಸಿಬ್ಬಂದಿಯಿಂದ ತಪಾಸಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿ­ಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿದ ನಂತರ ಮುಖ್ಯ­ಮಂತ್ರಿಯವರ ಭದ್ರತಾ ಸಿಬ್ಬಂದಿ ಹೆಲಿಕಾಪ್ಟರ್‌ ಅನ್ನು ಪುನಃ ಪ್ರಯೋಗಾರ್ಥವಾಗಿ ಹಾರಾಟ ನಡೆಸಿ ಹೆಲಿಕಾಪ್ಟರ್‌ ಸುಸ್ಥಿತಿಯಲ್ಲಿರುವುದನ್ನು ಖಚಿತ ಪಡಿಸಿಕೊಂಡರು.

ಸಮ್ಮೇಳನ ಉದ್ಘಾಟನಾ ಸಮಾ­ರಂಭದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಅಂಥದ್ದೇನೂ ನಡೆದಿಲ್ಲ’ ಎಂದರು. ಸಂಜೆ 4.10ಕ್ಕೆ ಶ್ರವಣಬೆಳಗೊಳದಿಂದ ಹೊರಟ ಸಿದ್ದರಾಮಯ್ಯ ಅವರಿದ್ದ ಹೆಲಿಕಾಪ್ಟರ್‌ 4.40ರ ವೇಳೆಗೆ ಬೆಂಗಳೂರು ತಲುಪಿದೆ.

2ನೇ ಬಾರಿ ಅವಘಡ: ಸಿದ್ದರಾಮಯ್ಯ ಅವರಿಗೆ ಇದು ಎರಡನೇ ಹೆಲಿಕಾಪ್ಟರ್‌ ಅವಘಡ. ಈ ಹಿಂದೆ ಜ. 10ರಂದು ಮೈಸೂರಿಗೆ ಹೊರಟಿದ್ದ ಸಿದ್ದರಾಮಯ್ಯ, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್‌ ಏರಿದಾಗ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಸಿದ್ದರಾಮಯ್ಯ ರಸ್ತೆ ಮೂಲಕ ಮೈಸೂರಿಗೆ ಬಂದಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿಗೆ ತೆರಳಿ ಮನೆಗೆ ದೇವರಿಗೆ ಪೂಜೆ ಸಲ್ಲಿಸಿದ್ದರು.

ನಂತರ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ತಿರುಪತಿಗೆ ತೆರಳಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.