ADVERTISEMENT

ಚಾಲುಕ್ಯರ ಪಾರಂಪರಿಕ ಪ್ರದೇಶ ಅಭಿವೃದ್ಧಿಗೆ ಮಸೂದೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:13 IST
Last Updated 23 ನವೆಂಬರ್ 2017, 20:13 IST

ಬೆಳಗಾವಿ: ಚಾಲುಕ್ಯರ ಪಾರಂಪರಿಕ ಪ್ರದೇಶಗಳಾದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅನನ್ಯತೆ ಸಂರಕ್ಷಿಸಲು ಅವಕಾಶ ಕಲ್ಪಿಸುವ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮಸೂದೆಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಸೂದೆ ಮಂಡಿಸಿದರು. ಈ ಪ್ರದೇಶಗಳ ಒಳಗೆ ಇರುವ ಸ್ವತ್ತುಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದೂ ಅವರು ವಿವರಿಸಿದರು. ಪ್ರಾಧಿಕಾರ ರಚನೆಗೆ ₹ 1 ಕೋಟಿಗೂ ಹೆಚ್ಚು ವೆಚ್ಚ ಅಂದಾಜಿಸಲಾಗಿದೆ.

ಪರಂಪರೆ ಪ್ರದೇಶದ ಅನಿಯಂತ್ರಿತ ಅಭಿವೃದ್ಧಿ ಮತ್ತು ವಾಣಿಜ್ಯ ದುರ್ಬಳಕೆ ತಡೆಗಟ್ಟುವ ಅಧಿಕಾರವನ್ನು ಈ ಪ್ರಾಧಿಕಾರಕ್ಕೆ ನೀಡಲಾಗುವುದು. ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಲಿರುವ ಪ್ರಾಧಿಕಾರಕ್ಕೆ, ಸ್ಥಳೀಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿ (ಪ್ರಾಧಿಕಾರದ ಆಯುಕ್ತ) ಸೇರಿ ಒಟ್ಟು 13 ಸದಸ್ಯರಿರುತ್ತಾರೆ. ಕೆಎಎಸ್‌– ಎ (ಹಿರಿಯ ಶ್ರೇಣಿ) ಅಧಿಕಾರಿಯನ್ನು ಆಯುಕ್ತರಾಗಿ ಸರ್ಕಾರ ನೇಮಿಸಲಿದೆ.

ADVERTISEMENT

ಈ ಸ್ಥಳಗಳ ಚರ ಮತ್ತು ಸ್ಥಿರ ಆಸ್ತಿಗಳ ಅಭಿವೃದ್ಧಿ, ರಕ್ಷಣೆ ಹೊಣೆಯನ್ನು ಈ ಪ್ರಾಧಿಕಾರ ‌ಹೊಂದಿರುತ್ತದೆ. ಒತ್ತುವರಿ ತಡೆಯಲು ಭದ್ರತಾ ದಳ ರಚಿಸಲು ಅವಕಾಶ ಇದೆ.

ಅಲ್ಲದೆ, ಪ್ರಾಧಿಕಾರ ಕಾರ್ಯಚಟುವಟಿಕೆ‌ ಸಮನ್ವಯಗೊಳಿಸಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುವ ರಾಜ್ಯ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.