ADVERTISEMENT

ಚಿಕ್ಕಮಗಳೂರಲ್ಲಿ ಗಲಭೆ, ಲಾಠಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2013, 19:30 IST
Last Updated 28 ಡಿಸೆಂಬರ್ 2013, 19:30 IST
ಪೊಲೀಸ್‌ ಲಾಠಿ ಪ್ರಹಾರದ ನಂತರ ರಸ್ತೆಯಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಲೆಗೆ ಏಟು ಬಿದ್ದ ಗಾಯಾಳು
ಪೊಲೀಸ್‌ ಲಾಠಿ ಪ್ರಹಾರದ ನಂತರ ರಸ್ತೆಯಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಲೆಗೆ ಏಟು ಬಿದ್ದ ಗಾಯಾಳು   

ಚಿಕ್ಕಮಗಳೂರು: ನಗರದ ಒಂದು ಕೋಮಿನ ಪ್ರಾರ್ಥನಾ ಮಂದಿರ­ವೊಂದರಲ್ಲಿ ಶನಿವಾರ ಮುಂಜಾನೆ ದುಷ್ಕರ್ಮಿಗಳು ಹಂದಿ ಕಡಿದು ಅಪ­ವಿತ್ರಗೊಳಿಸಿದ ಘಟನೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಇದರ ಬೆನ್ನಲ್ಲೇ ಜಿಲ್ಲಾಡಳಿತ ಎರಡು ದಿನ ನಗರದ 6 ಕಿ.ಮೀ. ಸುತ್ತಳತೆಯಲ್ಲಿ ನಿಷೇಧಾಜ್ಞೆ ಹೇರಿದೆ. ಘಟನೆಯಿಂದ ಅಂಗಡಿ ಮುಂಗಟ್ಟು, ಶಾಲೆ, ಕಾಲೇಜು, ಸರ್ಕಾರಿ ಕಚೇರಿ­ಗಳು, ಸಿನಿಮಾ ಮಂದಿರಗಳ ಬಾಗಿಲು ಮುಚ್ಚಲಾಯಿತು.

ವಿವರ: ದುಷ್ಕರ್ಮಿಗಳು ನಡೆಸಿದ ಕೃತ್ಯ ಬೆಳಿಗ್ಗೆ ಪ್ರಾರ್ಥನೆಗೆ ಹೋದಾಗ ಬೆಳಕಿಗೆ ಬಂದಿದೆ. ವಿಷಯ ತಿಳಿದು ಆ ಸಮುದಾಯದ ಜನ ಜಮಾಯಿಸಿ­ದರು.

ಕಿಡಿಗೇಡಿ­ಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಿ ಎಂ.ಜಿ. ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಶಾಸಕ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು. ನಂತರ ಶಾಸಕರು ಪ್ರಾರ್ಥನಾ ಮಂದಿರಕ್ಕೆ ತೆರಳಿ ಆಕ್ರೋಶಗೊಂಡಿದ್ದ ಸಮುದಾಯದ ಮುಖಂಡರಿಗೆ ಸಾಂತ್ವನ ಹೇಳಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. 

ಈ ನಡುವೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಂ.ಜಿ. ರಸ್ತೆ ಕಡೆಗೆ ಹಿಂದಿರುಗುತ್ತಿದ್ದ ಗುಂಪು ಬಲ­ವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಕೆಲವರ ಮೇಲೆ ಹಲ್ಲೆ ನಡೆ­ಸಿದ್ದರಿಂದ ಬಹುಸಂಖ್ಯಾತ ಸಮುದಾ­ಯ­ದ­­ವರು ಮತ್ತು ವರ್ತಕರು ಎಂ.ಜಿ.ರಸ್ತೆಯ ಮತ್ತೊಂದು ತುದಿಯಲ್ಲಿ ಪ್ರತಿಭಟನೆ ಆರಂಭಿಸಿತು.

ಎರಡೂ ಕಡೆಯ­ವರು ಅಂಡೆ ಛತ್ರದ ಸಮೀಪ ಎಂ.ಜಿ.ರಸ್ತೆಯಲ್ಲಿ ಘರ್ಷಣೆಗೆ ಮುಂದಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.