ADVERTISEMENT

ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲು ಆರೋಪ: ಜೆಟ್‌ ಏರ್‌ವೇಸ್‌ ಉದ್ಯೋಗಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 17:48 IST
Last Updated 25 ಜುಲೈ 2017, 17:48 IST
ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲು ಆರೋಪ: ಜೆಟ್‌ ಏರ್‌ವೇಸ್‌ ಉದ್ಯೋಗಿ ಬಂಧನ
ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲು ಆರೋಪ: ಜೆಟ್‌ ಏರ್‌ವೇಸ್‌ ಉದ್ಯೋಗಿ ಬಂಧನ   

ಮಂಗಳೂರು: ಕೊಲ್ಲಿ ರಾಷ್ಟ್ರಗಳಿಂದ ನಡೆಯುತ್ತಿದ್ದ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿದ್ದ ಆರೋಪದ ಮೇಲೆ ಜೆಟ್‌ ಏರ್‌ವೇಸ್‌ನ ನಿರ್ವಹಣಾ ಸಿಬ್ಬಂದಿಯೊಬ್ಬರನ್ನು ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಿರುವ  ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ₹ 34.41 ಲಕ್ಷ ಮೌಲ್ಯದ 1.1 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.

‘ಜೆಟ್‌ ಏರ್‌ವೇಸ್‌ನ ವಿಮಾನಗಳ ನಿರ್ವಹಣಾ ವಿಭಾಗದ ಸಿಬ್ಬಂದಿ ಲಾಲ್ಬಿನ್ ಜೀನ್‌ ಬಂಧಿತ ಆರೋಪಿ. ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಬರುತ್ತಿದ್ದ ಕೆಲವರು ಈತನನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು.

ತೆರಿಗೆ ವಂಚಿಸಿ ಚಿನ್ನವನ್ನು ತರುತ್ತಿದ್ದವರು, ಅದನ್ನು ವಿಮಾನಗಳ ಶೌಚಾಲಯದಲ್ಲಿ ಅಡಗಿಸಿಟ್ಟು ಇಳಿದು ಬರುತ್ತಿದ್ದರು. ವಿಮಾನಗಳ ನಿರ್ವಹಣೆ ಕೆಲಸದ ನೆಪದಲ್ಲಿ ಒಳಕ್ಕೆ ಹೋಗುತ್ತಿದ್ದ ಆರೋಪಿ, ಚಿನ್ನವನ್ನು ಹೊರಕ್ಕೆ ಸಾಗಿಸಿ ಸಂಬಂಧಿಸಿದವರಿಗೆ ತಲುಪಿಸುತ್ತಿದ್ದ’ ಎಂದು ಡಿಆರ್‌ಐ ಉಪ ನಿರ್ದೇಶಕ ವಿನಾಯಕ ಭಟ್‌ ತಿಳಿಸಿದ್ದಾರೆ.

ADVERTISEMENT

‘ಲಾಲ್ಬಿನ್‌ ಜೀನ್‌ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಕುರಿತು ತನಿಖಾ ತಂಡಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಆತನ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ದುಬೈನಿಂದ ಮಂಗಳೂರಿಗೆ ಬಂದ ಜೆಟ್‌ ಏರ್‌ವೇಸ್‌ 9ಡಬ್ಲ್ಯೂ 531 ಸಂಖ್ಯೆಯ ವಿಮಾನದ ಒಳಕ್ಕೆ ಹೋಗಿ ಬರುವಾಗ ತನಿಖಾ ತಂಡ ಆತನನ್ನು ವಶಕ್ಕೆ ಪಡೆಯಿತು.

ಆತನ ಪ್ಯಾಂಟಿನ  ಜೇಬುಗಳಲ್ಲಿ 1.166 ಕೆ.ಜಿ. ತೂಕದ ಎರಡು ಪೊಟ್ಟಣಗಳಿದ್ದವು. ವಿಚಾರಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆಯಲ್ಲಿ ನೆರವಾಗುತ್ತಿರುವುದಾಗಿ ಆತ ತಪ್ಪೊಪ್ಪಿಕೊಂಡ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ವಿಮಾನದ ಹಿಂಭಾಗದಲ್ಲಿನ ಶೌಚಾಲಯದಲ್ಲಿ ಚಿನ್ನ ಅಡಗಿಸಿಡಲಾಗಿತ್ತು. ಅದನ್ನು ಸಂಜೆ ಮಂಗಳೂರಿನ ಸಿಟಿ ಸೆಂಟರ್‌ನಲ್ಲಿ ಭೇಟಿಯಾಗುವ ಮಧ್ಯವರ್ತಿಗೆ ತಲುಪಿಸಲು ಸೂಚಿಸಲಾಗಿತ್ತು. ಚಿನ್ನವನ್ನು ವಿಮಾನದಿಂದ ಹೊರಕ್ಕೆ ಸಾಗಿಸಿ, ಮಧ್ಯವರ್ತಿಗೆ ತಲುಪಿಸಲು ₹20,000 ಕೊಡುವ ಭರವಸೆ ನೀಡಿದ್ದರು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ದೊರೆಯುವ ಹೆಚ್ಚಿನ ಮಾಹಿತಿ ಆಧರಿಸಿ ಡಿಆರ್‌ಐ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.