ADVERTISEMENT

ಚಿರತೆ ಭೀತಿ: 126 ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 9:31 IST
Last Updated 11 ಫೆಬ್ರುವರಿ 2016, 9:31 IST
ವಿಬ್ಗಯೊರ್ ಶಾಲೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ ಎನ್ನಲಾದ ಚಿರತೆಯ ಹೆಜ್ಜೆ ಗುರುತು ತೋರಿಸಿದ ಬಾಲಕ – ಪ್ರಜಾವಾಣಿ ಚಿತ್ರಗಳು
ವಿಬ್ಗಯೊರ್ ಶಾಲೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ ಎನ್ನಲಾದ ಚಿರತೆಯ ಹೆಜ್ಜೆ ಗುರುತು ತೋರಿಸಿದ ಬಾಲಕ – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ರಾಜಧಾನಿಯ ವರ್ತೂರಿನ ಶಾಲೆಯೊಂದರ ಬಳಿ ಮತ್ತೆ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೂರ್ವ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 126 ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ  ಗುರುವಾರ  (ಫೆ. 11) ಒಂದು ದಿನ ರಜೆ ಘೋಷಿಸಿದೆ.

‘ರಾತ್ರಿಯೇ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಸ್ಥಳ ಹಾಗೂ ಸಮೀಪದ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ವೀರಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಾಚರಣೆ ವೇಳೆ ಕೆಲವೆಡೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಆದರೆ, ಅದು ಈಗ ಕಾಣಿಸಿಕೊಂಡಿದೆ ಎನ್ನಲಾದ ಚಿರತೆಯದ್ದೋ ಅಥವಾ ಈ ಹಿಂದೆ ಶಾಲೆಗೆ ಬಂದಿದ್ದ ಚಿರತೆಯದ್ದೋ ಎಂಬುದು ಖಚಿತವಾಗಿಲ್ಲ’ ಎಂದು ಅವರು ಹೇಳಿದರು.

ಫೆ. 7ರಂದು ಭಾನುವಾರ ನಗರದ ಹೊರವಲಯದ ವರ್ತೂರು ಸಮೀಪದ ವಿಬ್ಗಯೊರ್ ಶಾಲೆಗೆ ಚಿರತೆ ನುಗ್ಗಿತ್ತು. 13 ತಾಸು ಕಾರ್ಯಾಚರಣೆ ನಡೆಸಿ ಅದನ್ನು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಬಳಿಕ ಬನ್ನೇರುಘಟ್ಟದ ಜೈವಿಕ ಉದ್ಯಾನಕ್ಕೆ ಬಿಟ್ಟಿದ್ದರು.

ವರ್ತೂರಲ್ಲಿ ಇನ್ನೂ ಚಿರತೆಯದ್ದೇ ಭಯ
ವರ್ತೂರಿನ ವಿಬ್ಗಯೊರ್ ಶಾಲೆ ಸಮೀಪದ ಅಪಾರ್ಟ್‌ಮೆಂಟ್‌ ಬಳಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಮಾಸುವ ಮುನ್ನವೇ, ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯಲ್ಲಿಯ ನೀಲಗಿರಿ ತೋಪಿನಲ್ಲಿ ಬುಧವಾರ ಚಿರತೆಯೊಂದು ನಾಯಿಯನ್ನು ಎಳೆದುಕೊಂಡು ಹೋಗಿದೆ ಎಂಬ ಸುದ್ದಿ ಹರಿದಾಡತೊಡಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ದಿನವಿಡೀ ಶೋಧ ಕಾರ್ಯಾಚರಣೆ ನಡೆಸಿದರು.

ಚಿರತೆಯನ್ನು ಹಿಡಿಯುವುದಕ್ಕಾಗಿ ಆಯ್ದ ಸ್ಥಳಗಳಲ್ಲಿ ಬೋನುಗಳನ್ನಿಟ್ಟು ಕಾದರು.  ಆದರೆ, ಚಿರತೆ ಮಾತ್ರ ಯಾರ ಕಣ್ಣಿಗೆ ಬಿದ್ದಿಲ್ಲ. ಬದಲಿಗೆ ಅಲ್ಲಲ್ಲಿ ಚಿರತೆಯದೇ ಎನ್ನಲಾದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಚಿರತೆ ಭೀತಿಯಿಂದಾಗಿ ಸ್ಥಳೀಯರು ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತಲ್ಲದೆ, ಹಳ್ಳಿಗಳ ಅಂಗಡಿಗಳಲ್ಲಿ ವ್ಯಾಪಾರ –ವಹಿವಾಟು ಕತ್ತಲೆಗೂ ಮುನ್ನವೇ ಸ್ಥಗಿತಗೊಂಡಿತ್ತು. ಗುಂಪು ಗುಂಪಾಗಿ ಓಡಾಡುತ್ತಿದ್ದ ಜನ, ಚಿರತೆ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಲ್ಲಿ ಪಟಾಕಿ ಸಿಡಿಸಿದರು.

ದಿನವಿಡೀ ಕಾರ್ಯಾಚರಣೆ ನಡೆಸಿದ್ದೇವೆ. ಸ್ಥಳೀಯರನ್ನು ವಿಚಾರಿಸಿದರೆ ಒಬ್ಬೊಬ್ಬರನ್ನು ಒಂದೊಂದು ರೀತಿ ಹೇಳುತ್ತಾರೆ. ಕೆಲವೆಡೆ ಒಂದು ಕಾಣಿಸಿಕೊಂಡಿತು ಎಂದರೆ, ಮತ್ತೆ ಕೆಲವೆಡೆ ಎರಡು ಓಡಿ ಹೋದವು ಎನ್ನುತ್ತಿದ್ದಾರೆ. ಆದರೆ,  ಕಾರ್ಯಾಚರಣೆ ವೇಳೆ ಚಿರತೆ ಕಾಣಿಸಿಕೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

‘ಈ ಜಾಗದಲ್ಲಿ 45 ವರ್ಷದಿಂದ ವಾಸವಾಗಿದ್ದೇವೆ. ಇಲ್ಲಿಯವರೆಗೆ ನರಿ, ಕಾಡು ಹಂದಿ, ಮೊಲಗಳನ್ನು ಹೊರತುಪಡಿಸಿ ಚಿರತೆ ಕಾಣಿಸಿರುವುದು ಇದೇ ಮೊದಲು. ಕೆಲವೆಡೆ ಚಿರತೆ ಹೆಜ್ಜೆ ಗುರುತು ಸಹ ಕಾಣಿಸಿಕೊಂಡಿದೆ. ಅಪಾಯ ಸಂಭವಿಸುವುದಕ್ಕೂ ಮುನ್ನವೇ  ಚಿರತೆ ಹಿಡಿದರೆ ಒಳ್ಳೆಯದು’ ಎಂದು ಕುಂದಲಹಳ್ಳಿಯ ನಿವಾಸಿ ರಾಜೇಂದ್ರ ಅವರು ಹೇಳಿದರು.

‘ಮೊದಲ ಹಿಡಿದ ಚಿರತೆಯನ್ನು ಅರಸಿಕೊಂಡು ಮತ್ತೊಂದು ಚಿರತೆ ಬಂದಿರಬಹುದು. ಚಿರತೆ ಸುದ್ದಿ ಕೇಳಿದಾಗಿನಿಂದ ಮಕ್ಕಳನ್ನು ಹೊರಕ್ಕೆ ಕಳುಹಿಸುವುದಿರಲಿ, ನಾವೂ ಹೊರ ಹೋಗಲು ಭಯವಾಗುತ್ತಿದೆ. ಆದಷ್ಟು ಬೇಗ ಚಿರತೆಗಳನ್ನು ಹಿಡಿದು ನಮ್ಮ ಭಯ ದೂರ ಮಾಡಿದರೆ ಸಾಕು’ ಎಂದು ಗುಂಜೂರಿನ ನಿವಾಸಿ ರಾಜಮ್ಮ ಹೇಳಿದರು.

2 ಚಿರತೆ ಹೋದವು!: ‘ರಾತ್ರಿ 8.30ಕ್ಕೆ ಕೆಲಸ ಮುಗಿಸಿಕೊಂಡು ಸ್ನೇಹಿತರೆಲ್ಲ ವಿಬ್ಗಯೊರ್ ಶಾಲೆ ಸಮೀಪದ ನೀಲಗಿರಿ ತೋಪು ಬಳಿ ಒಟ್ಟಾಗಿ ಹೋಗುತ್ತಿದ್ದೆವು. ಆಗ ಎರಡು 2 ಚಿರತೆಗಳು ನಮ್ಮಿಂದ ಸ್ವಲ್ಪ ದೂರದಲ್ಲಿ ಹೋದವು. ಭಯಗೊಂಡು ಎಲ್ಲರೂ ಓಡಿ ಹೋಗಿ ಬೇಗನೆ ಮನೆ ಸೇರಿಕೊಂಡೆವು’ ಎಂದು ಶೆಡ್‌ ವಾಸಿ ಅನ್ವರ್ ಎಂಬುವರು ಹೇಳಿದರು.

ADVERTISEMENT

ನಾಯಿಗಾಗಿ ಬಂದಿರಬಹುದು
‘ಕೋಳಿ ಮತ್ತು ಮಾಂಸದ ಅಂಗಡಿಗಳ ಮಾಲೀಕರು, ತ್ಯಾಜ್ಯವನ್ನು ಮೂಟೆ ಕಟ್ಟಿಕೊಂಡು ಬಂದು ಇಲ್ಲಿನ ನೀಲಿಗಿರಿ ತೋಪಿನಲ್ಲಿ ಎಸೆದು ಹೋಗುವುದರಿಂದ ನಿತ್ಯ ಅಲ್ಲಿ ನಾಯಿಗಳ ಹಿಂಡು ಇರುತ್ತದೆ. ಹಾಗಾಗಿ ಚಿರತೆಗಳು ನಾಯಿ ಬೇಟೆಗಾಗಿ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಗುಬ್ಬಿ ಚೇತರಿಕೆ
ಚಿರತೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದ್ದು, ಸಾಮಾನ್ಯ ವಾರ್ಡ್‌ಗೆ ಅವರನ್ನು ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.