ADVERTISEMENT

ಚುನಾವಣಾ ರಣತಂತ್ರ ರೂಪಿಸಲು ಭೂಪೇಂದ್ರ ಯಾದವ್‌ ರಾಜ್ಯಕ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 19:30 IST
Last Updated 19 ಡಿಸೆಂಬರ್ 2017, 19:30 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾಗೆ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶ, ಗುಜರಾತ್‌ನಂತಹ ರಾಜ್ಯಗಳಲ್ಲಿ ಕಮಲ ಪಾಳೆಯಕ್ಕೆ ವಿಜಯದ ಮಾಲೆ ತೊಡಿಸಿದ ಪ್ರಮುಖ ಪಾತ್ರಧಾರಿ ಭೂಪೇಂದ್ರ ಯಾದವ್‌ ಈಗ ಕರ್ನಾಟಕದತ್ತ ಮುಖ ಮಾಡಿದ್ದಾರೆ.

ಏಪ್ರಿಲ್–ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ‍ಪಕ್ಷದ ನಾಯಕರು, ಕಾರ್ಯಕರ್ತರನ್ನು ಹುರಿಗೊಳಿಸುವುದು. ಪಕ್ಷವನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣದ ತಮ್ಮ ಕನಸನ್ನು ಸಜ್ಜುಗೊಳಿಸುವ ಹೊಣೆಯನ್ನು ತಮ್ಮ ಅತ್ಯಾಪ್ತ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾದವ್‌ ಹೆಗ
ಲಿಗೆ ಹೊರಿಸಲು  ಷಾ ನಿರ್ಧರಿಸಿದ್ದಾರೆ.

ಗುಜರಾತ್‌ ಚುನಾವಣೆಯಲ್ಲಿ ಕಲಿತ ಪಾಠದ ಆಧಾರದ ಮೇಲೆ ಕರ್ನಾಟಕದಲ್ಲಿ ಹೊಸ ತಂತ್ರಗಾರಿಕೆ ಹೆಣೆಯಲು ಯಾದವ್‌, ಇದೇ ತಿಂಗಳ ಅಂತ್ಯದೊಳಗೆ ರಾಜ್ಯಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಚುನಾವಣಾ ರಣತಂತ್ರ ಹೆಣೆಯಲು ಅಮಿತ್‌ಷಾ ಯಾವುದೇ ರಾಜ್ಯಕ್ಕೆ ಭೇಟಿ ನೀಡಲಿ ಅದಕ್ಕೆ ಮುನ್ನ ಯಾದವ್‌ ಭೇಟಿ ನೀಡುತ್ತಾರೆ. ಅದಕ್ಕಿಂತ ಮೊದಲೇ ಅಲ್ಲಿನ ತಲಸ್ಪರ್ಶಿ ಮಾಹಿತಿಯನ್ನು ಹೊತ್ತುಕೊಂಡೇ ಆಯಾ ರಾಜ್ಯಕ್ಕೆ ಹೋಗುವ ಯಾದವ್‌, ಸ್ಥಳೀಯ ಮಟ್ಟದ ನಾಯಕರಿಂದ ವಿವರ, ಅಲ್ಲಿಯವರೆಗಿನ ಸ್ಥಿತಿಗತಿಗಳ ವಿವರ ಪಡೆಯುತ್ತಾರೆ.

ಯಾದವ್ ನೀಡುವ ಸಮಗ್ರ ವರದಿಯನ್ನು ಇಟ್ಟುಕೊಂಡೇ  ಅಖಾಡಕ್ಕೆ ಇಳಿಯವುದು ಷಾ ತಂತ್ರ. ‘ಮುಂದಿನ ಗುರಿ ಕರ್ನಾಟಕ’ ಎಂದು ಘೋಷಿಸಿರುವ ಷಾ, ಈ ಕಾರಣಕ್ಕಾಗಿಯೇ ಕರ್ನಾಟಕಕ್ಕೆ ತೆರಳುವಂತೆ ಯಾದವ್‌ಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ವಿವರಿಸಿವೆ.

ರಾವ್‌ ಬದಲಾವಣೆ?: ಕರ್ನಾಟಕಕ್ಕೆ ಭೇಟಿ ನೀಡಿದ್ದ ಷಾ, ಮೂರು ದಿನ ಇಲ್ಲೇ ಮೊಕ್ಕಾಂ ಮಾಡಿ ರಾಜ್ಯ ನಾಯಕರಿಗೆ ಬೆವರು ಇಳಿಸಿದ್ದರು. ಅಪೇಕ್ಷಿಸಿದ ಮಟ್ಟಕ್ಕೆ ಪಕ್ಷದ ಸಂಘಟನೆ ಬಲಿಷ್ಠವಾಗಿಲ್ಲ ಎಂದರಿತ ಷಾ, ಚುನಾವಣಾ ಉಸ್ತುವಾರಿಗಳಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಪೀಯೂಷ್ ಗೋಯಲ್ ಅವರನ್ನು ನೇಮಕ ಮಾಡಿದ್ದರು. ಆ ಹೊತ್ತಿಗೆ ರಾಜ್ಯ ಉಸ್ತುವಾರಿ ಮುರುಳೀಧರರಾವ್ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳೂ ಪಕ್ಷದ ವಲಯದಲ್ಲಿ ವ್ಯಕ್ತವಾಗಿದ್ದವು.

‘ಷಾ ಸೂಚನೆ ನೀಡಿ ಹೋದ ನಾಲ್ಕು ತಿಂಗಳು ಕಳೆದರೂ ಪಕ್ಷದ ನಾಯಕರು ಒಂದಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕೆಲ್ಲ ಮುರುಳೀಧರರಾವ್ ಅವರ ದೌರ್ಬಲ್ಯವೇ ಕಾರಣ ಎಂಬುದು ಷಾಗೆ ಮನವರಿಕೆಯಾಗಿದೆ. ಹೀಗಾಗಿ, ಯಾದವ್ ಅವರನ್ನು ರಾಜ್ಯ ಉಸ್ತುವಾರಿಯಾಗಿ ನಿಯೋಜಿಸುವ ಸಾಧ್ಯತೆ ಹೆಚ್ಚಿದೆ’ ಎಂದು ನಾಯಕರೊಬ್ಬರು ತಿಳಿಸಿದರು.

***

ಜನವರಿಯಲ್ಲಿ ಅಮಿತ್ ಷಾ?

ಸಂಸತ್ ಅಧಿವೇಶನ ಮುಗಿದ ಬಳಿಕ ಅಮಿತ್‌ ಷಾ ಕರ್ನಾಟಕದಲ್ಲೆ ತಮ್ಮ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಅಧಿಕಾರದಲ್ಲಿರುವ ವಿಶಾಲ ಹಾಗೂ ಆರ್ಥಿಕವಾಗಿ ಪ್ರಬಲ ರಾಜ್ಯ ಸದ್ಯಕ್ಕೆ ಕರ್ನಾಟಕಕ್ಕೆ ಮಾತ್ರ. ಉತ್ತರದಲ್ಲಿ ಸಾಧಿಸಿದ ದಿಗ್ವಜಯದಂತೆ ದಕ್ಷಿಣದಲ್ಲೂ ಬಿಜೆಪಿ ಸಾಮ್ರಾಜ್ಯ ವಿಸ್ತರಿಸಬೇಕಾದರೆ ಈ ಭಾಗದ ಹೆಬ್ಬಾಗಿಲಿನಂತಿರುವ ಕರ್ನಾಟಕದಲ್ಲಿ ಗೆಲ್ಲಲೇಬೇಕು. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬಿಜೆಪಿ ಗೆಲುವು ಸಲೀಸಲ್ಲ ಎಂದು ಅರಿತಿರುವ ಷಾ ಅವರು, ಚುನಾವಣೆ ಮುಗಿಯುವವರೆಗೆ ಹೆಚ್ಚಿನ ಅವಧಿಯನ್ನು ಕರ್ನಾಟಕಕ್ಕೆ ಮೀಸಲಿಡಲು ಬಯಸಿದ್ದಾರೆ. ಅವರು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆ ಬಗ್ಗೆ ಯಾವುದೇ ಸೂಚನೆ ವರಿಷ್ಠರು ಅಥವಾ ಉಸ್ತುವಾರಿಗಳಿಂದ ಬಂದಿಲ್ಲ’ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.