ADVERTISEMENT

ಜನತಾ ಸೇವಾ ಸಹಕಾರ ಬ್ಯಾಂಕ್‌: ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಬೆಂಗಳೂರು: ಇಲ್ಲಿನ ವಿಜಯನಗರದ ಆರ್‌ಪಿಸಿ ಬಡಾವಣೆಯಲ್ಲಿರುವ ಜನತಾ ಸೇವಾ ಸಹಕಾರ ಬ್ಯಾಂಕಿನ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು.

ಬ್ಯಾಂಕಿನ ಮೇಲೆ ದಾಳಿ ನಡೆದಿಲ್ಲ. ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ. ಬ್ಯಾಂಕ್‌ ಅಧಿಕಾರಿಗಳು ‘ಪ್ರಜಾವಾಣಿ’ ಸಂಪರ್ಕಕ್ಕೆ ಸಿಗಲಿಲ್ಲ.

ಈ ಮಧ್ಯೆ, ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಮೈಸೂರು, ಬೆಂಗಳೂರಿನ 11 ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಖಲೆಗಳಲ್ಲಿ ಸಿಕ್ಕ ಸುಳಿವಿನ ಆಧಾರದ ಮೇಲೆ ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಗಳಲ್ಲಿ ಗುತ್ತಿಗೆ ಪಡೆದಿದ್ದ ಮೈಸೂರಿನ ಟಿ.ನರಸೀಪುರ ಮೂಲದ ಕಂಪೆನಿಯೊಂದರ ಕಚೇರಿಯನ್ನು ಬುಧವಾರ ಶೋಧಿಸಿದ್ದಾರೆ.

ADVERTISEMENT

ಈ ಕಂಪೆನಿ ಮಳವಳ್ಳಿ ಹಾಗೂ ಮಂಡ್ಯಗಳಲ್ಲೂ ಕಚೇರಿ ಹೊಂದಿದ್ದು, ಸಚಿವರೊಬ್ಬರ ಜೊತೆ ನಿಕಟ ಸಂಪರ್ಕ ಹೊಂದಿದೆ ಮಾಹಿತಿ ಅನುಸರಿಸಿ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

‘ಭ್ರಷ್ಟಾಚಾರದ ಮಾಹಿತಿ ನೀಡಿ’
ಸಾರ್ವಜನಿಕ ಜೀವನದಲ್ಲಿ ಸ್ವಚ್ಛತೆ ಹಾಗೂ ಪಾರದರ್ಶಕತೆ ಕಾಪಾಡುವುದಕ್ಕೆ ಸಿಬಿಐ ಬದ್ಧವಾಗಿದ್ದು, ಕೇಂದ್ರ ಸರ್ಕಾರದ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮಗಳು, ರಕ್ಷಣಾ ಉದ್ಯಮ ಮತ್ತು ಇಂಡಿಯನ್‌ ರೈಲ್ವೆಯಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದೆ.

ಸಾರ್ವಜನಿಕರು ಮಾಹಿತಿಯನ್ನು ಎಸ್‌ಪಿ, ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ, ನಂ 36, ಗಂಗಾ ನಗರ, ಬಳ್ಳಾರಿ ರಸ್ತೆ, ಬೆಂಗಳೂರು, 560032,  ದೂರವಾಣಿ  080– 23331026, ಫ್ಯಾಕ್ಸ್‌ 080– 23331977, ಇ– ಮೇಲ್‌ hobacbir@cbi.gov.in ಗೆ ಪೂರೈಸಬಹುದು.

ಪ್ರಾಧ್ಯಾಪಕನಿಗೆ 4 ವರ್ಷ ಜೈಲು
ಬೆಂಗಳೂರು:
ಪರೀಕ್ಷೆಯಲ್ಲಿ ಲಾಭ ಮಾಡಿಕೊಡಲು ವಿದ್ಯಾರ್ಥಿಯೊಬ್ಬರಿಂದ ₹ 25000 ಲಂಚ ಪಡೆದ ಪ್ರಕರಣದಲ್ಲಿ ಇಲ್ಲಿನ ರಾಜಾಜಿ ನಗರದ ಇಸಿಐಸಿ (ಎಂಪ್ಲಾಯಿಸ್‌ ಸ್ಟೇಟ್‌ ಇನ್ಸೂರೆನ್ಸ್‌ ಕಾರ್ಪೋರೇಷನ್‌) ಸೂಕ್ಷ್ಮ ಜೀವ ವಿಜ್ಞಾನದ ಪ್ರಾಧ್ಯಾಪಕ ಡಾ. ಬಿ.ವಿ ನವನೀತ್‌ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ನಾಲ್ಕು ವರ್ಷ ಜೈಲು ಹಾಗೂ ₹ 10 ಲಕ್ಷ ದಂಡ ವಿಧಿಸಿದೆ.

ಈ ಲಂಚ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಕಾರ್ಮಿಕ ಸಚಿವಾಲಯಕ್ಕೆ ಸೇರಿದ ಇಸಿಐಸಿ ಪ್ರಾಧ್ಯಾಪಕ ನವನೀತ್‌ ಅವರನ್ನು ತಪ್ಪಿತಸ್ಥ ಎಂದು ಸಾರಿತು. ಆರೋಪ ಕುರಿತು ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ) 2016ರ ಜೂನ್‌ 14ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.