ADVERTISEMENT

ಜನಾರ್ದನ ರೆಡ್ಡಿ ಬಿಜೆಪಿಯ ತಾರಾ ಪ್ರಚಾರಕ ಅಲ್ಲ: ವಾಮನಾಚಾರ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:29 IST
Last Updated 25 ಏಪ್ರಿಲ್ 2018, 8:29 IST
ಡಾ. ವಾಮನಾಚಾರ್ಯ
ಡಾ. ವಾಮನಾಚಾರ್ಯ   

ಹುಬ್ಬಳ್ಳಿ: ‘ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿಯ ತಾರಾ ಪ್ರಚಾರಕ ಅಲ್ಲ. ಪಕ್ಷ ಅವರನ್ನು ಪ್ರಚಾರಕ್ಕೂ ಕರೆದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಅವರು ಪ್ರಚಾರ ಮಾಡಬಹುದು’ ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ವಾಮನಾಚಾರ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ವಿಭಾಗ ಮಟ್ಟದ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನಾರ್ದನ ರೆಡ್ಡಿ ಮತ್ತು ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ’ ಎಂದರು.

‘ಜನಾರ್ದನ ರೆಡ್ಡಿ ಅವರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ’ ಎಂದು ಇತ್ತೀಚೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯಿಂದಾಗಿ, ವಾಮಾನಾಚಾರ್ಯ ಪೇಚಿಗೆ ಸಿಲುಕಿದರು. ಬಳಿಕ, ‘ಯಡಿಯೂರಪ್ಪ ಅವರು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ. ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಯಾರಿಗೂ ನಾವು ಟಿಕೆಟ್ ನೀಡಿಲ್ಲ’ ಎಂದು ನುಣುಚಿಕೊಂಡರು.

ADVERTISEMENT

‘ಚುನಾವಣಾ ಪ್ರಚಾರದ ಉದ್ದೇಶದಿಂದ ಬೆಂಗಳೂರು, ಮೈಸೂರು, ಬೆಳಗಾವಿ, ಶಿವಮೊಗ್ಗ, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಮಾಧ್ಯಮ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆ ಮೂಲಕ ಐದು ವರ್ಷ ಇದ್ದೂ ಇಲ್ಲದಂತಿದ್ದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನತೆ ಮುಂದಿಡಲಾಗುವುದು’ ಎಂದರು.

ಮೋದಿ ಪ್ರಚಾರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 1 ಮತ್ತು 2ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದು ಬೆಂಗಳೂರು, ತುಮಕೂರು, ಚಾಮರಾಜನಗರ ಹಾಗೂ ಬಳ್ಳಾರಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಹಣ ಖರ್ಚಾಗಿಲ್ಲ: ‘ಗ್ರಾಮೀಣ ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರ ₹50 ಕೋಟಿ ಮತ್ತು ರಸ್ತೆ ಅಭಿವೃದ್ಧಿಗಾಗಿ ₹40 ನೀಡಿದ್ದ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿಲ್ಲ. ರಾಜ್ಯದಲ್ಲಿ 3.6 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ, ಕನಿಷ್ಠ 36 ಸಾವಿರ ಮನೆಗಳನ್ನು ಕೂಡ ಕಟ್ಟಿಲ್ಲ’ ಎಂದು ಟೀಕಿಸಿದರು.

‘ಕೃಷ್ಣಾ ಯೋಜನೆಗಾಗಿ ₹ 50 ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದ್ದ ಸರ್ಕಾರ, ಇದುವರೆಗೆ ಖರ್ಚು ಮಾಡಿರುವುದು ಕೇವಲ ₹ 6,996 ಕೋಟಿ. ಅಣೆಕಟ್ಟೆ ಎತ್ತರ ಹೆಚ್ಚಿಸಲು ಐದು ವರ್ಷದ ಅವಧಿಯಲ್ಲಿ ಒಮ್ಮೆಯೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಲ್ಲ. ಪ್ರತಿ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ನೀಡಿದ್ದ ಭರವಸೆ, ಕೇವಲ ಆರೇಳು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ’ ವಾಗ್ದಾಳಿ ನಡೆಸಿದರು.

3,781 ರೈತರ ಆತ್ಮಹತ್ಯೆ: ‘ಐದು ವರ್ಷದ ಅವಧಿಯಲ್ಲಿ ರಾಜ್ಯದಾದ್ಯಂತ 3,781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಸಿಗಬೇಕಾದ ಫಸಲ್ ಬಿಮಾ ಯೋಜನೆಯ ₹357 ಕೋಟಿ ಮೊತ್ತ ರಾಜ್ಯದ ನಿರ್ಲಕ್ಷ್ಯದಿಂದಾಗಿಯೇ ಇದುವರೆಗೆ ಬಿಡುಗಡೆಯಾಗಿಲ್ಲ. ಅಲ್ಲದೆ, ಕಬ್ಬು ಬೆಳೆಗಾರರಿಗೆ ನೀಡಬೇಕಾದ ₹2,714 ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ‘ಬಿಜೆಪಿ ಚುನಾವಣಾ ಪ್ರಣಾಳಿಕೆಯೂ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ನಾಗರಾಜ, ಸಹ ವಕ್ತಾರ ಮೋಹನ ಲಿಂಬಿಕಾಯಿ, ವಿಭಾಗ ಮಾಧ್ಯಮ ಸಂಚಾಲಕ ವೀರೇಶ ಸಂಗಳದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾ ವಕ್ತಾರ ಹನುಮಂತಪ್ಪ ದೊಡ್ಡಮನಿ, ಉಮೇಶ ಜೋಶಿ ಹಾಗೂ ಈರಣ್ಣ ಜಡಿ ಇದ್ದರು.

ಸೋಲಿನ ಭೀತಿಯಿಂದ ಸಿ.ಎಂ ಬಾದಾಮಿಯಲ್ಲಿ ಸ್ಪರ್ಧೆ: ಶೆಟ್ಟರ್
‘ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಕಡೆ ಗಳಿಗೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸಲು ನಿರ್ಧಾರ ಕೈಗೊಂಡಿದ್ದಾರೆ. ಇದು ಅವರಲ್ಲಿರುವ ಸೋಲಿನ ಭೀತಿ ಹಾಗೂ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.

‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದ್ದ ಸಿದ್ದರಾಮಯ್ಯ ಅವರಿಗೆ, ಸ್ವಂತ ಕ್ಷೇತ್ರದಲ್ಲೇ ಗೆಲ್ಲುವ ವಿಶ್ವಾಸ ಇಲ್ಲವಾಗಿದೆ. ಪಕ್ಷದೊಳಗೆ ವಿರೋಧವಿದ್ದರೂ, ಎರಡೂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಎರಡೂ ಕಡೆ ಅವರಿಗೆ ಸೋಲು ಖಚಿತ’ ಎಂದು ಭವಿಷ್ಯ ನುಡಿದರು.

ಅತೃಪ್ತರ ನಾಮಪತ್ರ ವಾಪಸ್: ‘ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎದ್ದಿರುವ ಭಿನ್ನಮತ ಸ್ಫೋಟ ಶಮನಕ್ಕಾಗಿ ಅತೃಪ್ತ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಪಕ್ಷದ ಶಿಸ್ತಿಗೆ ಬದ್ಧರಾಗಿ, ಎಲ್ಲರೂ ನಾಮಪತ್ರ ವಾಪಸ್ ಪಡೆಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.