ADVERTISEMENT

ಜಾತಿ ಗಣತಿ ವರದಿ ಸಲ್ಲಿಕೆಗೆ ಜೂನ್‌ 30ರ ಗಡುವು

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಅಂಕಿ–ಅಂಶಗಳನ್ನು ಒಳಗೊಂಡ ವರದಿಯನ್ನು ಜೂನ್‌ 30ರ ಒಳಗೆ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಸೂಚಿಸಿದರು. ಸಚಿವರು ಗುರುವಾರ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು. 

ಜೂನ್‌ 15ರೊಳಗೆ ಸಮೀಕ್ಷೆಯ ಅಂತಿಮ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದಾಗ, ಅಂಕಿ–ಅಂಶಗಳ ವಿಶ್ಲೇಷಣೆಗೆ ಒಂದು ತಿಂಗಳ  ಕಾಲಾವಕಾಶಬೇಕು ಎಂದು ಆಯೋಗದ ಅಧಿಕಾರಿಗಳು ಕೋರಿದರು. ಇದಕ್ಕೆ ಒಪ್ಪಿದ ಸಚಿವರು, ‘ಜೂನ್‌ 30ರ ನಂತರ ಯಾವುದೇ ಕಾರಣಕ್ಕೂ ಅವಧಿ ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು ಎಂದು ಗೊತ್ತಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಅನ್ಯಾಯಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಸಮೀಕ್ಷೆ ನಡೆಸಿದೆ.

ಬೇರೆ ಯಾವ ರಾಜ್ಯಗಳೂ ಇಂತಹ ಸಮೀಕ್ಷೆ ನಡೆಸಿಲ್ಲ. ಸಮೀಕ್ಷೆಯಲ್ಲಿ 5.98 ಕೋಟಿ  ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಬಂದಿರುವ ಎಲ್ಲಾ ಮಾಹಿತಿಗಳನ್ನು ವಿಶ್ಲೇಷಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.