ADVERTISEMENT

ಜೆಡಿಎಸ್‌, ಬಿಜೆಪಿ ಶಾಸಕರು ಕಾಂಗ್ರೆಸ್‌ನತ್ತ

20ಕ್ಕೂ ಅಧಿಕ ಶಾಸಕರು ಪಕ್ಷಕ್ಕೆ: ಸಂತೋಷ್‌ ಲಾಡ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:02 IST
Last Updated 23 ಏಪ್ರಿಲ್ 2017, 20:02 IST
ಸಂತೋಷ್‌ ಲಾಡ್‌
ಸಂತೋಷ್‌ ಲಾಡ್‌   

ಕಾರವಾರ: ‘ಮುಂದಿನ ಚುನಾವಣೆಯೊಳಗೆ ಜೆ.ಡಿ.ಎಸ್‌ ಹಾಗೂ ಬಿ.ಜೆ.ಪಿಯಿಂದ 20ಕ್ಕೂ ಅಧಿಕ ಶಾಸಕರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಜೆ.ಡಿ.ಎಸ್‌ನಿಂದ ಸುಮಾರು 15 ಶಾಸಕರು ಕಾಂಗ್ರೆಸ್‌ ಸೇರುತ್ತಾರೆಂದು ಶಾಸಕ ಜಮೀರ್‌ ಅಹಮ್ಮದ್‌ ಹೇಳುತ್ತಿದ್ದಾರೆ.

ಅಲ್ಲದೇ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಶಾಸಕರೂ ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ’ ಎಂದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಯಾರಿಗೇ ಕೊಟ್ಟರೂ ಅವರೊಂದಿಗೆ ಕೆಲಸ ಮಾಡಲು ತಾವು ಸಿದ್ಧವಿರುವುದಾಗಿ ಹೇಳಿದರು.

ರಸ್ತೆ ಬದಿಯಲ್ಲೇ ಜ್ಯೂಸ್‌ ಕುಡಿದರು: ನಗರದ ಗ್ರೀನ್‌ಸ್ಟ್ರೀಟ್‌ನಲ್ಲಿರುವ ಅಂಗಡಿಯೊಂದರ ಮುಂದೆ ಸ್ನೇಹಿತರ ಜತೆ ಕುಳಿತ ಸಚಿವ ಲಾಡ್‌, ಸಮೀಪದ ಹೋಟೆಲ್‌ನಿಂದ ತಂಪು ಪಾನೀಯ ತರಿಸಿಕೊಂಡು ಕುಡಿದರು.

ಬಳಿಕ ಸ್ಥಳದಲ್ಲಿದ್ದವರೊಂದಿಗೆ ಜಿಲ್ಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿವರು ಬರುವ ಬಗ್ಗೆ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ಇರಲಿಲ್ಲ. ಸ್ವಂತ ವಾಹನದಲ್ಲಿ ಬಂದಿದ್ದ ಅವರೊಂದಿಗೆ ಬೆಂಗಾವಲು ಪಡೆ ಕೂಡ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.