ADVERTISEMENT

ಜ. 17 ರಿಂದ ಧಾರವಾಡ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2013, 19:30 IST
Last Updated 30 ಡಿಸೆಂಬರ್ 2013, 19:30 IST
ಜ. 17 ರಿಂದ ಧಾರವಾಡ ಸಾಹಿತ್ಯ ಸಂಭ್ರಮ
ಜ. 17 ರಿಂದ ಧಾರವಾಡ ಸಾಹಿತ್ಯ ಸಂಭ್ರಮ   

ಧಾರವಾಡ: ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಇದೇ ಜ. 17­­ ರಿಂದ 19ರ ವರೆಗೆ ‘ಧಾರವಾಡ ಸಾಹಿತ್ಯ ಸಂಭ್ರಮ’ ನಡೆಯಲಿದೆ. ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸ­ಲಿದ್ದು, ಡಾ. ಸಿ.ಎನ್‌. ರಾಮಚಂದ್ರನ್‌ ಆಶಯ ಮಾತುಗಳನ್ನಾಡುವರು.

‘ಇಂದಿನ ಕನ್ನಡ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡಿರುವ, ಎಲ್ಲ ಪೀಳಿಗೆಗಳಿಗೆ ಸೇರಿದ ಸುಮಾರು 150 ಸಾಹಿತಿಗಳು ಸಾಹಿತ್ಯ ಸಂಭ್ರಮ­ದಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆ 200 ಪ್ರತಿನಿಧಿ­ಗಳಿಗೆ ಮಾತ್ರ ಪ್ರವೇಶಾವಕಾಶವಿದ್ದು, ನೋಂದಣಿ ಶುಲ್ಕ ರೂ500 ನಿಗದಿ ಮಾಡಲಾಗಿದೆ. 100 ಸಾಹಿತ್ಯಾಸಕ್ತರಿಗೆ ಉಚಿತ ಪ್ರವೇಶವಿದೆ. ಅದರಲ್ಲಿ ವಿದ್ಯಾರ್ಥಿಗಳೂ ಸೇರಿದ್ದಾರೆ.

ಆದರೆ, ಎಲ್ಲರೂ ನೋಂದಣಿ ಮಾಡಿಸುವುದು ಕಡ್ಡಾಯ. ಪ್ರತಿನಿಧಿಗಳಿಗೆ ಸ್ಮರಣಸಂಚಿಕೆ ಮತ್ತು ಕೆಲವು ಪುಸ್ತಕಗಳನ್ನು ಒಳಗೊಂಡ ಕಿಟ್‌ನೊಂದಿಗೆ ಪ್ರಮಾಣಪತ್ರ ಕೊಡಲಾ­ಗುವುದು. ಅವರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇರುತ್ತದೆ’ ಎಂದು ‘ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌’ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇತ್ತೀಚಿನ ಸಂಶೋಧನೆಗಳು, ನಾಟಕ ಹುಟ್ಟುವ ರೀತಿ, ಮಕ್ಕಳ ಸಾಹಿತ್ಯಕ್ಕೆ ಹೊಸ ತಿರುವು, ಯುವ ಬರಹಗಾರರ ಸವಾಲುಗಳು, ಸಾಹಿತಿಗಳೊಂದಿಗೆ ಸಂವಾದ, ನಾನು ಮೆಚ್ಚಿದ ಇತ್ತೀಚಿನ ಕನ್ನಡ ಪುಸ್ತಕ, ಬೇಂದ್ರೆ–-ಕುವೆಂಪು ಅವರ ಕವಿತೆಗಳ ವಾಚನ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು, ಜನಪ್ರಿಯ ಸಾಹಿತ್ಯದ ಸಾಂಸ್ಕೃತಿಕ ಆಯಾಮಗಳು, ಹಳೆಗನ್ನಡ ಕಾವ್ಯದ ಓದು ಯಾಕೆ ಬೇಕು? ಸಾಹಿತ್ಯಿಕ ಪ್ರಸಂಗಗಳ ನಿರೂಪಣೆ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಕುರಿತು ಗೋಷ್ಠಿಗಳು ನಡೆಯಲಿವೆ.

ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 17ರಂದು ಸಂಜೆ 7ಕ್ಕೆ ‘ಬೆಟ್ಟದ ಜೀವ’ ಸಿನಿಮಾ ಪ್ರದರ್ಶನ ನಡೆಯಲಿದೆ. ಬಳಿಕ ಆ ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಅವರೊಂದಿಗೆ ಸಂವಾದ ನಡೆಯಲಿದೆ. 18ರಂದು ಸಂಜೆ ಗಣಪತಿ ಭಟ್‌ ಹಾಸಣಗಿ ಅವರಿಂದ ಶಾಸ್ತ್ರೀಯ ಸಂಗೀತ, ಗಿರೀಶ ಕಾಸರವಳ್ಳಿ ನಿರ್ದೇಶನದ ಯು.ಆರ್‌.ಅನಂತಮೂರ್ತಿ ಅವರ ಬಗೆಗಿನ ಸಾಕ್ಷ್ಯಚಿತ್ರ 19 ರಂದು ಸಂಜೆ ಪ್ರದರ್ಶನವಾಗಲಿದೆ. ಇದಕ್ಕೂ ಮುನ್ನ ಬಿ.ಎ.ವಿವೇಕ ರೈ ಸಮಾರೋಪ ಭಾಷಣ ಮಾಡುವರು’ ಎಂದು ಹೇಳಿದರು.

‘ಎಸ್.ಎಲ್.ಭೈರಪ್ಪ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ, ಎಚ್.ಎಸ್.ವೆಂಕಟೇಶಮೂರ್ತಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಗಿರೀಶ ಕಾಸರವಳ್ಳಿ, ಟಿ.ಪಿ. ಅಶೋಕ, ವಿವೇಕ ಶಾನಭಾಗ, ಎಸ್.ಶೆಟ್ಟರ್, ಚಂದ್ರ­ಶೇಖರ ಪಾಟೀಲ, ಹಂಪ ನಾಗರಾಜಯ್ಯ, ಐ.ಎಂ. ವಿಠ್ಠಲಮೂರ್ತಿ, ಟಿ.ವಿ.ವೆಂಕಟಾಚಲಶಾಸ್ತ್ರ, ಶತಾವ­ಧಾನಿ ಗಣೇಶ, ಬಿ.ಎನ್.ಸುಮಿತ್ರಾಬಾಯಿ, ಮಲ್ಲಿಕಾ ಘಂಟಿ, ಭುವನೇಶ್ವರಿ ಹೆಗಡೆ, ಕೆ.ಸತ್ಯನಾರಾಯಣ, ಸಿದ್ಧಲಿಂಗಯ್ಯ, ವೀಣಾ ಬನ್ನಂಜೆ, ಕೆ.ವಿ.ಅಕ್ಷರ ಸೇರಿದಂತೆ ಹಲವು ಸಾಹಿತಿಗಳು, ಲೇಖಕರು ಭಾಗವಹಿಸಲಿದ್ದಾರೆ’ ಎಂದು ಗಿರಡ್ಡಿ ವಿವರಿಸಿದರು.

‘ಸಾಹಿತ್ಯ ಸಂಭ್ರಮಕ್ಕೆ ಒಟ್ಟಾರೆ ರೂ25ರಿಂದ ರೂ28 ಲಕ್ಷ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ರೂ15 ಲಕ್ಷ ಬಿಡುಗಡೆ ಮಾಡುವಂತೆ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಹಣ ಬಿಡುಗಡೆ ಮಾಡುವ ಭರವಸೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ನೀಡಿದ್ದಾರೆ’ ಎಂದು ಟ್ರಸ್ಟ್‌ ಗೌರವಾ­ಧ್ಯ­ಕ್ಷ­ರಲ್ಲಿ ಒಬ್ಬರಾದ ಡಾ.ಎಂ.ಎಂ. ಕಲಬುರ್ಗಿ ಹೇಳಿದರು.

ಟ್ರಸ್‌್ಟನ ಮತ್ತೊಬ್ಬ ಗೌರವಾಧ್ಯಕ್ಷ ಡಾ.ಚೆನ್ನವೀರ ಕಣವಿ, ಸಹಕಾರ್ಯದರ್ಶಿಗಳಾದ ಡಾ.ಬಾಳಣ್ಣ ಶೀಗಿಹಳ್ಳಿ, ಡಾ.ಹ.ವೆಂ.ಕಾಖಂಡಿಕಿ, ಕೋಶಾಧ್ಯಕ್ಷ ಸಮೀರ ಜೋಶಿ ಹಾಗೂ ಪ್ರೊ.ಸುಕನ್ಯಾ ಉಪಸ್ಥಿತರಿದ್ದರು.

ಪ್ರತಿನಿಧಿಗಳ ನೋಂದಣಿ
ಸಂಭ್ರಮದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಧಾರವಾಡದ ಮನೋಹರ ಗ್ರಂಥಮಾಲೆಯ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.

www.dharwadsahityasambhrama.com ಜಾಲತಾಣದಿಂದ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು,
ಭರ್ತಿ­ಮಾಡಿದ ಅರ್ಜಿಗಳನ್ನು ಮನೋಹರ ಗ್ರಂಥಮಾಲೆ, ಸುಭಾಷ್‌ ರಸ್ತೆ, ಧಾರವಾಡ 580 001– ಇಲ್ಲಿಗೆ ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT