ADVERTISEMENT

ತಂದೆಯಿಂದ ಪುತ್ರಿ , ಪ್ರಿಯಕರನ ಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST

ಸವದತ್ತಿ (ಬೆಳಗಾವಿ ಜಿಲ್ಲೆ):  ತಾಲ್ಲೂಕಿನ ಬೆಟಸೂರ ಗ್ರಾಮದಲ್ಲಿ ಗುರುವಾರ ತಂದೆಯೇ ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ.

ರುಕ್ಮವ್ವ ಅಲಿಯಾಸ್‌ ರುಕ್ಮಿಣಿ (16) ಹಾಗೂ ಮಂಜು ಭೀಮಪ್ಪ ಪಡೆಸೂರ (20) ಕೊಲೆಗೀಡಾಗಿದ್ದಾರೆ. ಆರೋಪಿ ಯಲ್ಲಪ್ಪ ಭೀಮಪ್ಪ ಆಡಿನ (45) ಎಂಬಾತನನ್ನು ಬಂಧಿಸಲಾಗಿದೆ.

ರುಕ್ಮವ್ವ ಹಾಗೂ ಅದೇ ಗ್ರಾಮದ ಮಂಜು ಪ್ರೀತಿಸುತ್ತಿದ್ದರು. ಇದನ್ನು ಸಹಿಸದ ಯಲ್ಲಪ್ಪ ಕೊಡ್ಲಿಯಿಂದ ಕುತ್ತಿಗೆ ಕಡಿದು, ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ADVERTISEMENT

‘ಮಗಳು ಹಾಗೂ ಮಂಜು ಮನೆಯಲ್ಲಿ ಒಟ್ಟಿಗೇ ಇದ್ದುದನ್ನು ನೋಡಿದ್ದರಿಂದ ಸಿಟ್ಟು ಬಂದು ಕೊಲೆ ಮಾಡಿದ್ದಾಗಿ ಯಲ್ಲಪ್ಪನೇ ತಿಳಿಸಿದ್ದಾನೆ. ತಾನಾಗಿಯೇ ಸವದತ್ತಿ ಠಾಣೆಗೆ ಶರಣಾಗಿದ್ದಾನೆ. ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ತಿಳಿಸಿದರು.

‘ತನ್ನ ಪುತ್ರಿಯೊಂದಿಗೆ ಸಲುಗೆಯಿಂದ ಇದ್ದ ಯುವಕನನ್ನು ಯಲ್ಲಪ್ಪ ಕೊಲೆ ಮಾಡಿದ್ದಾನೆ. ಇದನ್ನು ಮರ್ಯಾದೆಗೇಡು ಹತ್ಯೆ ಎನ್ನಲಾಗದು’ ಎಂದು ಎಸ್ಪಿ ಹೇಳಿದರು.

ವಿದ್ಯಾರ್ಥಿ ಬಂಧನ
ಮೈಸೂರು:
ಅಶ್ಲೀಲ ವೆಬ್‌ಸೈಟ್‌ವೊಂದಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಭಾವಚಿತ್ರ ಹಾಗೂ ಮೊಬೈಲ್‌ ಸಂಖ್ಯೆಗಳನ್ನು ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ವಿ ವಿದ್ಯಾರ್ಥಿ ಜಯಂತ್‌ಕುಮಾರ್ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ದತ್ತಿ ನಿಧಿ ಬಹುಮಾನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು:
ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಚಿ. ಶ್ರೀನಿವಾಸರಾಜು ದತ್ತಿನಿಧಿ’ ಬಹುಮಾನಕ್ಕೆ ಯುವ ಕವಿಗಳಿಂದ ಅರ್ಜಿ ಆಹ್ವಾನಿಸಿದೆ.
30 ವರ್ಷದ ಒಳಗಿನ ಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತ ಪ್ರತಿಯನ್ನು ಮೇ 31ರೊಳಗೆ ಕನ್ನಡ ಭವನದಲ್ಲಿರುವ ಅಕಾಡೆಮಿಯ ಕಚೇರಿಗೆ ಸಲ್ಲಿಸಬೇಕು.

ವಿವರಗಳಿಗೆ www.karnatakasahithyaacademy.org ಅಥವಾ ದೂ.ಸಂ. 080–22211730/22106460 ಸಂಪರ್ಕಿಸುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.