ADVERTISEMENT

ತಹಶೀಲ್ದಾರ್‍ಗಳಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ಪಕ್ಕಾಪೋಡಿ ದಾಖಲೆಗೆ ಅಂಕಿತ ಹಾಕುವ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡಿ, ಒಂದು ವಾರದೊಳಗೆ ಆದೇಶ ಹೊರಡಿಸಿ ಎಂದು ಮುಖ್ಯಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಜಮೀನಿನ ಪಕ್ಕಾ ಪೋಡಿ ಮಾಡಿ, ಭೂದಾಖಲೆ ನೀಡುವ ಕೆಲಸ ಬಹಳ ವರ್ಷಗಳಿಂದ ಬಾಕಿ ಇದೆ. ಎಷ್ಟು ಬಾರಿ ಎಚ್ಚರಿಸಿದರೂ ಪ್ರಗತಿಯಾಗಿಲ್ಲ ಎಂದು ಅವರು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಅರ್ಜಿ ವಿಲೇವಾರಿಯಲ್ಲಿ ಪ್ರಗತಿ ಆಗಿಲ್ಲ. 30 ತಾಲ್ಲೂಕುಗಳಲ್ಲಿ ಸಮಿತಿ ರಚನೆಯಾಗಿಲ್ಲ. ಅಕ್ರಮ–ಸಕ್ರಮ ಅರ್ಜಿಗಳ ಇತ್ಯರ್ಥ ಕೆಲಸ ಬಾಕಿ ಇದೆ. ಕಾಲಮಿತಿಯಲ್ಲಿ ಎಲ್ಲಾ ಕೆಲಸ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಆದೇಶಿಸಿದರು ಎಂದು ತಿಳಿದುಬಂದಿದೆ.

ನೇರವಾಗಿ ಜನರಿಗೆ ಸಂಬಂಧಿಸಿರುವ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಕಂದಾಯ, ಅರಣ್ಯ, ಪಂಚಾಯತ್‌ರಾಜ್‌ ಇಲಾಖೆಗಳು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕು ಎಂದು  ಮುಖ್ಯಮಂತ್ರಿ ಸಲಹೆ ನೀಡಿದರು ಎನ್ನಲಾಗಿದೆ.

ಕೆಡಿಪಿ ಸಭೆ ನಡೆಸಲು ಸಚಿವರಿಗೆ ತಾಕೀತು: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹೋದ್ಯೋಗಿ ಸಚಿವರಿಗೆ ತಾಕೀತು ಮಾಡಿದ್ದಾರೆ.
ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಔಪಚಾರಿಕವಾಗಿ ನಡೆದ ಸಮಾಲೋಚನೆ ವೇಳೆ ನಾನಾ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ, ಜನರಿಗೆ ನೇರವಾಗಿ ಸಂಬಂಧಿಸಿದ ಇಲಾಖೆಗಳಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಕುರಿತು ಸಿದ್ದರಾಮಯ್ಯ ಅವರು ಇಲಾಖಾ ಸಚಿವರಿಂದ ಮಾಹಿತಿ ಪಡೆದರು ತಂದು ಗೊತ್ತಾಗಿದೆ.

ಅನೇಕ ಸಚಿವರು ಜಿಲ್ಲಾ ಮಟ್ಟದಲ್ಲಿ  ಕೆಡಿಪಿ ಸಭೆ ನಡೆಸದೇ ಇರುವುದು ಗಮ ನಕ್ಕೆ ಬಂದಿದೆ. ತಾಲ್ಲೂಕು ಮಟ್ಟದ ಸಭೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳಿಗೆ ಸೂಚನೆ ನೀಡುವ ಪರಿಪಾಠವನ್ನೆ ಇಟ್ಟು ಕೊಂಡಿಲ್ಲ. ಹಿಂದೆ ಸಚಿವರಾಗಿದ್ದವರು ಉದಾಸೀನ ತೋರಿದಂತೆ ನೀವೂ ತೋರಬೇಡಿ ಎಂದು ನೂತನ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು ಎಂದು ತಿಳಿದುಬಂದಿದೆ.

ಕೆಡಿಪಿ ಸಭೆ ನಡೆಸದೇ ಹೋದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಸಾಮಾನ್ಯ. ಸಚಿವರು ಪ್ರಶ್ನಿಸುತ್ತಾರೆ ಎಂಬ ಭಯ ಇದ್ದರೆಿ ಮಾತ್ರ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಜನರ ಕಷ್ಟ, ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರಿಗೆ ಸೂಚಿಸಿದರು ಎನ್ನಲಾಗಿದೆ.

ಮುಂದಿನ ಎರಡು ವರ್ಷ ಚುನಾವಣೆಗೆ ಸಜ್ಜುಗೊಳ್ಳಬೇಕಾದ ಅವಧಿ. ಈಗಲೂ ಸಮರ್ಪಕವಾಗಿ ಜವಾಬ್ದಾರಿ  ನಿರ್ವಹಿಸದೇ ಇದ್ದರೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗುವ ಜತೆಗೆ, ಜನರ ಆಕ್ರೋಶಕ್ಕೂ ತುತ್ತಾಗಬೇಕಾಗುತ್ತದೆ ಎಂದು ಸಹೋದ್ಯೋಗಿಗಳನ್ನು ಎಚ್ಚರಿಸಿದರು ಎಂದು ತಿಳಿದುಬಂದಿದೆ.

ಮರಳು ಸಮಸ್ಯೆ: ಸಭೆ ಇಂದು

ಮರಳು ಸಮಸ್ಯೆಗೆ ಅಂತಿಮ ಪರಿಹಾರ ಕಂಡು ಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನು ಗುರುವಾರ (ಜುಲೈ 21ರಂದು) ನಡೆಸಲಿದ್ದಾರೆ.

ADVERTISEMENT

ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಈ ವಿಷಯ ತಿಳಿಸಿದ್ದಾರೆ.
ಬೇಡಿಕೆಗೆ ತಕ್ಕಂತೆ ನೈಸರ್ಗಿಕ ಮರಳು ಸಿಗುತ್ತಿಲ್ಲ. ರಾಜ್ಯಕ್ಕೆ 26 ದಶಲಕ್ಷ ಟನ್‌ ಮರಳು ಅಗತ್ಯವಿದ್ದು, ನೈಸರ್ಗಿಕ ಹಾಗೂ ಕೃತಕ ಮರಳು ಸೇರಿ 14–15 ದಶಲಕ್ಷ ಟನ್‌ ಲಭ್ಯವಿದೆ. ನೈಸರ್ಗಿಕ ಮರಳು ಸಂಗ್ರಹಕ್ಕಾಗಿ 856 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಆದರೆ,  ಸ್ಥಳೀಯರ ವಿರೋಧದಿಂದಾಗಿ ಮರಳು ಸಂಗ್ರಹಿಸಲು ಆಗುತ್ತಿಲ್ಲ ಎಂದರು.
ಕೃತಕ ಮರಳು ಉತ್ಪಾದನೆಗೆ  ಉತ್ತೇಜನ ನೀಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯಾ ಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮರಳು ನೀತಿಗೆ ಅಂತಿಮ ರೂಪುರೇಷೆ ನೀಡಲು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ ಎಂದು ಜಯಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.