ADVERTISEMENT

ತಾಂಜಾನಿಯಾ ವಿದ್ಯಾರ್ಥಿನಿ ಪ್ರಕರಣ: ಎಸಿಪಿ ತಲೆದಂಡ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ತಾಂಜಾನಿಯಾ ವಿದ್ಯಾರ್ಥಿನಿ  ಪ್ರಕರಣ: ಎಸಿಪಿ ತಲೆದಂಡ
ತಾಂಜಾನಿಯಾ ವಿದ್ಯಾರ್ಥಿನಿ ಪ್ರಕರಣ: ಎಸಿಪಿ ತಲೆದಂಡ   

ಬೆಂಗಳೂರು: ತಾಂಜಾನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದಡಿ ಯಶವಂತಪುರ ಉಪವಿಭಾಗದ ಎಸಿಪಿ ಅಶೋಕ ನಾರಾಯಣ ಪಿಸೆ ಶನಿವಾರ ಅಮಾನತಾಗಿದ್ದಾರೆ.

ದಾಂದಲೆ ನಡೆದಾಗ ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರಿಂದ ಆದ ಲೋಪಗಳ  ಬಗ್ಗೆ ಇಲಾಖಾ ತನಿಖೆ ನಡೆಸಿ ವರದಿ ಕೊಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್‌ರೆಡ್ಡಿ ಅವರಿಗೆ ಸೂಚಿಸಿದ್ದರು. ವರದಿ ಆಧರಿಸಿ ಡಿಜಿಪಿ ಈ  ಕ್ರಮ ಜರುಗಿಸಿದ್ದಾರೆ.

‘ಜ.31ರ ರಾತ್ರಿ ಹೆಸರಘಟ್ಟ ರಸ್ತೆಯಲ್ಲಿ ಅಪಘಾತ ಸಂಭವಿಸಿ, ದೊಡ್ಡ ಮಟ್ಟದ ದಾಂದಲೆ ನಡೆಯುತ್ತಿದ್ದರೂ ಎಸಿಪಿ ಸ್ಥಳಕ್ಕೆ ಹೋಗಿರಲಿಲ್ಲ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಮಿಷನರ್‌ ಕೋಪ: ‘ಗಲಾಟೆ ಬಗ್ಗೆ ಮಾಹಿತಿ ಪಡೆಯಲು ನಗರ ಪೊಲೀಸ್ ಕಮಿಷನರ್ ಎನ್‌.ಎಸ್.ಮೇಘರಿಕ್ ಅವರು ಆ ದಿನ ರಾತ್ರಿ 8 ಗಂಟೆಗೆ ಎಸಿಪಿಗೆ ಕರೆ ಮಾಡಿದ್ದರು. ಆಗ, ಘಟನಾ ಸ್ಥಳದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಎಸಿಪಿ ಸುಳ್ಳು ಹೇಳಿದ್ದರು’.

‘ಅಪಘಾತ ಹಾಗೂ ದಾಂದಲೆಯ ಬಗ್ಗೆ ಡಿಜಿಪಿ ವಿವರಣೆ ಕೇಳುತ್ತಿದ್ದಾರೆ. ತಕ್ಷಣವೇ ಪ್ರಾಥಮಿಕ ಮಾಹಿತಿ ಕೊಡಿ ಎಂದು ಕಮಿಷನರ್ ಕೇಳಿದಾಗ, ಎಸಿಪಿ ತೊದಲುತ್ತ ಅಸಮರ್ಪಕ  ಉತ್ತರ  ನೀಡಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಕಮಿಷನರ್, ನೀವಿನ್ನೂ ಘಟನಾ ಸ್ಥಳಕ್ಕೆ ಹೋಗಿಯೇ ಇಲ್ಲ. ಮೊದಲು ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಿ  ಎಂದು ಸೂಚಿಸಿದ್ದರು’.

‘ಕಮಿಷನರ್ ಅವರು ನೀಡಿದ ಈ ಹೇಳಿಕೆಯನ್ನೂ ವರದಿಯಲ್ಲಿ ಸೇರಿಸಿ, ಡಿಜಿಪಿಗೆ ಸಲ್ಲಿಸಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರ– ವಿರೋಧ ರ್‍್ಯಾಲಿ
ಆಫ್ರಿಕಾ ದೇಶಗಳ ವಿದ್ಯಾರ್ಥಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಸರಘಟ್ಟ ರಸ್ತೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರೆ, ತಾಂಜಾನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಖಂಡಿಸಿ, ‘ವಿಶ್ವ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆ’ (ಡಬ್ಲ್ಯೂಒಎಸ್‌ವೈ) ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮೇಣದ ಬತ್ತಿಯೊಂದಿಗೆ ಪ್ರತಿಭಟಿಸಿದರು.

ರ್‍ಯಾಲಿ ವೇಳೆ ಮಾತನಾಡಿದ ಕರವೇ ಕಾರ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ‘ಸುಳ್ಳು ದೂರು ದಾಖಲಿಸುವ ಮೂಲಕ ಆಫ್ರಿಕನ್ನರು ರಾಜ್ಯಕ್ಕೆ ಜನಾಂಗೀಯ ನಿಂದನೆಯ ಪಟ್ಟ ಕಟ್ಟಲು ಮುಂದಾಗಿದ್ದಾರೆ. ಅಲ್ಲದೆ, ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಸರ್ಕಾರ, ತನ್ನ ವೈಫಲ್ಯ ಮುಚ್ಚಿಕೊಳ್ಳಲು ಐವರು ಪೊಲೀಸರನ್ನು ಅಮಾನತುಗೊಳಿಸಿದೆ. ಕೂಡಲೇ ಇದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ವಿದೇಶಿ ವಿದ್ಯಾರ್ಥಿಗಳಿಗೆ ರಕ್ಷಣೆ ಭರವಸೆ ನೀಡುವಂತೆ ಡಬ್ಲ್ಯೂಒಎಸ್‌ವೈ ಕಾರ್ಯದರ್ಶಿ ಸಂಜೀವ್  ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT