ADVERTISEMENT

‘ತಾಕತ್ತಿದ್ದರೆ ಯಡಿಯೂರಪ್ಪ ಚರ್ಚೆಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
‘ತಾಕತ್ತಿದ್ದರೆ ಯಡಿಯೂರಪ್ಪ ಚರ್ಚೆಗೆ ಬರಲಿ’
‘ತಾಕತ್ತಿದ್ದರೆ ಯಡಿಯೂರಪ್ಪ ಚರ್ಚೆಗೆ ಬರಲಿ’   
ನಾಗಮಂಗಲ: ‘ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ನನ್ನ ಎದುರು ಚರ್ಚೆಗೆ ಬರಲಿ’ ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುರುವಾರ ಸವಾಲು ಹಾಕಿದರು.
 
ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಅಮವಾಸ್ಯೆ ಪ್ರಯುಕ್ತ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
 
‘ನನ್ನ 20 ತಿಂಗಳ ಆಡಳಿತದ ಅವಧಿಯನ್ನು ಟೀಕಿಸಲು ಯಾರಿಗೂ ನೈತಿಕತೆ ಇಲ್ಲ. ಆದಾಯ ತೆರಿಗೆ ಇಲಾಖೆಗೆ ನಮ್ಮ ಕುಟುಂಬದ ಬಗ್ಗೆ ದೂರು ನೀಡಿರುವ ವೆಂಕಟೇಶಗೌಡ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಅವರು ಬೆಟ್ಟವನ್ನು ಅಗೆದು ಇಲಿ ಹಿಡಿಯುವ ಯತ್ನ ಮಾಡಿದ್ದಾರೆ.

ಜಂತಕಲ್ ಗಣಿ ಬಗ್ಗೆ ಕೆದಕಿದ್ದಾರೆ. ಅಲ್ಲಿ ಏನೂ ಇಲ್ಲ. ನನ್ನ ವಿರುದ್ಧ ಹೇಳಿಕೆ ಕೊಡಲು ಒಬ್ಬರನ್ನು ನೇಮಿಸಿಕೊಂಡಂತಿದೆ. ಈ ಹಿಂದೆ ನನ್ನ ವಿರುದ್ಧ ಪತ್ರಿಕೆಗಳಲ್ಲಿ ಟೀಕಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿಯಾಗಿಯೂ ಮಾಡಿದ್ದರು. ಇವರೂ ಅದೇ ರೀತಿ ಕನಸು ಕಾಣುತ್ತ ಇರಬೇಕು. ಹಾಗಾಗಿ ಯಡಿಯೂರಪ್ಪ ಹೇಳಿದಂತೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
 
‘ದಲಿತರ ಕೇರಿಗೆ ಹೋಗಿ ಬಂದ ನಂತರ ಅಲ್ಲಿನ ಸಮಸ್ಯೆಗಳನ್ನು ಮರೆಯದೇ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ. ಪ್ರಚಾರಕ್ಕಾಗಿ ಹೋಗಿ ಬಂದರೆ ಜನರು ಕ್ಷಮಿಸುವುದಿಲ್ಲ’ ಎಂದರು.
 
‘ವಿಧಾನಸಭೆಗೆ ಡಿಸೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆದರೆ ಅಚ್ಚರಿಪಡಬೇಕಾಗಿಲ್ಲ. ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನಡೆಸುತ್ತಿರುವ ಸಭೆಗಳಿಂದಲೇ ಅದು ಅರ್ಥವಾಗುತ್ತದೆ. ಸರ್ಕಾರವು ಆ ದಿಸೆಯಲ್ಲಿ ಅಲೋಚಿಸುತ್ತಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.