ADVERTISEMENT

ತೀವ್ರವಾಗಲಿದೆ ಬಿಸಿಲು

ಇನ್ನೂ ಎರಡು ದಿನ ಹೆಚ್ಚು ಉಷ್ಣಾಂಶ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2016, 19:46 IST
Last Updated 25 ಏಪ್ರಿಲ್ 2016, 19:46 IST
ದಣಿವಾರಿಸಿಕೊಳ್ಳಲು ಮೈಸೂರಿನಲ್ಲಿ ಎಳನೀರು ಕುಡಿಯುತ್ತಿರುವ ಯುವಕರು (ಸಂಗ್ರಹ ಚಿತ್ರ)
ದಣಿವಾರಿಸಿಕೊಳ್ಳಲು ಮೈಸೂರಿನಲ್ಲಿ ಎಳನೀರು ಕುಡಿಯುತ್ತಿರುವ ಯುವಕರು (ಸಂಗ್ರಹ ಚಿತ್ರ)   

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳು ಈ ಬಾರಿಯ ಬೇಸಿಗೆಯಲ್ಲಿ ಇದೇ ಮೊದಲು ಬಾರಿಗೆ ಉತ್ತರ ಒಳನಾಡಿನ ಜಿಲ್ಲೆಗಳಂತೆ ಹೆಚ್ಚಿನ ಉಷ್ಣಾಂಶ ದಾಖಲಿಸಿವೆ. ಕಳೆದ ಎರಡು ದಿನಗಳಿಂದ ಈ ರೀತಿ ಆಗಿದೆ.

ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಸೆಲ್ಷಿಯಸ್‌ಗಳಷ್ಟು ಹೆಚ್ಚಿನ ಉಷ್ಣಾಂಶ ಎದುರಿಸಲು ಜನ ಸಿದ್ಧರಾಗಬೇಕು ಎಂದು ಭಾರತೀಯ ಹವಾಮಾನ ಇಲಾಖೆ ‘ಕಿತ್ತಳೆ ವರ್ಣದ ಎಚ್ಚರಿಕೆ’ (ಆರೆಂಜ್‌ ಅಲರ್ಟ್) ರವಾನಿಸಿದೆ. ಏಪ್ರಿಲ್‌ 22ರಿಂದಲೂ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ಎರಡು ದಿನಗಳವರೆಗೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಇಲ್ಲ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿದ್ದು, ಉಷ್ಣಾಂಶದಲ್ಲೂ ಏರಿಕೆ ದಾಖಲಿಸಿವೆ.

ADVERTISEMENT

ಈಶಾನ್ಯ ದಿಕ್ಕಿನಿಂದ ಬೀಸುತ್ತಿರುವ ಬಿಸಿ ಗಾಳಿಯು ತೆಲಂಗಾಣ, ಆಂಧ್ರ, ತಮಿಳುನಾಡುಗಳ ವರೆಗೂ ವಿಸ್ತರಿಸಿದೆ. ಹಾಗಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆ ಬಳ್ಳಾರಿಯ ತಾಪಮಾನ 45.1 ಡಿಗ್ರಿ ಸೆಲ್ಷಿಯಸ್ ಆಗಿತ್ತು ಎಂದು ರಾಜ್ಯದ ಬರ ಉಸ್ತುವಾರಿ ಘಟಕದ ಮೂಲಗಳು ತಿಳಿಸಿವೆ. ಈ ಸಲ ಇದುವರೆಗೆ ರಾಜ್ಯದ 30 ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳು ಮಾತ್ರ 40 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ತಾಪಮಾನ ಕಂಡಿವೆ.

ಮೈಸೂರಿನಲ್ಲಿ ಶತಮಾನದ ದಾಖಲೆ ಉಷ್ಣಾಂಶ
ಮೈಸೂರು/ಮಂಡ್ಯ:
ನಗರದ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಬಿಸಿಲ ಬೇಗೆಗೆ ಬೆಚ್ಚಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ 39.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಏಪ್ರಿಲ್‌ ತಿಂಗಳಿನಲ್ಲಿ ನೂರು ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವಿದು. 1917ರ ಏಪ್ರಿಲ್‌ 4ರಂದು 39.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಎಲ್ಲಾ ತಿಂಗಳಿಗೆ ಹೋಲಿಸಿದರೆ ಕಳೆದ 16 ವರ್ಷಗಳಲ್ಲಿ ಕಂಡು ಬಂದ ಅತಿ ಹೆಚ್ಚಿನ ತಾಪಮಾನ ಕೂಡ.

ಸೋಮವಾರದ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌. ಐಎಂಡಿ ಮುನ್ಸೂಚನೆ ಪ್ರಕಾರ ಬುಧವಾರದವರೆಗೆ ಇಷ್ಟೇ ಉಷ್ಣಾಂಶ ಇರಲಿದೆ.
ಅಂಬಾ ವಿಲಾಸ ಅರಮನೆ ವೀಕ್ಷಿಸಲು ಬಂದಿದ್ದ ಹೆಚ್ಚಿನ ಪ್ರವಾಸಿಗರು ಕೊಡೆ ಹಿಡಿದು ಸುತ್ತಾಡುತ್ತಿದ್ದ ದೃಶ್ಯ ಕಂಡು ಬಂತು. ಮಧ್ಯಾಹ್ನದ ವೇಳೆ ವಾಹನಗಳ ಸಂಚಾರವೂ ಕಡಿಮೆಯಾಗಿತ್ತು.

ಎಳನೀರು ಹಾಗೂ ಹಣ್ಣಿನ ರಸಗಳ ಬೇಡಿಕೆ ಹೆಚ್ಚಾಗಿದ್ದು, ತಂಪು ಪಾನೀಯಗಳ ಅಂಗಡಿಗಳಲ್ಲಿ ಜನಜಂಗುಳಿ. ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ಟ್ಯಾಂಕರ್‌ ನೀರಿಗೂ ಬೇಡಿಕೆ ಹೆಚ್ಚಾಗಿದ್ದು, ಖಾಸಗಿ ಟ್ಯಾಂಕರ್‌ ನೀರು ದುಬಾರಿಯಾಗಿದೆ.

‘ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಇರುತ್ತಿದ್ದ ತಾಪಮಾನ ಈ ಬಾರಿ ಏಪ್ರಿಲ್‌ನಲ್ಲೂ ಕಂಡು ಬರುತ್ತಿದೆ. ಕಳೆದ 15 ವರ್ಷಗಳ ಬೇಸಿಗೆಗೆ ಹೋಲಿಸಿದರೆ ಈ ಬಾರಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಾಗಿದೆ’ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ನರೇಂದ್ರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡ್ಯ: ಬಿಸಿಲಿನ ತಾಪಕ್ಕೆ ಮಂಡ್ಯ ಜಿಲ್ಲೆಯ ಜನ ತತ್ತರಿಸಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಉಷ್ಣಾಂಶ ಈ ವರ್ಷ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಉಷ್ಣಾಂಶದಲ್ಲಿ ಆದ ಹೆಚ್ಚಳದಿಂದಾಗಿ ಧಗೆ ಹೆಚ್ಚಾಗಿದೆ. ಜಿಲ್ಲೆಯ ಜನರಿಗೆ ಮೊದಲ ಬಾರಿಗೆ ಬಿಸಿಗಾಳಿಯ ಅನುಭವವೂ ಆಗುತ್ತಿದೆ.

ವಿದ್ಯುತ್‌ ಕಡಿತ ಜನರ ಬೇಗೆಯನ್ನು ಹೆಚ್ಚಿಸಿದೆ. ಜನರು ಮಧ್ಯಾಹ್ನದ ವೇಳೆ ಹೊರಬರಲು ಹೆದರುತ್ತಿದ್ದಾರೆ. ತಂಪುಪಾನೀಯ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿದೆ. ನಗರದಲ್ಲಿ ಸೋಮವಾರ ಸಂಜೆ ಐದು ನಿಮಿಷಗಳ ಕಾಲ ಸುರಿದ ಮಳೆ ಬಿಸಿಲಿನ ಧಗೆಯನ್ನು ಮತ್ತಷ್ಟು ಹೆಚ್ಚಿಸಿತು.

ಚಿತ್ರದುರ್ಗ: 40.4 ಡಿ.ಸೆ. ಇದು 123 ವರ್ಷಗಳಲ್ಲಿ ಅತ್ಯಧಿಕ ಉಷ್ಣಾಂಶ.

ಹವಾಮಾನ ಇಲಾಖೆಯು ನಾಲ್ಕು ಬಣ್ಣಗಳನ್ನು ಬಳಸಿ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಬೇರೆ ಬೇರೆ ಬಣ್ಣದ ಸಂದೇಶಗಳ ಅರ್ಥ ಹೀಗಿದೆ.
ಕೆಂಪು:
ಪರಿಸ್ಥಿತಿ ಎದುರಿಸಲು ಕ್ರಮ ಕೈಗೊಳ್ಳಲು ಸೂಚನೆ.
ಕಿತ್ತಳೆ: ಪರಿಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಸೂಚನೆ.
ಹಳದಿ: ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿರಲು ಸೂಚನೆ.
ಹಸಿರು: ಏನೂ ಭಯಬೇಡ ಎಂಬ ಸೂಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.