ADVERTISEMENT

ತೆರಿಗೆ ಸಂಗ್ರಹಕ್ಕೆ ಉದಾಸೀನ ಸಿ.ಎಂ.ಸಿದ್ದರಾಮಯ್ಯ ತರಾಟೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2015, 19:32 IST
Last Updated 14 ಅಕ್ಟೋಬರ್ 2015, 19:32 IST

ಬೆಂಗಳೂರು: ತೆರಿಗೆ ಸಂಗ್ರಹ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿಧಾನಸೌಧದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಇದೇ ರೀತಿ ಉದಾಸೀನ ಮುಂದುವರಿಸುವ ಅಧಿಕಾರಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮುಂದಿನ ಮಾರ್ಚ್‌ ವೇಳೆಗೆ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧನೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ಸಮೀಕ್ಷೆಗೆ ಸೂಚನೆ: ವೃತ್ತಿ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ  ವ್ಯಾಪ್ತಿಗೆ ಸೇರಬೇಕಾದವರನ್ನು ಪತ್ತೆ ಮಾಡುವುದು ಅಧಿಕಾರಿಗಳ ಕರ್ತವ್ಯ. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುವಂತೆ ಅವರು ಸೂಚಿಸಿದರು.

ಅಬಕಾರಿ ಜಂಟಿ ಆಯುಕ್ತರಿಗೆ ತರಾಟೆ: ಅಬಕಾರಿ ಇಲಾಖೆಯಲ್ಲಿ ತೆರಿಗೆ ಸೋರಿಕೆಯಾಗುತ್ತಿರುವ ಸಂಬಂಧ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಿದರು.

ತೆರಿಗೆ ಸಂಗ್ರಹ ಕುಂಠಿತವಾಗಿರುವುದಕ್ಕೆ ಕೆಲವು ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಅವರು, ಸಂಗ್ರಹದಲ್ಲಿ ಹಿಂದೆ ಬಿದ್ದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನೀರಾ ಇಳಿಸಲು ಅನುಮತಿ ನೀಡುವ  ಕುರಿತು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶೇ 10.14 ಪ್ರಗತಿ: ಅಬಕಾರಿ ತೆರಿಗೆ ಸಂಗ್ರಹ ಸಂಬಂಧ ಪ್ರಸಕ್ತ ಸಾಲಿನಲ್ಲಿ ₹ 15,200 ಕೋಟಿ ಗುರಿ ನೀಡಲಾಗಿತ್ತು. ಸೆಪ್ಟೆಂಬರ್‌ ಅಂತ್ಯದ ವೇಳೆಗೆ ₹ 7,417 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 10.14ರಷ್ಟು ಹೆಚ್ಚಳವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.

ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನರಸಿಂಹ ರಾಜು, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ , ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು ‘ತೆರಿಗೆ ಸಂಗ್ರಹ ನಿರೀಕ್ಷೆಯಂತೆ ನಡೆಯುತ್ತಿದೆ’ ಎಂದರು.
*
₹22 ಸಾವಿರ ಕೋಟಿ ಸಂಗ್ರಹ
‘ಸೆಪ್ಟೆಂಬರ್ ಅಂತ್ಯದವರೆಗೆ ₹ 21,918 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. 2014–15ನೇ ಸಾಲಿನಲ್ಲಿ ಈ ಅವಧಿಯಲ್ಲಿ ₹20 ಸಾವಿರ ಕೋಟಿ ಸಂಗ್ರಹವಾಗಿತ್ತು. ಈ ವರ್ಷದ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ 9.12 ರಷ್ಟಿದೆ. ಉಳಿದ ತಿಂಗಳುಗಳಲ್ಲಿ ₹ 18,981 ಕೋಟಿ (ತೈಲ ಕಂಪೆನಿಗಳನ್ನು ಹೊರತುಪಡಿಸಿ) ಸಂಗ್ರಹಿಸಬೇಕಾಗಿದೆ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.