ADVERTISEMENT

ದೇಶಭಕ್ತಿಗೆ ಎದೆಯುಬ್ಬಿಸಿದ ಜನ...

ಗಣರಾಜ್ಯೋತ್ಸವದಲ್ಲಿ ಗಮನ ಸೆಳೆದ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 9:58 IST
Last Updated 26 ಜನವರಿ 2015, 9:58 IST

ಬೆಂಗಳೂರು: ಶುಭ್ರ ನೀಲಾಕಾಶದಲ್ಲಿ ಹಾರಾಡಿದ ತ್ರಿವರ್ಣ ಧ್ವಜ, ಧ್ವಜಾರೋಹಣದ ವೇಳೆ ಹೆಲಿಕಾಪ್ಟರ್‌ ಮೂಲಕ ಉದುರಿದ ಗುಲಾಬಿ ದಳಗಳ ಹೂ ಮಳೆ, ಜತೆಗೆ ‘ಜನಗಣ ಮನ’ ರಾಷ್ಟ್ರಗೀತೆಯ ನಿನಾದ, ರಾಷ್ಟ್ರಗೀತೆಯ ನಿನಾದಕ್ಕೆ ದೇಶಭಕ್ತಿಯಲ್ಲಿ ಎದೆಯುಬ್ಬಿಸಿದ ಜನ.....

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ  ಸೋಮವಾರ ನಡೆದ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮದ ಪರಿಯಿದು.
ಸಮಾರಂಭದಲ್ಲಿ ಸೇನೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದರೆ, ವಿವಿಧ ಶಾಲೆಗಳ ಮಕ್ಕಳು ರಾಷ್ಟ್ರಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿದರು. ಅದೇ ವೇಳೆಗೆ ವಾಯುಪಡೆಯ ಹೆಲಿ­ಕಾಪ್ಟರ್‌ನಿಂದ ಗುಲಾಬಿ ಹೂ ದಳಗಳ ಸುರಿಮಳೆ. ಧ್ವಜಾರೋಹಣದ ನಂತರ ರಾಜ್ಯಪಾಲರು ತೆರೆದ ಜೀಪ್‌ನಲ್ಲಿ ಪರೇಡ್ ತಂಡಗಳ ಬಳಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ಪಥ ಸಂಚಲನದಲ್ಲಿ ಸೇನೆ, ಪೊಲೀಸ್, ಎನ್‌ಸಿಸಿ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಪಥ ಸಂಚಲನ ನಡೆಸಿ, ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದವು.

ರಮಣ ಮಹರ್ಷಿ ಅಂಧರ ಶಾಲೆ, ಸಮರ್ಥನಂ ಸಂಸ್ಥೆಯ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬ್ಯಾಂಡ್‌ನ ಲಯಕ್ಕೆ ತಕ್ಕಂತೆ 55 ವಿವಿಧ ತುಕಡಿಗಳು ಶಿಸ್ತಿನಿಂದ ಹೆಜ್ಜೆ ಹಾಕಿದವು.

ಕಾವೇರಿ ಶಾಲಾ ತಂಡ, ಅಶ್ವಿನಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ತಂಡ, ತ್ರಿವೇಣಿ ಪಬ್ಲಿಕ್‌ ಶಾಲೆ, ಎನ್‌ಎಸ್‌ಎಸ್‌ ಬಾಲಕರ ತಂಡ, ಎನ್‌ಎಸ್‌ಎಸ್‌ ಬಾಲಕಿಯರ ತಂಡ, ಭಾರತ್‌ ಸೇವಾದಳ ಬಾಲಕರ ತಂಡ, ಪ್ರೆಸಿಡೆನ್ಸಿ ಶಾಲೆ, ಕೆಂಬ್ರಿಜ್‌ ಶಾಲಾ ತಂಡಗಳು ಪಥ ಸಂಚಲನ­ದಲ್ಲಿ ಭಾಗವಹಿಸಿದ್ದವು. ಪೊಲೀಸ್ ಬ್ಯಾಂಡ್‌ನ ಕಲಾವಿದರು ವಾದ್ಯಗಳ ಮೂಲಕ ‘ಸಾರೆ ಜಹಾಂಸೆ ಅಚ್ಚಾ’ ಹಾಡಿನ ಮೂಲಕ ಜೀವ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.