ADVERTISEMENT

ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡವರು ಜಾತ್ಯತೀತ ವಿರೋಧಿಗಳು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 19:30 IST
Last Updated 30 ನವೆಂಬರ್ 2017, 19:30 IST

ಮೈಸೂರು: ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡವರು ಜಾತ್ಯತೀತ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂವಿಧಾನಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲು ಯಾರಿಗೂ ಸಾಧ್ಯವಿಲ್ಲ. ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲೂ ಆಗದು. ಪೇಜಾವರ ಸ್ವಾಮೀಜಿ ಕುರಿತು ನಾನು ಮಾತನಾಡುವುದಿಲ್ಲ’ ಎಂದರು.

‘ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗೆಲ್ಲಲಿದೆ. ಜನರು ಕೋಮುವಾದಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಗುಜರಾತ್‌ ಚುನಾವಣೆಯಲ್ಲಿ ಸೋಲುವ ಭಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಹೀಗಾಗಿ, 155 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಒಂದು ರಾಜ್ಯದಲ್ಲಿ ಪ್ರಧಾನಿಯೊಬ್ಬರು ಈ ರೀತಿ ಪ್ರಚಾರ ಮಾಡಿದ್ದನ್ನು ನಾನು ನೋಡಿಲ್ಲ’ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ನಿಲ್ಲಿಸುತ್ತೇವೆ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಹೇಳಿಕೆ ಕುರಿತು, ‘ಜನರಿಗೆ ಉದ್ಯೋಗ ನೀಡಲು ಹಲವು ಯೋಜನೆಗಳಿವೆ. ಆದರೆ, ಹಸಿವು ಮುಕ್ತ ಮಾಡುವುದು ಅಷ್ಟೇ ಅವಶ್ಯ. ಎಲ್ಲರಿಗೂ ಕೆಲಸ ಕೊಡಬೇಕೆಂದು ಗಾಂಧೀಜಿ ಹಿಂದೆಯೇ ಹೇಳಿದ್ದರು. ಆದಾಗ್ಯೂ ನಿರುದ್ಯೋಗ, ಬಡತನವಿದೆ. ರಾಜಕೀಯ ಕಾರಣಕ್ಕೆ ದೇವೇಗೌಡರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.