ADVERTISEMENT

ಧಾರವಾಡದಲ್ಲಿ ಗಲಾಟೆ

ಅಭ್ಯರ್ಥಿ ಸೆರೆ ವಿರೋಧಿಸಿ ಧರಣಿ: ಶೆಟ್ಟರ್‌, ಜೋಶಿ ಬಂಧನ–ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 20:19 IST
Last Updated 13 ಫೆಬ್ರುವರಿ 2016, 20:19 IST
ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಯಿತು
ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಯಿತು   

ಧಾರವಾಡ: ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಇಲ್ಲಿ  ಪ್ರತಿಭಟನೆ ನಡೆಸಿದರಲ್ಲದೆ, ಪೊಲೀಸ್‌ ವಾಹನದ ಗಾಜುಗಳನ್ನು ಒಡೆದು ಹಾಕಿದರು.

ಇದೇ ಸಂದರ್ಭದಲ್ಲಿ ಕಿಡಿಗೇಡಿಗಳು ಎಸೆದ ಕಲ್ಲೊಂದು ಬಿಜೆಪಿ ರಾಜ್ಯಾಧ್ಯಕ್ಷ  ಪ್ರಹ್ಲಾದ ಜೋಶಿ ಅವರ ಕೈಗೆ ತಾಗಿತು. ಅಭ್ಯರ್ಥಿ ಬಂಧನದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ ಜೋಶಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ಈ ಮುಖಂಡರ ಬಂಧನಕ್ಕೆ ಪೊಲೀಸರು ಮುಂದಾದಾಗ ಕಲ್ಲು ತೂರಾಟ ನಡೆಯಿತು. ಹೀಗಾಗಿ  ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನೆಗೆ ಕಾರಣ: ತಾಲ್ಲೂಕಿನ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶಗೌಡ ಅವರು ಚುನಾವಣೆ ಮುನ್ನಾ ದಿನವಾದ ಶುಕ್ರವಾರ ಮಧ್ಯರಾತ್ರಿ ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ಪ್ರಚಾರ ನಡೆಸಿ, ಹಣ ಹಂಚಿಕೆ ಮಾಡಿದ್ದಾರೆ ಹಾಗೂ ಕಾನೂನು ಬಾಹಿರವಾಗಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಪಡೆದ ಪಿಎಸ್‌ಐ ಎಸ್‌.ಎಸ್‌.ಕಮತಗಿ ಸ್ಥಳಕ್ಕೆ ತೆರಳಿದ್ದರು.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಘಟನೆಯ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಕೂಡ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ , ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಹೊರಿಸಿ ಯೋಗೀಶಗೌಡ ಅವರನ್ನು ಬಂಧಿಸಿ  ನ್ಯಾಯಾಧೀಶರ ಮುಂದೆ   ಹಾಜರುಪಡಿಸಲಾಯಿತು. 14  ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜೋಶಿ ಮತ್ತು ಶೆಟ್ಟರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು.  ಗೌಡರ ಬಂಧನದ ಹಿಂದೆ ಸಚಿವ ವಿನಯ ಕುಲಕರ್ಣಿ ಕೈವಾಡವಿದೆ ಎಂದು ಆರೋಪಿಸಿದರು. ಸಚಿವರು ಹಾಗೂ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್‌ ವಿರುದ್ಧ ಘೋಷಣೆ ಕೂಗಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಜಿನೇಂದ್ರ ಖನಗಾವಿ ಅವರು ಶೆಟ್ಟರ್, ಜೋಶಿ ಸೇರಿದಂತೆ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯುವಂತೆ ಸೂಚಿಸಿದರು.

ಬಿಡುಗಡೆ ನಂತರ ಶೆಟ್ಟರ್‌ ಮತ್ತು ಜೋಶಿ ಅವರು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಯೋಗೀಶಗೌಡ ಅವರನ್ನು ಭೇಟಿ ಮಾಡಿದರು.

ಮಾರಾಮಾರಿ: ಚಿತ್ರದುರ್ಗ ತಾಲ್ಲೂಕಿನ ಸೂರನಗೊಲ್ಲರಹಟ್ಟಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಮತದಾನದ ನಂತರ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮತದಾನಕ್ಕೆ ಸಂಬಂಧಿಸಿ ಗುಂಪು ಘರ್ಷಣೆ ನಡೆದಿದ್ದು, ನಾಲ್ವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

* ದರೋಡೆ, ಹಲ್ಲೆ, ದೊಂಬಿ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ವ್ಯಕ್ತಿಯನ್ನು ರಕ್ಷಿಸಲು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿರುವುದು ಹಾಸ್ಯಾಸ್ಪದ
-ವಿನಯ ಕುಲಕರ್ಣಿ
ಧಾರವಾಡ ಜಿಲ್ಲಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.