ADVERTISEMENT

ಧೈರ್ಯ ಇದ್ದರೆ ಈಶ್ವರಪ್ಪ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಅನ್ನಲಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ/ಕೊಪ್ಪಳ: ‘ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕೆ ಹೇಳುತ್ತಿಲ್ಲ.  ಧೈರ್ಯ ಇದ್ದರೆ ಹಾಗೆ ಒಮ್ಮೆ ಹೇಳಲಿ’  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ನೇರ ಸವಾಲು ಹಾಕಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಈಶ್ವರಪ್ಪ ಅವರು ದಲಿತರು, ಹಿಂದುಳಿದ ವರ್ಗಗಳ ಮತ ಬೇಕು ಎನ್ನುತ್ತಿದ್ದಾರೆ. ಅದ್ಯಾಕೆ ಹಾಗೆ ಹೇಳಬೇಕು? ನಾನೇ ಮುಖ್ಯಮಂತ್ರಿ ಆಗಬೇಕು. ಮತ ಹಾಕಿ ಎಂದು ಹೇಳಲಿ’ ಎಂದು ಛೇಡಿಸಿದರು.

‘ಈಶ್ವರಪ್ಪ ಮಾತ್ರವಲ್ಲ, ಅವರ ಪಕ್ಷಕ್ಕೂ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾದ ಕಾಳಜಿ ಇಲ್ಲ. ಚುನಾವಣೆಗಳು ಹತ್ತಿರವಾಗುತ್ತಿರುವ ಕಾರಣ ರಾಜಕಾರಣಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದಾರೆ. ಇದು ಯಡಿಯೂರಪ್ಪನವರ ಕಾಲೆಳೆಯಲು ಹೂಡಿರುವ ತಂತ್ರವೂ ಹೌದು’ ಎಂದು ಅವರು ಕಿಚಾಯಿಸಿದರು.

ಚುನಾವಣೆ ಸಲುವಾಗಿ ಅಲ್ಪಸಂಖ್ಯಾತರನ್ನು ಬಿಟ್ಟು ಕೇವಲ ‘ಹಿಂದ... ಹಿಂದ.. (ಹಿಂದುಳಿದ, ದಲಿತ) ಎನ್ನುತ್ತಿದ್ದಾರೆ. ಇವರೆಂದೂ ಸಾಮಾಜಿಕ ನ್ಯಾಯದ ಪರ ಇರಲಿಲ್ಲ. ಯಡಿಯೂರಪ್ಪ, ಈಶ್ವರಪ್ಪ– ಇಬ್ಬರೂ ಹಿಂದುಳಿದ ಮತ್ತು ದಲಿತ ವಿರೋಧಿಗಳು’ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದು ಈಶ್ವರಪ್ಪ ಹುಟ್ಟು ಹಾಕಿದ ಸುದ್ದಿ ‘ನಾನು ಅಹಿಂದ ವರ್ಗದಿಂದ ದೂರ ಉಳಿಯುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಎಚ್‌. ವಿಶ್ವನಾಥ ಹೇಳಿರುವುದು ಸುಳ್ಳು. ಇದು ಕೆ.ಎಸ್‌.ಈಶ್ವರಪ್ಪ ಹುಟ್ಟು ಹಾಕಿದ ಸುದ್ದಿ’ ಎಂದು ಮುಖ್ಯಮಂತ್ರಿ ಕೊಪ್ಪಳದಲ್ಲಿ ಹೇಳಿದರು.

ವಿಶ್ವನಾಥ್‌ ಹೋಗಲ್ಲ: ‘ಮೈಸೂರಿನ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಭೇಟಿ ಮಾಡಲು ಈಶ್ವರಪ್ಪ ಹೋಗಿ ದ್ದಾರೆ. ಇಷ್ಟಕ್ಕೂ ವಿಶ್ವನಾಥ್‌, ಸಾಮಾಜಿಕ ನ್ಯಾಯದ ವಿರುದ್ಧ ಇರುವವರ ಜತೆ ಹೋಗುವುದಿಲ್ಲ. ಅವರ ಭೇಟಿ ಹಿಂದೆಯೂ ರಾಜಕೀಯ ಇದೆ. ಅವರು ನಮ್ಮೊಟ್ಟಿಗೇ ಇರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಗಮ ಮಂಡಳಿ ನೇಮಕ: ನಿಗಮ–ಮಂಡಳಿಗಳ ಎರಡನೇ ಅವಧಿಗೆ ಆದಷ್ಟು ಬೇಗ ನೇಮಕ ಮಾಡಲಾಗು ವುದು. ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಸಲಹೆ ನೀಡಲು ಸಮಿತಿ ರಚಿಸಿದ್ದು, ಅದರ ವರದಿ ಬಂದ ನಂತರ ವೇತನ ಹೆಚ್ಚಿಸಲಾಗುವುದು ಎಂದರು.

ಮದುವೆಗೆ ಮೋದಿ ಹೋದುದು ಸರಿನಾ?

‘ನಟಿ ರಮ್ಯಾ, ಪಾಕ್‌ ಪರ ಮಾತನಾಡಿರುವುದರಲ್ಲಿ ತಪ್ಪೇನೂ ಇಲ್ಲ. ಹಾಗಾದರೆ, ಪ್ರಧಾನಿ ಮೋದಿ ಏಕೆ ಷರೀಫ್‌ ಮೊಮ್ಮಗಳ ಮದುವೆಗೆ ಹೋಗಿದ್ದು? ಅದನ್ನು ನಾವು ಏನನ್ನಬೇಕು? ಅಡ್ವಾಣಿ ಅವರು ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಏನು ಹೇಳಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಏಕೆ ಅದು ಪಾಕ್‌ ಪರ ಹೇಳಿಕೆ ಅನ್ನಲಿಲ್ಲ?  ಇಷ್ಟಕ್ಕೂ ಬಿಜೆಪಿಯವರಿಂದ ದೇಶ ಪ್ರೇಮದ ಪಾಠ ಕಲಿಯಬೇಕಿಲ್ಲ. ಇವರು ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ಭಾವಚಿತ್ರವನ್ನೇ ಹಾಕಿಕೊಳ್ಳದವರು. ಇವರು ಯಾರಿಗೆ ಪಾಠ ಹೇಳುತ್ತಾರೆ’ ಎಂದು ಛೇಡಿಸಿದರು.

ADVERTISEMENT

ಕಲಬುರ್ಗಿ ಹತ್ಯೆ: ತನಿಖೆ ನಡೆದಿದೆ..

ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿ ಗಳು ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಸಿಐಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ. ದಾಬೋಲ್ಕರ್‌ ಹತ್ಯೆಗೂ ಕಲಬುರ್ಗಿ ಹತ್ಯೆಗೂ ಸಾಮ್ಯತೆ ಇದೆ. ಹಂತಕರನ್ನು ಪತ್ತೆಹಚ್ಚುವ ಕೆಲಸ ನಡೆದಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಲಬುರ್ಗಿ ಹತ್ಯೆಯಾಗಿ ನಾಳೆಗೆ (ಆ.30) ಒಂದು ವರ್ಷ ಆಗಲಿದೆ. ಆದರೆ, ಆರೋಪಿಗಳು ಸಿಕ್ಕಿಲ್ಲ. ನಮ್ಮ ಪೊಲೀಸರು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ’ ಎಂದರು.
‘ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದು ಯಾವ ಹಂತದಲ್ಲಿ ಇದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

ತಮಿಳುನಾಡಿಗೆ ನೀರಿಲ್ಲವೆಂದು ಹೇಳಿದ್ದೇವೆ
ಮೈಸೂರು: ‘ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಹೇಳಿಲ್ಲ. ನೀರಿಲ್ಲವೆಂದು ಹೇಳಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ತಿಳಿಸಿದರು.
‘ಕಬಿನಿ, ಹಾರಂಗಿ, ಹೇಮಾವತಿ, ಕೆಆರ್‌ಎಸ್‌ ಜಲಾಶಯಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 114 ಟಿಎಂಸಿ. ಹೂಳು ತುಂಬಿರುವು ದರಿಂದ 104 ಟಿಎಂಸಿ ನೀರು ಸಂಗ್ರ ಹವಾಗುತ್ತದೆ. ಆದರೆ, 4 ಜಲಾಶ ಯಗಳಲ್ಲಿ ಕೇವಲ 50 ಟಿಎಂಸಿ ನೀರಿದೆ. ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಕುಡಿಯಲು 40 ಟಿಎಂಸಿ ನೀರು ಬೇಕು. ಉಳಿ ಯುವುದು ಕೇವಲ 10 ಟಿಎಂಸಿ ನೀರು. ಈ ವಸ್ತುಸ್ಥಿತಿಯನ್ನು           ಸುಪ್ರೀಂಕೋರ್ಟ್‌ಗೆ ತಿಳಿಸುತ್ತೇವೆ’ ಎಂದು ಸುದ್ದಿಗಾರರಿಗೆ ಹೇಳಿದರು.
‘ತಮಿಳುನಾಡಿನವರು 50 ಟಿಎಂಸಿ ನೀರು ಕೇಳುತ್ತಿರುವುದು ಕುಡಿಯಲು ಅಲ್ಲ, ನೀರಾವರಿಗೆ. ನಮಗೆ ಕುಡಿಯಲು ನೀರು ಬೇಕು. ಹೀಗೆಂದು ನಾವು ನೀರು ಬಿಡದಿ ರಲೂ ಆಗದು. ಒಳಹರಿವು ಹೆಚ್ಚಾದ ಹಾಗೆ ಹೊರಹರಿವೂ ಹೆಚ್ಚುತ್ತದೆ.  ಎಷ್ಟು ಬಿಡಬೇಕು ಎನ್ನುವ ಕುರಿತು ನೀರಾವರಿ ಇಲಾಖೆಯವರು ಕ್ರಮ ವಹಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.