ADVERTISEMENT

ನಂದಿತಾಳದು ಆತ್ಮ ಹತ್ಯೆ

ಕಲಿಕಾ ಹಿನ್ನಡೆಯೇ ಕಾರಣ: ಸರ್ಕಾರಕ್ಕೆ ಸಿಐಡಿ ವರದಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2014, 19:30 IST
Last Updated 9 ಡಿಸೆಂಬರ್ 2014, 19:30 IST
ನಂದಿತಾಳದು ಆತ್ಮ ಹತ್ಯೆ
ನಂದಿತಾಳದು ಆತ್ಮ ಹತ್ಯೆ   

ಬೆಂಗಳೂರು: ‘ಕಲಿಕಾ ಮಾಧ್ಯಮ ಬದ­ಲಾ­ಯಿಸಿದ್ದರಿಂದ ನೊಂದು ತೀರ್ಥಹಳ್ಳಿ ವಿದ್ಯಾರ್ಥಿನಿ ನಂದಿತಾ ಆತ್ಮಹತ್ಯೆ ಮಾಡಿ­ಕೊಂಡಿದ್ದಾಳೆ’ ಎಂದು ಸಿಐಡಿ ಅಧಿಕಾರಿ­ಗಳು ಸರ್ಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದ್ದಾರೆ.

‘ಆಕೆಯನ್ನು ಯಾರೂ ಅಪಹರಿಸಿರಲಿಲ್ಲ. ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಶೈಕ್ಷಣಿಕ ಪ್ರಗತಿ ಕುಂಠಿತವಾಗಿ­ದ್ದರಿಂದ ಬೇಸರವಾಗಿ ಆಕೆಯೇ ಆನಂದಗಿರಿ ಗುಡ್ಡಕ್ಕೆ ತೆರಳಿ ವಿಷ ಕುಡಿದಿದ್ದಾಳೆ’ ಎಂದು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಂದಿತಾ ತನ್ನ ಮನೆ ಸಮೀಪದ ಸೇಂಟ್‌ ಮೇರಿಸ್ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಳು. ನಂತರ ಪೋಷಕರು ಎಂಟನೇ ತರಗತಿಯಿಂದ ಆಕೆಯನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದರು. ಏಳನೇ ತರಗತಿ ವರೆಗೂ ಹೆಚ್ಚು ಅಂಕ ಗಳಿಸಿ  ತರಗತಿಗೇ ಪ್ರಥಮ ಎನಿಸಿಕೊಂಡಿದ್ದ ಆಕೆ, ನಂತರ ‘ಎ’ ಶ್ರೇಣಿಯಿಂದ ‘ಡಿ’ ಶ್ರೇಣಿಗೆ ಇಳಿದಿದ್ದಳು.  ಈ ಹಿನ್ನಡೆಯಿಂದ ಹಂತ ಹಂತವಾಗಿ ಖಿನ್ನತೆಗೆ ಒಳಗಾಗಿದ್ದಳು ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

‘ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಹಪಾಠಿಗಳ ಬಳಿ ಅಳಲು ತೋಡಿಕೊಳ್ಳುತ್ತಿದ್ದ ನಂದಿತಾ, ಅಂತಿಮವಾಗಿ ಆತ್ಮಹತ್ಯೆಯ ದಾರಿ ಹಿಡಿದಳು. ಮೊದಲು ಪೋಷಕರಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟ ಆಕೆ, ಅ.31ರಂದು ಆನಂದಗಿರಿ ಗುಡ್ಡಕ್ಕೆ ತೆರಳಿ ವಿಷ ಕುಡಿದಿದ್ದಳು.  ನಂತರ ಆಕೆ­ಯನ್ನು ತೀರ್ಥಹಳ್ಳಿಯ  ಆಸ್ಪತ್ರೆಗೆ ದಾಖಲಿಸ­ಲಾಗಿತ್ತು’. ‘ತನ್ನನ್ನು ಅಪಹರಿಸಿದ ಅಪರಿಚಿತ ಯುವಕರು, ಲೈಂಗಿಕ ದೌರ್ಜನ್ಯ ನಡೆಸಿ ಬಲವಂತವಾಗಿ ವಿಷ ಕುಡಿಸಿದರು’ ಎಂದು ಆಕೆ ಅಜ್ಜಿ ಬಳಿ ಹೇಳಿ ಕೊನೆಯುಸಿರೆಳೆದಿದ್ದಳು.

ಸದ್ಯದಲ್ಲೇ ಅಂತಿಮ ವರದಿ
ವಿದ್ಯಾರ್ಥಿನಿಯ ಪೋಷಕರು, ಅವರು ಹೆಸರಿಸಿದ್ದ ಶಂಕಿತ ವ್ಯಕ್ತಿಗಳು, ಚಿಕಿತ್ಸೆ ನೀಡಿದ ವೈದ್ಯರು, ಸಹಪಾಠಿಗಳು, ಶಿಕ್ಷಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೋಷಕರು ಹಾಗೂ ಶಂಕಿತರ ಮೊಬೈಲ್‌ ಕರೆ ವಿವರ ಪರಿಶೀಲಿಸಲಾಗಿದೆ. ಕೆಲವೆಡೆ ಇದ್ದ ಸಿ.ಸಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಗಿದೆ. ಇದಾದ ನಂತರವೇ ನಿರ್ಧಾರಕ್ಕೆ ಬರಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು.
– ಬಿಪಿನ್‌ ಗೋಪಾಲಕೃಷ್ಣ
ಡಿಜಿಪಿ, ಸಿಐಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT