ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:48 IST
Last Updated 20 ನವೆಂಬರ್ 2017, 19:48 IST

ಬೆಳಗಾವಿ: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆಗೆ ಸೋಮವಾರ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.

ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ‘ಇಲ್ಲಿಯವರೆಗೆ 1894ರ ಕಾಯ್ದೆಯಡಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿತ್ತು. ಮುಂದಿನ ದಿನಗಳಲ್ಲಿ  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೂ ಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಗಳಲ್ಲಿ ನ್ಯಾಯಸಮ್ಮತ ಪರಿಹಾರ ಹಾಗೂ ಪಾರದರ್ಶಕತೆಯ ಹಕ್ಕು– 2013ರಂತೆ ಭೂಸ್ವಾಧೀನ ಪಡಿಸಿಕೊಳ್ಳಲು ತಿದ್ದುಪಡಿ ತರಲಾಗಿದೆ. ಅದಕ್ಕೆ ಅಂಗೀಕಾರ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

‘ಹೊಸ ಮಸೂದೆಯಂತೆ ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಒಳ್ಳೆಯ ಪರಿಹಾರ ದೊರೆಯುತ್ತದೆ’ ಎಂದು ಸಚಿವರು ಹೇಳಿದರು.

ADVERTISEMENT

ಬದಲಾವಣೆಯೊಂದಿಗೆ ನಾಳೆ ಮಂಡನೆ

‘ಅಂತರ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ (ತಿದ್ದುಪಡಿ) ಮಸೂದೆ ಕುರಿತು ಸದಸ್ಯರು ನೀಡಿದ ಸಲಹೆಗಳನ್ನು ಸೇರ್ಪಡೆ ಮಾಡಿ ಮಂಗಳವಾರ ಮತ್ತೆ ಮಸೂದೆ ಮಂಡನೆ ಮಾಡಲಾಗುವುದು’  ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿದರು.

‘ದೇಸಿ ಆರೋಗ್ಯ ಪದ್ಧತಿಗಳ ಸಂಶೋಧನೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಸಂಸ್ಥೆಯನ್ನು ವಿಶ್ವವಿದ್ಯಾಲಯ ದರ್ಜೆಗೇರಿಸಲು ಮಸೂದೆ ಮಂಡಿಸಲಾಗಿದೆ’ ಎಂದು ಸೋಮವಾರ ವಿಧಾನ ಪರಿಷತ್‌ನಲ್ಲಿ ಸಚಿವರು ವಿವರಿಸಿದರು.

ವಿಶ್ವವಿದ್ಯಾಲಯವನ್ನಾಗಿ ಮಾಡಿದರೆ ಪಾಲಿಸಬೇಕಾದ ನಿಯಮಾವಳಿಗಳು, ಅದರಿಂದ ಎದುರಿಸಬೇಕಾದ ಸಮಸ್ಯೆಗಳ ಕುರಿತು ಸದಸ್ಯರಾದ ಗಣೇಶ ಕಾರ್ಣಿಕ್‌, ಪುಟ್ಟಣ್ಣ, ಶ್ರೀನಿವಾಸ ಮಾನೆ, ತಾರಾ ಅನೂರಾಧ ಸಲಹೆ ನೀಡಿದರು.

‘ಸದಸ್ಯರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಹಾಗಾಗಿ ಸಂಸ್ಥೆಯನ್ನು ಸ್ವಾಯತ್ತವಾಗಿಸಬೇಕೇ ಅಥವಾ ವಿಶ್ವವಿದ್ಯಾಲಯವಾಗಿಸಬೇಕೇ ಎಂಬ ಬಗ್ಗೆ ಚರ್ಚೆ ಮಾಡಿ ಹೊಸದಾಗಿ ಮಸೂದೆ ಮಂಡನೆ ಮಾಡಲಾಗುವುದು’ ಎಂದರು.

ಪರಿಷತ್‌ನಲ್ಲಿ ಸದ್ದು ಮಾಡಿದ ಸುತ್ತೋಲೆ

ಮುಷ್ಕರದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಸತಿಶಾಲೆಗಳ ನೌಕರರಿಗೆ ಹೊರಡಿಸಿದ್ದ ಸುತ್ತೋಲೆ ಸೋಮವಾರ ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು.

‘ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅದನ್ನು ವಾಪಸ್‌ ಪಡೆಯಬೇಕು’ ಎಂದು ಬಿಜೆಪಿಯ ಅರುಣ ಶಹಾಪುರ ಆಗ್ರಹಿಸಿದರು.

‘ಶಿಕ್ಷಣ, ಆರೋಗ್ಯ, ವೈದ್ಯಕೀಯ ಕ್ಷೇತ್ರಗಳಲ್ಲಿರುವವರು ಮುಷ್ಕರ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಎಚ್ಚರಿಕೆ ನೀಡಲಾಗುತ್ತದೆ. ಇಲ್ಲಿಯೂ ಹಾಗೆಯೇ ಆಗಿದೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಸಚಿವ ಆಂಜನೇಯ ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕಿಲ್ಲ ಎಂದರೆ ಹೇಗೆ? ನೌಕರರಿಗೆ ಬೆದರಿಕೆಯೊಡ್ಡಿದ್ದೀರಿ’ ಎಂದು ಆರೋಪಿಸಿದರು.

‘ಎಚ್ಚರಿಕೆ ನೀಡಿರುವುದು ಸರಿಯಲ್ಲ. ಸುತ್ತೋಲೆ ವಾಪಸ್‌ ಪಡೆಯಿರಿ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಧ್ವನಿಗೂಡಿಸಿದರು.

‘ಈ ಹಿಂದೆ ಹೀಗೆಯೇ ಎಚ್ಚರಿಕೆ ನೀಡಲಾಗಿತ್ತು. ಸದನದಲ್ಲಿ ಚರ್ಚೆಯಾದ ನಂತರ ವಾಪಸ್‌ ಪಡೆಯಲಾಗಿತ್ತು. ಈಗಲೂ ವಾಪಸ್‌ ಪಡೆಯಬೇಕು’ ಎಂದು ಜೆಡಿಎಸ್‌ನ ರಮೇಶ್‌ಬಾಬು ಹೇಳಿದರು.

ಆದೇಶ ವಾಪಸ್‌ ಪಡೆಯಲು ಸಚಿವ ಆಂಜನೇಯ ಹಿಂದೇಟು ಹಾಕಿದಾಗ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದೆ ಬಂದು ಪ್ರತಿಭಟನೆ ಆರಂಭಿಸಿದರು. ಆನಂತರ ಸುತ್ತೋಲೆ ವಾಪಸ್‌ ಪಡೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.