ADVERTISEMENT

ನನ್ನ ಮಗನ ಮುಗಿಸಲು ಪೊಲೀಸರ ಸಂಚು

ಜೈಲಿನಲ್ಲಿರುವ ಉಗ್ರ ಯಾಸೀನ್‌ ಭಟ್ಕಳನ ತಾಯಿ ರಿಹಾನಾ ಸಿದ್ದಿಬಾಪ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ಭಟ್ಕಳ (ಉತ್ತರ ಕನ್ನಡ): ‘ಯಾಸೀನ್‌ ಪರಾರಿಗೆ ಸಂಚು ರೂಪಿಸಿದ್ದಾನೆ ಎಂಬುದೆಲ್ಲ ಸುಳ್ಳು. ಆತನನ್ನು ಎನ್‌ಕೌಂಟರ್‌ ಮಾಡಲು ಪೊಲೀಸರೇ ರೂಪಿಸಿದ ಕಟ್ಟುಕತೆ ಇದು’ ಎಂದು ಜೈಲಿನಲ್ಲಿ ಇರುವ ಶಂಕಿತ ಉಗ್ರ ಯಾಸೀನ್‌ ಭಟ್ಕಳನ      ತಾಯಿ ರಿಹಾನಾ ಸಿದ್ದಿಬಾಪ ಆರೋಪಿಸಿದ್ದಾರೆ.

ಯಾಸೀನ್‌ ಜೈಲಿನಿಂದ ಪರಾರಿಗೆ ಸಂಚು ರೂಪಿಸಿದ್ದಾನೆ ಎಂದು ಮಾಧ್ಯಮಗಳಲ್ಲಿ ಭಾನುವಾರ ಪ್ರಕಟವಾಗಿದ್ದ ಸುದ್ದಿಗೆ ಸಂಬಂಧಿಸಿದಂತೆ ಇಲ್ಲಿಯ ಮುಗ್ದುಂ ಕಾಲೊನಿಯ ಲ್ಲಿರುವ ರಿಹಾನಾ ಅವರನ್ನು ಸಂಪರ್ಕಿಸಿದಾಗ, ‘ಯಾಸೀನ್ ಪರಾರಿಯಾಗಲು ಸಂಚು ರೂಪಿಸಿ ದ್ದಾನೆ ಎಂಬುದು ಪೊಲೀಸರು ಹೆಣೆದ ಸುಳ್ಳುಕತೆ’ ಎಂದು ಸಿದ್ದಿಬಾಪ ಅವರು ಪ್ರತಿಕ್ರಿಯಿಸಿದರು.

ತಮಗೂ ದೂರವಾಣಿಯಲ್ಲಿ ಕರೆ ಮಾಡಿ ಆಗಾಗ ಮಾತನಾಡುತ್ತಿದ್ದ ಯಾಸೀನ್‌, ‘ನಾನು ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪದ ಪ್ರಕರಣ ದಾಖಲಿಸಿ ಜೈಲಿನಲ್ಲಿಟ್ಟಿದ್ದಾರೆ. ಪೊಲೀಸರಲ್ಲಿ ಯಾವುದೇ ದಾಖಲೆಗಳಿಲ್ಲ. ನನ್ನನ್ನು ಮುಗಿಸಲು ಪೊಲೀಸರೇ ನನ್ನ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ. ನನ್ನನ್ನು ಯಾವಾಗ ಬೇಕಾದರೂ ಎನ್‌ಕೌಂಟರ್ ಮಾಡಬಹುದು’ ಎಂದು ಈ ಹಿಂದೆ ಹಲವು ಬಾರಿ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಹೇಳಿದರು.

‘ಆದರೆ ಇಂದು ಪತ್ರಿಕೆಗಳಲ್ಲಿ ಬಂದ ವರದಿಯನ್ನು ನೋಡಿ, ಯಾಸೀನ್‌ ಹೇಳಿದ್ದು ನಿಜವೆನಿಸುತ್ತಿದೆ’ ಎಂದ ರಿಹಾನಾ, ‘ಯಾಸೀನ್‌ ಪರಾರಿಯಾಗಲು ಸಂಚು ರೂಪಿಸಿದ್ದಾನೆ ಎಂದು ಹೇಳಿ ಪೊಲೀಸರು ಅವನನ್ನು ಮುಗಿಸಿದರೂ ಆಶ್ಚರ್ಯವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಅಷ್ಟೊಂದು ಬಂದೋಬಸ್ತ್‌ ಇರುವ ಜೈಲಿನಲ್ಲಿ ಅವನು ಪರಾರಿ ಆಗುವು ದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಇದೆಲ್ಲ ಜೈಲಿನ ಅಧಿಕಾರಿಗಳು ಯಾಸೀನ್‌ನನ್ನು ಎನ್‌ಕೌಂಟರ್ ಮಾಡಲು ಹೆಣೆದ ಕಥೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.