ADVERTISEMENT

ನರೇಶ್ ಶೆಣೈ ಬಂಧನ?

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 20:16 IST
Last Updated 24 ಜೂನ್ 2016, 20:16 IST
ನರೇಶ್‌ ಶೆಣೈ
ನರೇಶ್‌ ಶೆಣೈ   

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್‌ ಮುಖಂಡ ಹಾಗೂ ಉದ್ಯಮಿ ನರೇಶ್‌ ಶೆಣೈಯನ್ನು ನಗರ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಜ್ಞಾತ ಸ್ಥಳವೊಂದರಲ್ಲಿ ತಲೆಮರೆಸಿಕೊಂಡಿದ್ದ ನರೇಶ್‌ ಶೆಣೈಯನ್ನು ಸಿಸಿಬಿ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ನೇತೃತ್ವದ ತಂಡ ಶುಕ್ರವಾರ ಬೆಳಿಗ್ಗೆ ಬಂಧಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ನಗರ ಪೊಲೀಸ್ ಕಮಿಷನರ್‌ ಎಂ.ಚಂದ್ರಶೇಖರ್ ನರೇಶ್ ಬಂಧನವನ್ನು ನಿರಾಕರಿಸಿದ್ದಾರೆ.

ಬಾಳಿಗ ಕೊಲೆ ಪ್ರಕರಣದ ತನಿಖೆಗಾಗಿ ನಿಯೋಜಿಸಿರುವ ಪೊಲೀಸರು ನರೇಶ್‌ ಪತ್ತೆಗೆ ಯತ್ನಿಸುತ್ತಿದ್ದು, ಅತಿ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅವರು ತಿಳಿಸಿದರು.

ಮಾರ್ಚ್‌ 21ರಂದು ನಸುಕಿನ ಜಾವ ಕೊಡಿಯಾಲ್‌ಬೈಲ್‌ನ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದ ವಿನಾಯಕ ಬಾಳಿಗ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ದಿನದಿಂದಲೂ ನರೇಶ್‌ ಶೆಣೈ ತಲೆಮರೆಸಿಕೊಂಡಿದ್ದು, ಪೊಲೀಸರು ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಗುರುವಾರ ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು, ನರೇಶ್‌ ಸೇರಿದಂತೆ ಏಳು ಮಂದಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.

ಮೂರು ತಿಂಗಳಿನಿಂದ ನಾಪತ್ತೆ: ವಿನಾಯಕ ಬಾಳಿಗ ಕೊಲೆ ನಡೆದ ದಿನದಿಂದಲೇ ನರೇಶ್‌ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಪೊಲೀಸರು ಉತ್ತರ ಭಾರತದ ವಿವಿಧ ರಾಜ್ಯಗಳು, ಗೋವಾ ಮತ್ತು ಕೇರಳದ ಕೆಲವು ಸ್ಥಳಗಳು ಮತ್ತು ರಾಜ್ಯದ ಹಲವೆಡೆ ನಿರಂತರ ಶೋಧ ನಡೆಸಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಗರ ಪೊಲೀಸರು ಶೋಧ ನಡೆಸಿದ್ದರು.

ಘಟನೆ ಸಂಬಂಧ ಬಾಡಿಗೆ ಹಂತಕರಾದ ಪದವಿನಂಗಡಿಯ ವಿನೀತ್ ಪೂಜಾರಿ ಮತ್ತು ಶಕ್ತಿನಗರದ ನಿಶಿತ್ ದೇವಾಡಿಗ ಎಂಬುವರನ್ನು ಮಾರ್ಚ್‌ 27ರಂದು ಬಂಧಿಸಲಾಗಿತ್ತು. ನಂತರ ಪಂಜಿಮೊಗರು ನಿವಾಸಿ ಶಿವಪ್ರಸಾದ್ ಅಲಿಯಾಸ್‌ ಶಿವ, ಕೋಟೆಕಾರ್‌ ನಿವಾಸಿ ಶೈಲೇಶ್ ಅಲಿಯಾಸ್‌ ಶೈಲು, ಮಣ್ಣಗುಡ್ಡೆ ನಿವಾಸಿ ಕೆ.ಮಂಜುನಾಥ ಶೆಣೈ ಅಲಿಯಾಸ್‌ ಮಂಜು ಎಂಬುವರನ್ನು ಪೊಲೀಸರು ಬಂಧಿಸಿದ್ದರು. ನರೇಶ್ಆಪ್ತ ಕಾವೂರು ಶಾಂತಿನಗರದ ಶ್ರೀಕಾಂತ್‌ ಕೆಲವು ದಿನಗಳ ಹಿಂದೆ ಪೊಲೀಸರ ಬಲೆಗೆ ಬಿದ್ದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT