ADVERTISEMENT

ನಾಗರಾಜ್‌ ಶೆಟ್ಟಿ,ಮೌನೇಶ್‌ಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2015, 19:30 IST
Last Updated 24 ಜೂನ್ 2015, 19:30 IST

ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಮತ್ತು ಯುವ ಪುರಸ್ಕಾರ ಪ್ರಕಟವಾಗಿದ್ದು, ‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಮಕ್ಕಳ ಸಾಹಿತಿ ಟಿ.ಎಸ್.ನಾಗರಾಜ್‌ ಶೆಟ್ಟಿ ಮತ್ತು ‘ಯುವ ಪುರಸ್ಕಾರ’ಕ್ಕೆ ರಂಗಕರ್ಮಿ, ಕತೆಗಾರ ಮೌನೇಶ್‌ ಬಡಿಗೇರ್‌ ಅವರು ಭಾಜನರಾಗಿದ್ದಾರೆ.

ಗುವಾಹಟಿಯಲ್ಲಿ ಬುಧವಾರ ನಡೆದ 24 ಭಾಷೆಗಳ ತೀರ್ಪುಗಾರರ ಸಭೆಯಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.
ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ನಾಗರಾಜ್‌ ಶೆಟ್ಟಿ ಅವರಿಗೆ ಪ್ರಶಸ್ತಿ ಸಂದಿದೆ. ಮೌನೇಶ್‌ ಅವರ ಸಣ್ಣ ಕಥೆಗಳ ಸಂಕಲನ ‘ಮಾಯಾಲೋಕ’ವು  ಯುವ ಪುರಸ್ಕಾರದ ಮನ್ನಣೆ ಗಳಿಸಿದೆ.

ಬಾಲ ಸಾಹಿತ್ಯ, ಯುವ ಸಾಹಿತ್ಯ ಪುರಸ್ಕಾರವು ₨50 ಸಾವಿರ ನಗದು, ತಾಮ್ರ ಫಲಕ ಒಳಗೊಂಡಿದೆ. ಬಾಲ ಸಾಹಿತ್ಯ ಪ್ರಶಸ್ತಿಯನ್ನು ಮುಂಬೈನಲ್ಲಿ ನವೆಂಬರ್‌ 14 ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.  ಆದರೆ, ಯುವ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಪ್ರಕಟಿಸಿಲ್ಲ.

ತಮಿಳುನಾಡಿನ ಸೆಲ್ಲಾ ಗಣಪತಿ, ಆಂಧ್ರದ ಚೊಕ್ಕಾಪು ವೆಂಕಟರಾಮನ್‌, ಮಹಾರಾಷ್ಟ್ರದ ಲೀಲಾಧರ ಹೆಗ್ಡೆ   ಬಾಲ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

‘ಯುವ ಪುರಸ್ಕಾರ’ಕ್ಕೆ ನೆರೆಯ ತಮಿಳು ನಾಡಿನ ವೀರಪಾಂಡ್ಯನ್‌ (ಪರುಕೈ, ಕಾದಂಬರಿ), ಆಂಧ್ರದ ಪಸುನೂರಿ ರವೀಂದರ್‌ (ಔಟ್‌ ಆಫ್‌ ಕವರೇಜ್‌ ಏರಿಯಾ, ಸಣ್ಣ ಕತೆಗಳ ಸಂಕಲನ) ಮತ್ತು ಮಹಾರಾಷ್ಟ್ರದ ವೀರ ರಾಥೋಡ್‌ (ಸೆನ್‌ ಸಾಯಿ ವೆಸ್‌, ಕವಿತೆ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.