ADVERTISEMENT

ಮಹಾಮಳೆಗೆ ನಲುಗಿದ ನಗರ

ಕೆರೆ ಕೋಡಿ ಒಡೆದು ಬಡಾವಣೆಗೆ ನುಗ್ಗಿದ ನೀರು ರಕ್ಷಣೆಗೆ ದೋಣಿ ಬಳಕೆ * ಆಹಾರ ಪೊಟ್ಟಣ ಪೂರೈಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 3:59 IST
Last Updated 30 ಜುಲೈ 2016, 3:59 IST
ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ  ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿ ದೋಣಿ ಮೂಲಕ ರಕ್ಷಿಸಿದರು   ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್‌
ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿ ದೋಣಿ ಮೂಲಕ ರಕ್ಷಿಸಿದರು ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್‌   

ಬೆಂಗಳೂರು: ಗುರುವಾರ ರಾತ್ರಿಯಿಂದ  ಶುಕ್ರವಾರ ಬೆಳಿಗ್ಗೆವರೆಗೆ ಎಡೆಬಿಡದೆ ಸುರಿದ ಮಹಾಮಳೆಗೆ ರಾಜಧಾನಿ ತತ್ತರಿಸಿತು. ಮಹಾಪೂರದಿಂದಾಗಿ ನಗರದ ಜನರು ಬೆಚ್ಚಿ ಬಿದ್ದರು.

ವರ್ಷಧಾರೆಯಿಂದಾಗಿ ಮಡಿವಾಳ,   ಕೋಡಿಚಿಕ್ಕನಹಳ್ಳಿ, ಚಿಕ್ಕಬೇಗೂರು ಹಾಗೂ ನೆಲಮಂಗಲ ಕೆರೆಗಳು ಉಕ್ಕಿ ಹರಿದವು. ಪರಿಣಾಮ ಕೋಡಿಗಳು ಒಡೆದವು.  500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇದರಿಂದಾಗಿ ಸಾವಿರಾರು ನಿವಾಸಿಗಳು ಸಂಕಷ್ಟ ಅನುಭವಿಸಿದರು.

ಮಳೆ ಹಾಗೂ ಗಾಳಿಗೆ ನಗರದಲ್ಲಿ 38ಕ್ಕೂ ಅಧಿಕ ಮರಗಳು ಧರೆಗೆ ಉರುಳಿದವು. ರಸ್ತೆಗಳಲ್ಲಿ ವಾಹನಗಳ ಬದಲು ದೋಣಿಗಳು ಸಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದವು. ಮಳೆಯಿಂದಾಗಿ  ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ತೆವಳುತ್ತಾ ಸಾಗಿದವು.

ಅಬ್ಬರದ ಮಳೆಯಿಂದಾಗಿ ಪೂರ್ವ ಹಾಗೂ ದಕ್ಷಿಣ ಭಾಗದ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡವು. ನಗರ ಪ್ರವಾಹದಿಂದಾಗಿ ಕೆಲವು ಬಡಾವಣೆಗಳ ಮನೆಗಳ ಒಳಗೂ ನೀರು ನುಗ್ಗಿದ್ದರಿಂದ  ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು. ನಗರದ ಚರಂಡಿಗಳ ದುಃಸ್ಥಿತಿ­ಯನ್ನು ಮಳೆ ಅತ್ಯಂತ ಢಾಳಾಗಿ ಎತ್ತಿ ತೋರಿಸಿತು.

ನಾಲ್ಕೈದು ದಿನಗಳಿಂದ ಮಂದಗತಿಯಲ್ಲಿ ಸುರಿದು ನಗರದ ಜನತೆಗೆ ತಂಪು ನೀಡಿದ್ದ ಮಳೆ, ಗುರುವಾರ ರಾತ್ರಿಯಿಂದ ಉಗ್ರ ರೂಪ ಪಡೆದುಕೊಂಡಿತು. ತ್ಯಾಜ್ಯ ನೀರಿನಿಂದ ತುಂಬಿದ್ದ ದಕ್ಷಿಣ ಹಾಗೂ ಪೂರ್ವ ಭಾಗದ ಕೆರೆಗಳ ಸಹನೆಯ ಕಟ್ಟೆಯೂ ಒಡೆಯಿತು. ಬೆಳ್ಳಂದೂರು, ವರ್ತೂರು, ಯಮಲೂರು ಕೆರೆ ಕೋಡಿಗಳಲ್ಲಿ ನೊರೆ ಮತ್ತೆ ಉಗ್ರ ಪ್ರತಾಪ ತೋರಿತು.

ಬೊಮ್ಮನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್, ಎಲೆಕ್ಟ್ರಾನಿಕ್‌ಸಿಟಿ ಸಮೀಪದ ವೀರಸಂದ್ರ ಜಂಕ್ಷನ್, ದೇವರಚಿಕ್ಕನಹಳ್ಳಿ,  ಮಹದೇವಪುರ ಹೊರ ವರ್ತುಲ ರಸ್ತೆಯ ಸೇಲಂ ಬ್ರಿಡ್ಜ್‌, ಟಿನ್‌ಫ್ಯಾಕ್ಟರಿ,ಹೆಬ್ಬಗೋಡಿ ಸಮೀಪದ ಡ್ಯಾಡಿ ಲೇಔಟ್, ವಿನಾಯಕನಗರ, ತಿರುಪಾಳ್ಯ, ಗೊಲ್ಲಹಳ್ಳಿ  ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಅಕ್ಷರಶಃ ದ್ವೀಪದ ಸ್ಥಿತಿ ನಿರ್ಮಾಣವಾಯಿತು.

ಮಡಿವಾಳ ಕೆರೆಯ ನೀರಿನಿಂದಾಗಿ ಬಿಟಿಎಂ ಬಡಾವಣೆಯ 2ನೇ ಹಂತದ 35ರಿಂದ 42ನೇ ಮುಖ್ಯ ರಸ್ತೆ, ಸೋಮೇಶ್ವರ ಕಾಲೊನಿಯ 1, 2, 3ನೇ ಅಡ್ಡರಸ್ತೆ, ಸಿಲ್ಕ್‌ಬೋರ್ಡ್‌ ಭಾಗದ ಮನೆಗಳು ಜಲಾವೃತಗೊಂಡವು. ನೂರು ಅಡಿ ರಸ್ತೆಯ ಟಿಸಿಎಸ್‌ ಎಲೆಕ್ಟ್ರಾನಿಕ್‌ ಸಲ್ಯೂಷನ್‌ ಕಂಪೆನಿಯ ತಳ ಅಂತಸ್ತಿಗೂ ನೀರು ನುಗ್ಗಿ, ಜನರೇಟರ್‌ ಸೇರಿದಂತೆ ಹಲವು ಉಪಕರಣಗಳು ಹಾನಿಗೀಡಾದವು.

ಕೋಡಿಚಿಕ್ಕನಹಳ್ಳಿ  ಕೆರೆಯ ನೀರು ವ್ಯಾಪಕ ಪ್ರಮಾಣದಲ್ಲಿ ಹರಿದು ಬಂದ ಕಾರಣ ಸಮೀಪದ ಡಿಯೊ ಎನ್‌ಕ್ಲೇವ್‌,  ಮಹಾವೀರ ಅಪಾರ್ಟ್‌ಮೆಂಟ್‌, ಅನುಗ್ರಹ ಬಡಾವಣೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ  ಮನೆಗಳಲ್ಲಿ ನೀರು ನಿಂತ ಪರಿಣಾಮ ಜನರು ಅತಂತ್ರ ಸ್ಥಿತಿ ಎದುರಿಸಿದರು. ಮನೆಗಳ ನಾಲ್ಕೈದು ಅಡಿ ನೀರು ನಿಂತು  ಪಡಿಪಾಟಲು ಪಟ್ಟರು.

ದೋಣಿ ಮೂಲಕ ಆಹಾರ: ಮನೆ–ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಹೊರ ಬರಲಾಗದೆ ಕೆಲವರು ಸಿಲುಕಿಕೊಂಡರು. ಅವರಿಗೆ, ರಕ್ಷಣಾ ಸಿಬ್ಬಂದಿಯು ದೋಣಿಗಳಲ್ಲೇ ತೆರಳಿ ಆಹಾರದ ಪೊಟ್ಟಣ, ನೀರಿನ ಬಾಟಲಿ, ಹಾಲಿನ ಪ್ಯಾಕೇಟ್‌ಗಳನ್ನು ವಿತರಿಸಿದರು. ನೆಲ ಅಂತಸ್ತಿನ ಮನೆಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಯಿತು.

ಆರು ವಾಹನ ಜಖಂ:  ಮಾರತ್‌ಹಳ್ಳಿ ಸಮೀಪದ ಸಂಜಯ್‌ನಗರದಲ್ಲಿ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದ ತಡೆಗೋಡೆ ಕುಸಿದು ಬಿದ್ದು ಟೆಂಪೊ ಟ್ರಾವೆಲರ್, ಎರಡು ಕಾರುಗಳು, ಆಟೊ ಹಾಗೂ ಎರಡು ಬೈಕ್‌ಗಳು ಜಖಂಗೊಂಡವು.

ಸ್ಥಳೀಯ ನಿವಾಸಿಗಳು ಎಂದಿನಂತೆ ಗುರುವಾರ ರಾತ್ರಿ ಆ ಕಾಂಪೌಂಡ್‌ನ ಪಕ್ಕದಲ್ಲೇ ವಾಹನ ನಿಲುಗಡೆ ಮಾಡಿದ್ದರು.  ಮಳೆಗೆ ಗೋಡೆ ಕುಸಿದು ಆ ವಾಹನಗಳ ಮೇಲೆ ಬಿದ್ದಿದೆ. ಶುಕ್ರವಾರ ಬೆಳಿಗ್ಗೆ ಸ್ಥಳೀಯರು ಎಚ್ಚರಗೊಂಡಾಗ   ವಾಹನಗಳಿಗೊದಗಿದ ಸ್ಥಿತಿ ಕಂಡು ಅವಾಕ್ಕಾದರು. 

ಹೊಳೆಯ ಸ್ವರೂಪ ಪಡೆದ ರಸ್ತೆ: ನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ ಗಿಜಿಗುಡುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ದೋಣಿಗಳು  ಸರಾಗವಾಗಿ ಸಂಚರಿಸಿದವು.

ಕೆರೆಯ ನೀರು ರಸ್ತೆಯಲ್ಲೇ ಹರಿದುಬಂದಿದ್ದರಿಂದ ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ, ವೀರಸಂದ್ರ ಮತ್ತಿತರ ಕಡೆಗಲ್ಲಿ ರಸ್ತೆಗಳು ಹೊಳೆಯ ಸ್ವರೂಪ ಪಡೆದವು.  ವಾಹನ ಸಂಚಾರ ಸಾಧ್ಯವಾಗದೇ ಈ ಇವು ತಾಸುಗಟ್ಟಲೆ ಸ್ತಬ್ಧಗೊಂಡಿ­ದ್ದವು.

ಸಂಚಾರ ದಟ್ಟಣೆ: ಮಳೆ ಅವಾಂತರದಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತವಾಗಿ, ಭಾರಿ ಸಂಚಾರದಟ್ಟಣೆ ಉಂಟಾಯಿತು.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಜಯದೇವ ಆಸ್ಪತ್ರೆ ವೃತ್ತದವರೆಗಿನ ರಸ್ತೆಯಲ್ಲಿ ನೀರಿನ ಹರಿಯುವಿಕೆ ಮಟ್ಟ ಹೆಚ್ಚಿತ್ತು.

ಸುಮಾರು 3 ಅಡಿಯಷ್ಟಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು. ಕೆಲವು ವಾಹನಗಳ ಎಂಜಿನ್‌ನಲ್ಲಿ ನೀರು ಸೇರಿಕೊಂಡು, ರಸ್ತೆ ಮಧ್ಯೆಯೇ ನಿಲ್ಲು­ತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕೋಡಿ ಬಿದ್ದಿದ್ದು ಎಲ್ಲಿ 
* ಮಡಿವಾಳ
* ಕೋಡಿಚಿಕ್ಕನಹಳ್ಳಿ
* ಚಿಕ್ಕಬೇಗೂರು
* ನೆಲಮಂಗಲದ ಬಿನ್ನಮಂಗಲ

ನೊರೆ ಹಾವಳಿ ಎಲ್ಲಿ
* ಬೆಳ್ಳಂದೂರು
* ಯಮಲೂರು
* ವರ್ತೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.