ADVERTISEMENT

ನಿರ್ಧಾರವಾಗದ ‘ಅಂಬಾರಿ’ ಆನೆ ಮಾವುತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಅಂಬಾರಿ ಹೊರುವ ಅರ್ಜುನ ಆನೆ
ಅಂಬಾರಿ ಹೊರುವ ಅರ್ಜುನ ಆನೆ   

ಮೈಸೂರು: ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನ ಆನೆಯ ಮಾವುತನನ್ನು ಈ ಬಾರಿ ಜಿಲ್ಲಾಡಳಿತ ಇನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ, ಯಾರಿಗೆ ಅವಕಾಶ ಸಿಗಬಹುದು ಎಂಬ ಗೊಂದಲಕ್ಕೆ ಈ ಆನೆ ಉಸ್ತುವಾರಿ ಮಾವುತರಾದ ವಿನೂ ಹಾಗೂ ಸಣ್ಣಪ‍್ಪ ಸಿಲುಕಿದ್ದಾರೆ.

ಕಳೆದ ದಸರಾ ಮಹೋತ್ಸವದಲ್ಲಿ ಸಣ್ಣಪ್ಪ ಅಲಿಯಾಸ್‌ ಮಹೇಶ್‌ ಅವರು ಅರ್ಜುನನಿಗೆ ಮೊದಲ ಬಾರಿ ಸಾರಥಿಯಾಗಿ ಮೆರವಣಿಗೆ ಯಶಸ್ಸುಗೊಳಿಸಿದ್ದರು.

ಆದರೆ, ಈ ಬಾರಿ ವಿನೂಗೆ ಅವಕಾಶ ನೀಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಕೆಲ ದಿನಗಳ ಹಿಂದೆ ತಾಲೀಮಿನಲ್ಲಿ ಮರದ ಅಂಬಾರಿ ಹೊತ್ತು ಸಾಗಿದ ಅರ್ಜುನನ ಸಾರಥ್ಯವನ್ನು ವಿನೂಗೆ ವಹಿಸಲಾಗಿತ್ತು.

ADVERTISEMENT

ಅರ್ಜುನ ಆನೆ ಮುನ್ನಡೆಸಲು ಇವರಿಬ್ಬರ ನಡುವೆ ಎರಡು ವರ್ಷಗಳಿಂದ ಪೈಪೋಟಿ ಇದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರದಿಂದಲೂ ಇದು ಮುಂದುವರಿದಿದೆ. ‘ಜಂಬೂಸವಾರಿಗೆ ಕೇವಲ 5 ದಿನ ಬಾಕಿ ಇದೆ. ಮಾವುತನನ್ನು ಅಂತಿಮಗೊಳಿಸಿದ್ದರೆ ಮಾನಸಿಕವಾಗಿ ಸಜ್ಜಾಗಲು ಸಹಾಯವಾಗುತಿತ್ತು’ ಎಂದು ಗಜಪಡೆಯ ಹಿರಿಯ ಮಾವುತರು ಹೇಳುತ್ತಾರೆ.

ಅಂಬಾರಿ ಹೊರಲು ಅರ್ಜುನ ಸಿದ್ಧ
ಜಂಬೂಸವಾರಿಯಲ್ಲಿ ಆರನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲು ‘ಅರ್ಜುನ’ ಆನೆ ಸನ್ನದ್ಧವಾಗಿದೆ. ತಿಂಗಳಿನಿಂದ ತಾಲೀಮಿನಲ್ಲಿ ಪಾಲ್ಗೊಂಡು ನಗರ ವಾತಾವರಣಕ್ಕೆ ಹೊಂದಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಿಂದ ಬಂದಿರುವ ಆನೆ 2012ರಿಂದ ಅಂಬಾರಿ ಹೊರುತ್ತಿದೆ. ದಸರಾ ಮೆರವಣಿಗೆಯಲ್ಲಿ ದೊಡ್ಡಮಾಸ್ತಿ ನಾಲ್ಕು ಬಾರಿ ಈ ಆನೆ ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.