ADVERTISEMENT

ನಿರ್ಲಕ್ಷಿತ ಸಮುದಾಯಗಳನ್ನೂ ಒಟ್ಟಿಗೆ ಬೆಳೆಸೋಣ

ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟ ಉದ್ಘಾಟಿಸಿ ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ನಿರ್ಲಕ್ಷಿತ ಸಮುದಾಯಗಳನ್ನೂ ಒಟ್ಟಿಗೆ ಬೆಳೆಸೋಣ
ನಿರ್ಲಕ್ಷಿತ ಸಮುದಾಯಗಳನ್ನೂ ಒಟ್ಟಿಗೆ ಬೆಳೆಸೋಣ   

ಬೆಂಗಳೂರು: ‘ಕುರುಬ ಸಮುದಾಯದವರು ಸ್ವಾರ್ಥದಿಂದ ವರ್ತಿಸಬಾರದು. ನಮ್ಮ ಹಾಗೆ ಹಿಂದುಳಿದಿರುವ ನಿರ್ಲಕ್ಷಿತ ಸಮುದಾಯಗಳ, ದಲಿತರ, ಬಡವರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಎಲ್ಲರನ್ನೂ ಜತೆಯಲ್ಲೇ ಕರೆದೊಯ್ದು ನಾವೂ ಮುಂದೆ ಬರಬೇಕು’ ಎಂದು ವರುಣಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟವನ್ನು ಇಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರು ಉನ್ನತ ಶಿಕ್ಷಣ ಪಡೆಯುವುದಕ್ಕೆ ಆದ್ಯತೆ ನೀಡಬೇಕು. ರಾಜಕೀಯ ಶಕ್ತಿಯನ್ನು ಗಳಿಸಬೇಕು. ಆಡಳಿತ ಸೇವೆಯಲ್ಲಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಬೇಕು. ಉದ್ಯಮಿಗಳಾಗುವತ್ತ ಚಿತ್ತ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಧಾರವಾಡ ಜಿಲ್ಲೆಯ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು, ‘ನಾವು ಕುರಿಗಳಲ್ಲ, ಟಗರುಗಳು ಎಂದು ತೋರಿಸಿಕೊಡುವ ಕಾಲ ಬಂದಿದೆ. ಹೆಚ್ಚಿನ ಮೀಸಲಾತಿ ಪಡೆಯಲು ಸಮಾಜದವರು ಹೋರಾಟ ನಡೆಸಬೇಕು. ಯುವಜನರು ದಂಗೆ ಏಳುವ ಮುನ್ನ ಸರ್ಕಾರ ಕುರುಬರಿಗೆ ಮೀಸಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ, ‘ಹಿಂದುಳಿದ ವರ್ಗಗಳ 32 ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ನಿಗಮವು ನೆರವಾಗಿದೆ. ಇದರಲ್ಲಿ 18 ಕುರುಬರಿದ್ದಾರೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ, ‘ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಕುರುಬರು ಉನ್ನತ ಶಿಕ್ಷಣ ಪಡೆಯಬೇಕು’ ಎಂದರು.

ಬಿಬಿಎಂಪಿ ಸದಸ್ಯೆ ಶಾಂತಕುಮಾರಿ, ‘ಸಿದ್ದರಾಮಯ್ಯ ಅವರು ಕುರುಬರು ತಲೆ ಎತ್ತಿ ನಡೆಯುವಂತಹ ಕೆಲಸ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ. ನಾನು ಮೇಯರ್‌ ಆಗಿದ್ದಾಗ ಉತ್ತಮ ಸಹಕಾರ ನೀಡಿದ್ದರು’ ಎಂದರು.

***
ಬಾಲ್ಯದ ಬವಣೆ ಸ್ಮರಿಸಿದ ದೇಹದಾರ್ಢ್ಯಪಟು

‘ದೇಹದಾರ್ಢ್ಯಪಟು ಆಗಬೇಕೆಂಬ ಕನಸು ಬಾಲ್ಯದಲ್ಲೇ ಇತ್ತು. ಹೊಟ್ಟೆ ತುಂಬಾ ಆಹಾರ ಸೇವಿಸುವುದು ಇದಕ್ಕೆ ಅತ್ಯಗತ್ಯ. ಬಡತನದಿಂದಾಗಿ ಇದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಶವಯಾತ್ರೆ ವೇಳೆ ಎಸೆಯುವ ದುಡ್ಡು ಹೆಕ್ಕಿ ಬಾಳೆಹಣ್ಣು ಖರೀದಿಸುತ್ತಿದ್ದೆ. ಸಿಪ್ಪೆಯನ್ನೂ ಬಿಸಾಡದೆ ಬಾಳೆಹಣ್ಣು ತಿನ್ನುತ್ತಿದ್ದೆ. ಆಹ್ವಾನ ಇಲ್ಲದಿದ್ದರೂ ಮದುವೆಗೆ ಹೋಗಿ ಹೊಟ್ಟೆ ತುಂಬಾ ಉಣ್ಣುತ್ತಿದ್ದೆ’ ಎಂದು ದೇಹದಾರ್ಢ್ಯಪಟು ಎ.ವಿ.ರವಿ ಬಾಲ್ಯದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು.

‘ಫ್ರಾನ್ಸ್‌ನಲ್ಲಿ 1982ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶಾವಕಾಶ ಪಡೆದಿದ್ದೆ. ಅಲ್ಲಿಗೆ ಪ್ರಯಾಣಿಸಲು ₹ 25,000 ಬೇಕಿತ್ತು. ನಾನಾಗ ₹ 100 ನೋಟನ್ನೂ ನೋಡಿರಲಿಲ್ಲ. ತಾಯಿಗೆ ತಾತ ಉಡುಗೊರೆಯಾಗಿ ಕೊಟ್ಟ ಓಲೆಯನ್ನು ಮಾರಿ ಹಣ ಹೊಂದಿಸಲು ಮುಂದಾದೆ. ಅದರಿಂದ ಸಿಕ್ಕಿದ್ದು ಕೇವಲ ₹ 800. ಬಳಿಕ ಕುರುಬ ಸಮಾಜ ಬಾಂಧವರು ಹಾಗೂ ಸಂಘ ಸಂಸ್ಥೆಗಳು ಸೇರಿ ವಿದೇಶಕ್ಕೆ ಹೋಗಲು ಹಣ ಹೊಂದಿಸಿದರು. ಅಂದು ಪರಿಶ್ರಮ ಪಟ್ಟಿದ್ದರಿಂದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಇದುವರೆಗೆ 308 ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು’ ಎಂದರು.

‘ಸಮಾಜದ ಋಣವನ್ನು ಯಾವತ್ತೂ ಮರೆಯಲಾರೆ. ಸಮಾಜಕ್ಕೆ ಕೊಡುಗೆ ನೀಡಲು ಸದಾ ಸಿದ್ಧ’ ಎಂದರು.

***

ಮುಂದಿನ ಅವಧಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು. ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಗೆದ್ದು ವೈದ್ಯಕೀಯ ಶಿಕ್ಷಣ ಅಥವಾ ಆರೋಗ್ಯ ಸಚಿವರಾಗಬೇಕು
–ಪ್ರಥಮ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.