ADVERTISEMENT

ನೈಸ್‌: ಸರ್ಕಾರದ ಉತ್ತರಕ್ಕೆ ಜೆಡಿಎಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST

ಬೆಳಗಾವಿ: ನೈಸ್‌ ಸದನ ಸಮಿತಿ ವರದಿ ಕುರಿತ ಚರ್ಚೆಯ ಬಳಿಕ ಉತ್ತರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯರು ವಿಧಾನಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲು ಮುಂದಾದ ಪ್ರಸಂಗ ಗುರುವಾರ ಸಂಜೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಶಿವಲಿಂಗೇಗೌಡ, ‘ನೈಸ್ ಯೋಜನೆಯಲ್ಲಿ ಕೋಟ್ಯಂತರ ಮೊತ್ತದ ಅವ್ಯವಹಾರ ನಡೆದಿದೆ. ಈ ಬಗ್ಗೆ ಸದನ ಸಮಿತಿ ವರ್ಷದ ಹಿಂದೆ ವರದಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದನದಲ್ಲಿದ್ದ ಸಚಿವಎಚ್‌.ಕೆ. ಪಾಟೀಲ, ‘ಶುಕ್ರವಾರ ಉತ್ತರ ನೀಡಲಾಗುವುದು’ ಎಂದು ಹೇಳಿದ್ದರಿಂದ ಜೆಡಿಎಸ್‌ ಸದಸ್ಯರು ಧರಣಿ ಕೈಬಿಟ್ಟರು.

ADVERTISEMENT

ಅವಕಾಶ ನಿರಾಕರಣೆ:‘ನೈಸ್‌ ಸದನ ಸಮಿತಿ ವರದಿ ಕುರಿತು ಚರ್ಚಿಸಲು ಕಾಲಾವಕಾಶ ನೀಡಬೇಕು. ಹೀಗಾಗಿ ನಿಲುವಳಿ ಮಂಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಜೆಡಿಎಸ್‌ನಕೆ.ಟಿ. ಶ್ರೀಕಂಠೇಗೌಡ ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದರು.

‘ಸಚಿವರ ಜೊತೆ ಚರ್ಚಿಸಿ ತೀರ್ಮಾನ’
ಬೆಳಗಾವಿ: ‘ರೈತರು ಜಮೀನುಗಳಿಗೆ ಹೋಗಲು, ಬೆಳೆಗಳ ಸಾಗಣೆಗೆ ರಸ್ತೆಗಳ ನಿರ್ಮಾಣಕ್ಕೆ ಅಗತ್ಯ ಭೂಮಿ ವಶಪಡಿಸಿಕೊಳ್ಳುವ ಸಂಬಂಧ ಕಂದಾಯ ಮತ್ತು ಕೃಷಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ವಿಧಾನಸಭೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ವಿಷಯ ಪ್ರಸ್ತಾಪಿಸಿದಾಗ ಮಾತನಾಡಿದ ಸಚಿವರು, ‘ಕಾಲುದಾರಿ, ಚಕ್ಕಡಿ ದಾರಿ, ಹೊಲದ ದಾರಿ ಎಂದು ಕಂದಾಯ ದಾಖಲೆಗಳಲ್ಲಿ ಈ ಹಿಂದೆ ಸ್ಪಷ್ಟವಾಗಿ ನಮೂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒತ್ತುವರಿ ಪರಿಣಾಮ ಸಮಸ್ಯೆ ಉದ್ಭವಿಸಿದೆ’ ಎಂದರು.

‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಲ್ಲಿ ಬಹಳಷ್ಟು ಸಮಸ್ಯೆಗಳು ಪರಿಹಾರ ಆಗಿವೆ. ಕಂದಾಯ ದಾಖಲೆಗಳಲ್ಲಿ ಇಲ್ಲದ ಕಡೆ ದಾರಿ ಗುರುತಿಸುವ ಸಂಬಂಧ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.