ADVERTISEMENT

ನೋಟು ಬದಲಾವಣೆ ಸಂಕಷ್ಟದಲ್ಲಿ ಬಳಲಿದ ಜನರು: ದೇವನೂರ ಮಹಾದೇವ

ಕುವೆಂಪು ರಾಷ್ಟ್ರೀಯ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2016, 12:21 IST
Last Updated 29 ಡಿಸೆಂಬರ್ 2016, 12:21 IST
ನೋಟು ಬದಲಾವಣೆ ಸಂಕಷ್ಟದಲ್ಲಿ ಬಳಲಿದ ಜನರು: ದೇವನೂರ ಮಹಾದೇವ
ನೋಟು ಬದಲಾವಣೆ ಸಂಕಷ್ಟದಲ್ಲಿ ಬಳಲಿದ ಜನರು: ದೇವನೂರ ಮಹಾದೇವ   

ಕುಪ್ಪಳ್ಳಿ: ಈ ದೇಶದಲ್ಲಿ ಮೂಲನಿವಾಸಿಗಳು ನಗರದ ಕಾಲ್ಚೆಂಡುಗಳಂತಾಗಿದ್ದಾರೆ. ದಿಡ್ಡಳ್ಳಿಯ ಮೂಲನಿವಾಸಿಗಳನ್ನು ಬೀದಿಗೆ ತಳ್ಳಲಾಗಿದೆ, ಪ್ರಾಣಿ ಪ್ರಭೇದದಂತೆ ಕಾಣಲಾಗುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರ ಕವಿ ಕುವೆಂಪು ಅವರ 112ನೇ ಜನ್ಮದಿನಾಚರಣೆ ಪ್ರಯುಕ್ತ ಕುಪ್ಪಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಸ್ವೀಕರಿಸಿ ದೇವನೂರ ಮಹಾದೇವ ಮಾತನಾಡಿದರು.

ದಕ್ಷಿಣ ಅಮೆರಿಕಾದ ವೆನಿಜುವೆಲಾ ದೇಶದಲ್ಲೂ ನೋಟು ರದ್ದತಿ ಪ್ರಕ್ರಿಯೆ ನಡೆಯಿತು. ಅದರಿಂದ ಅಲ್ಲಿ ಕ್ಷೋಭೆ ಉಂಟಾಯಿತು. ಹತ್ತಾರು ಜನರೂ ಸತ್ತರು. ಪರಿಸ್ಥಿತಿ ನಿಯಂತ್ರಿಸಲಾರದೆಯೋ ಅಥವಾ ತನ್ನ ಪ್ರಜೆಗಳ ಜೀವಕ್ಕೆ ಬೆಲೆ ಕೊಟ್ಟೋ ಅಲ್ಲಿನ ಅಧ್ಯಕ್ಷ ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡ. ನೆನಪಿರಲಿ, ಆ ದೇಶದ ಅಧ್ಯಕ್ಷ ಸರ್ವಾಧಿಕಾರಿ!

ADVERTISEMENT

ಆದರೆ, ಭಾರತದಲ್ಲಿ ಜನ ನೋಟು ಬದಲಾವಣೆ ಸಂಕಷ್ಟವನ್ನು ಸಹಿಸಿಕೊಂಡರು. ನೂರಾರು ಜನ ಸಾಲಿನಲ್ಲಿ ನಿಂತು ಜೀವ ಕಳೆದುಕೊಂಡರು.  ಒಟ್ಟಿನಲ್ಲಿ ಭಾರತೀಯರು ಇದನ್ನು ಸಹಿಸಿಕೊಂಡರು. ನೆನಪಿರಲಿ, ಭಾರತದ ಪ್ರಧಾನಿ ಸರ್ವಾಧಿಕಾರಿ ಅಲ್ಲ; ಜನಪ್ರತಿನಿಧಿ. ತನ್ನ ಪ್ರಜೆಗಳು ತನ್ನ ನಿರ್ಧಾರದ ಕಾರಣವಾಗಿ ಜೀವ ಕಳೆದುಕೊಂಡಿದ್ದನ್ನು ದೇಶ ಸೇವೆಯೆಂದು ಅವರು ಭಾವಿಸಿದಂತೆ ಕಾಣುತ್ತಿದೆ.ಅರ್ಥವಾಗದ ಒದ್ದಾಟವಾಗಿದೆ ಎಂದು ದೇವನೂರ ಮಹಾದೇವ ಹೇಳಿದರು.

ಕನ್ನಡಿಗರಿಗೆ ಭಾಷಾಭಿಮಾನ ಇಲ್ಲದಾಗಿದೆ. ಮಾತೃಭಾಷೆ ಶಿಕ್ಷಣದ ಬಗ್ಗೆ ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲ. ಸ್ಥಳೀಯ ಭಾಷೆಯ ಶಿಕ್ಷಣದ ಬಗ್ಗೆ ಸರ್ಕಾರ ಉತ್ತಮ ನಿಲುವು ತಾಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಕಾಗೋಡು ತಿಮ್ಮಪ್ಪ, ಸಚಿವೆ ಉಮಾಶ್ರೀ, ಹಂಪಾ ನಾಗರಾಜಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.