ADVERTISEMENT

ಪಕ್ಷದಲ್ಲಿನ ಆಂತರಿಕ ಸಂಘರ್ಷ ಪ್ರತಿಧ್ವನಿ?

ಭಿನ್ನಮತದ ನಡುವೆಯೇ ಕಲಬುರ್ಗಿಯಲ್ಲಿ ಇಂದಿನಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಪಕ್ಷದಲ್ಲಿನ ಆಂತರಿಕ ಸಂಘರ್ಷ ಪ್ರತಿಧ್ವನಿ?
ಪಕ್ಷದಲ್ಲಿನ ಆಂತರಿಕ ಸಂಘರ್ಷ ಪ್ರತಿಧ್ವನಿ?   

ಬೆಂಗಳೂರು:  ಕಲಬುರ್ಗಿಯಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರಲ್ಲಿ ಇರುವ ವೈರುಧ್ಯ, ವೈಯಕ್ತಿಕ ಪ್ರತಿಷ್ಠೆಯ ಸಂಘರ್ಷ ಪ್ರತಿಧ್ವನಿಸುವ ಸಾಧ್ಯತೆ ಇದೆ.

ರಾಯಣ್ಣ  ಬ್ರಿಗೇಡ್‌ ಪರ–ವಿರೋಧದ ವಾದಗಳು, ನಾಯಕರು ನೀಡುತ್ತಿರುವ ಹೇಳಿಕೆ ಮತ್ತು  ಶಿಸ್ತುಕ್ರಮ  ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ನಿದ್ದೆ ಕೆಡಿಸಿದೆ. ಬಿ.ಎಸ್‌. ಯಡಿಯೂರಪ್ಪ ಮತ್ತು ಕೆ.ಎಸ್‌. ಈಶ್ವರಪ್ಪ ಸೇರಿಗೆ ಸವ್ವಾಸೇರು ಎಂಬಂತೆ ವರ್ತಿಸುತ್ತಿರುವುದು ಬಹುತೇಕ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.
ರಾಜ್ಯ ಕಾರ್ಯಕಾರಿಣಿಯ ಆರಂಭ ಮತ್ತು ಕೊನೆಯಲ್ಲಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯ ಕುರಿತು ತಕರಾರು, ಉಭಯ ಬಣಗಳ ಮಧ್ಯೆ ವಾಗ್ವಾದ ನಡೆಯುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.

ರಾಯಣ್ಣ ಬ್ರಿಗೇಡ್‌ ಸಂಘಟನೆ ಹಾಗೂ ಇದೇ 26ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಬ್ರಿಗೇಡ್‌ ಸಮಾವೇಶದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಯಡಿಯೂರಪ್ಪ ನೀಡಲಿದ್ದಾರೆ ಎನ್ನಲಾಗಿದೆ.

‘ನೀವು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿ ಯಡಿಯೂರಪ್ಪ ಅವರಿಗೆ ಬಿಜೆಪಿಯ 24 ಜನ ಪತ್ರ ಬರೆದಿದ್ದರು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇದು ತೋರಿಸಿತ್ತು. ಕಾರ್ಯಕಾರಿಣಿಗೆ ಮುನ್ನವೇ ಯಡಿಯೂರಪ್ಪ ಕರೆದಿದ್ದ ಸಂಧಾನ ಸಭೆಗೆ ಭಿನ್ನಮತೀಯರು ಬಹಿಷ್ಕಾರ ಹಾಕಿದ್ದರು. ಪಕ್ಷದಲ್ಲಿನ ಅಸಮಾಧಾನದ ಹೊಗೆ ಕಾರ್ಯಕಾರಿಣಿಯಲ್ಲಿಯೂ ಕಾವು ಎಬ್ಬಿಸಲಿದೆ ಎಂದು ಹೇಳಲಾಗುತ್ತಿದೆ.

ಹೋರಾಟಕ್ಕೆ ಸಿದ್ಧತೆ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ರಾಜ್ಯವ್ಯಾಪಿ ಹೋರಾಟ ನಡೆಸುವ ವಿಷಯವಾಗಿ ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ.  ಎಪಿಎಂಸಿ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

(ಕಲಬುರ್ಗಿ ವರದಿ): ‘ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಯಣ್ಣ ಬ್ರಿಗೇಡ್ ಕುರಿತ ಚರ್ಚೆಗೆ ಪ್ರಾಧಾನ್ಯ ಇರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಹೇಳಿದರು.

‘ಪಕ್ಷದಲ್ಲಿ ಗೊಂದಲ ಇರುವುದು, ಕೆಲವರು ಗೊಂದಲದ ಹೇಳಿಕೆ ನೀಡುತ್ತಿರುವುದು ಸತ್ಯ.  ಇದೇ 19 ರಂದು ಕರೆದ ಸಭೆಗೆ ಭಿನ್ನರು ಬಂದಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು ’ ಎಂದು ತಿಳಿಸಿದರು.

ಚರ್ಚೆ:  ‘ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ,  ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು,  ತೊಗರಿ ಬೆಳೆಗಾರರ ಸಮಸ್ಯೆ ಮತ್ತು ಪಕ್ಷ ಸಂಘಟನೆ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುವುದು’ ಎಂದರು.

‘ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು.   ಸಂಸತ್ ಸದಸ್ಯರ ಅನುದಾನದಡಿ ₹1ಕೋಟಿ ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಿಂದ  ತಲಾ ₹25 ಲಕ್ಷ ಕೊಡುವಂತೆ ಮನವಿ ಮಾಡಿದ್ದೇನೆ. ಇದರಿಂದ ₹20 ಕೋಟಿ ಸಂಗ್ರಹವಾಗಲಿದೆ. ಕೆರೆಗಳ ಹೂಳೆತ್ತಲು, ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ವಿತರಣೆಗೆ ಈ ಹಣ ಬಳಸಲಾಗುವುದು’ ಎಂದು ತಿಳಿಸಿದರು.

‘ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಅನುದಾನದಲ್ಲಿ ಜ.22ರಂದು ಬೆಳಿಗ್ಗೆ 9 ಗಂಟೆಗೆ ತಾಲ್ಲೂಕಿನ ಕೆರಿ ಭೋಸಗಾ ಗ್ರಾಮದಲ್ಲಿರುವ ಕೆರೆಯ ಹೂಳು ಎತ್ತುವ ಮೂಲಕ ಕಲಬುರ್ಗಿಯಿಂದಲೇ ಬರಗಾಲ ನಿರ್ವಹಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದರು.

ಬಿಎಸ್‌ವೈ ಅವರದ್ದು ಹಿತ್ತಾಳೆ ಕಿವಿ: ಸೋಮಣ್ಣ
ಬೆಂಗಳೂರು:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರದ್ದು ಸ್ವಲ್ಪ ಹಿತ್ತಾಳೆ ಕಿವಿಯಾಗಿದ್ದು, ಬೇರೆಯವರು ಮಾತು ಕೇಳುವುದನ್ನು ಅವರು ಬಿಡಬೇಕು ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ವಿ. ಸೋಮಣ್ಣ ಸಲಹೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘ತಮ್ಮ ಸುತ್ತ ಮುತ್ತ,  ಮನೆಯ ಹತ್ತಿರ ಅವರು ಕೆಲವರನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಅಂತಹವರ ಮಾತು ಕೇಳುತ್ತಿರುವುದರಿಂದ ಯಡಿಯೂರಪ್ಪ ಬದಲಾಗಿದ್ದಾರೆ. ನಮಗೆಲ್ಲಾ  ಹಳೆಯ ಯಡಿಯೂರಪ್ಪ ಬೇಕು’ ಎಂದರು.

ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ. ಯಡಿಯೂರಪ್ಪ ಮಾತುಕತೆ ನಡೆಸಿದರೆ ಎಲ್ಲವೂ ಸರಿಹೋಗಲಿದೆ. ಪಕ್ಷದಲ್ಲಿ ಸೃಷ್ಟಿಯಾಗುವ ಗೊಂದಲಗಳನ್ನು ಬಗೆಹರಿಸಿ, ಪಕ್ಷ ಕಟ್ಟುವವರನ್ನೇ ನಿಜವಾದ ನಾಯಕ ಎನ್ನುತ್ತೇವೆ. ಯಡಿಯೂರಪ್ಪ ಈಗ ಆ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ತೊರೆಯಲಾರೆ: ‘ನಾನು ಬಿಜೆಪಿ ಬಿಡುವ ಯಾವುದೇ ಚಿಂತನೆ ನಡೆಸಿಲ್ಲ. ಮಹದೇವಪ್ರಸಾದ್ ಅವರ ಅಂತ್ಯಸಂಸ್ಕಾರದ ವೇಳೆಯಲ್ಲಿ  ಮುಖ್ಯಮಂತ್ರಿ ಜತೆ ಸೌಜನ್ಯದ ಮಾತುಗಳಾಡಿದ್ದೇನೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನಿನ್ನೂ ಬಿಜೆಪಿಯಲ್ಲಿಯೆ ಇದ್ದೇನೆ’ ಎಂದು ಹೇಳಿದರು.

ಪಕ್ಷದ ವರಿಷ್ಠರಿಗೆ ಪ್ರತಿನಿತ್ಯ ವರದಿ–ಡಿವಿಎಸ್‌:  ‘ಪಕ್ಷದ ರಾಜ್ಯಘಟಕದಲ್ಲಿ ನಡೆಯುತ್ತಿರುವ ಅನಪೇಕ್ಷಿತ ಗೊಂದಲಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಪ್ರತಿನಿತ್ಯ ವರದಿ ನೀಡುತ್ತಿದ್ದೇನೆ’ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳಿಂದ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ.  ನಾನು ಅಧ್ಯಕ್ಷನಾಗಿದ್ದಾಗ ಇದಕ್ಕಿಂತ ದೊಡ್ಡ ದೊಡ್ಡ ಕಂದಕಗಳು, ಭಿನ್ನಾಭಿಪ್ರಾಯಗಳು ಪಕ್ಷದ ನಾಯಕರಲ್ಲಿ ಇದ್ದವು. ಆಮೇಲೆ ಎಲ್ಲವೂ ಸರಿಯಾಯಿತು. ರಾಜ್ಯ ಕಾರ್ಯಕಾರಿಣಿ ಬಳಿಕ ಎಲ್ಲವೂ ಸರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT