ADVERTISEMENT

ಪರಿಹಾರ ವಿತರಣೆಗೆ ಜಂಟಿಖಾತಾ ಅಡ್ಡಿ!

ಪರಿಹಾರ ತಂತ್ರಾಂಶ; ಡಾಟಾ ಎಂಟ್ರಿಯಲ್ಲಿ ದಾಖಲಾಗದ ರೈತರ ಮಾಹಿತಿ

ಮಲ್ಲೇಶ್ ನಾಯಕನಹಟ್ಟಿ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಯಾದಗಿರಿ: ರೈತರು ಹೊಂದಿರುವ ಭೂಮಿಯ ಜಂಟಿಖಾತಾಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಬರ ಪರಿಹಾರ ವಿತರಣೆ ಮತ್ತಷ್ಟೂ ವಿಳಂಬವಾಗುವ ಸಾಧ್ಯತೆ ಇದೆ.
 
ಕಳೆದ ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಉಪ ಸಮಿತಿಗಳು ರಾಜ್ಯದಾದ್ಯಂತ ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸಿದ್ದವು. ಮುಂಗಾರು ಬೆಳೆ ಹಾನಿ ಪರಿಹಾರವನ್ನು ಜನವರಿ ಮೊದಲ ವಾರದಲ್ಲಿ, ಹಿಂಗಾರು ಬೆಳೆ ಹಾನಿ ಪರಿಹಾರವನ್ನು ಜನವರಿ ಕೊನೆಯಲ್ಲಿ ವಿತರಿಸುವಂತೆ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದವು. ಆದರೆ, ಪರಿಹಾರ ತಂತ್ರಾಂಶ ಜಂಟಿಖಾತಾ ಇರುವ ರೈತರ ಮಾಹಿತಿಯನ್ನು ಸ್ವೀಕರಿಸದೇ ಇರುವುದು ಪರಿಹಾರ ವಿತರಣೆ ವಿಳಂಬಕ್ಕೆ ಕಾರಣವಾಗುತ್ತಿದೆ.
 
ರೈತರ ಜಮೀನು ಸರ್ವೆ ನಂಬರ್‌ ಹಾಗೂ ಖಾತೆ ನಂಬರ್ ಅನ್ನು ತಂತ್ರಾಂಶದ ಐಡಿ, ಪಾಸ್‌ವರ್ಡ್‌ ಆಗಿ ನಮೂದಿಸಿದರೆ ಇತರೆ ಮಾಹಿತಿಯನ್ನು ಒಳಗೊಂಡ ಆ್ಯಪ್‌ ತೆರೆದುಕೊಳ್ಳುತ್ತದೆ. ಆಗ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್‌ ಉಳಿತಾಯ ಖಾತೆ ಸಂಖ್ಯೆ, ಐಎಫ್‌ಸಿ ಕೋಡ್, ಆರ್‌ಟಿಜಿಎಸ್ ನೇರ ವರ್ಗಾವಣೆ ಅಲ್ಲಿ ದಾಖಲಿಸಬೇಕಾಗುತ್ತದೆ. ಆದರೆ, ಜಂಟಿಖಾತಾ ಹೊಂದಿರುವ ರೈತರ ಜಮೀನಿನ ಸರ್ವೆ ನಂಬರ್, ಖಾತೆ ಸಂಖ್ಯೆ ಐಡಿ, ಪಾಸ್‌ವರ್ಡ್‌ ಆಗಿ ನಮೂದಿಸಿದರೂ ಪರಿಹಾರ ತಂತ್ರಾಂಶ ಉಳಿದ ಮಾಹಿತಿ ದಾಖಲಿಸುವ ಆ್ಯಪ್‌ ತೆರೆದುಕೊಳ್ಳದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂಬುದಾಗಿ ಕಂದಾಯ ಇಲಾಖೆಯ ಹಿರಿಯ ಶ್ರೇಣಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 
ಜಿಲ್ಲೆಯಲ್ಲಿ ಒಟ್ಟು 3,58,853 ಹೆಕ್ಟೇರ್‌ ಕೃಷಿ ಭೂಮಿ ಬಳಕೆಯಲ್ಲಿದೆ. ಅದರಲ್ಲಿ 2,09,622 (ಶೇ 58ರಷ್ಟು) ಹೆಕ್ಟೇರ್ ಮಳೆಯಾಶ್ರಿತ ಹಾಗೂ 1,49,231 ಹೆಕ್ಟೇರ್‌ ನೀರಾವರಿ ಭೂಮಿ. 
 
ಈ ಭೂಮಿಯಲ್ಲಿ ಶೇ 96.75ರಷ್ಟು ರೈತರು ಬಿತ್ತನೆ ಮಾಡಿದ್ದರು ಎಂಬುದಾಗಿ ಕೃಷಿ ಇಲಾಖೆ ವರದಿ ನೀಡಿದೆ. ಬರಪೀಡಿತ ಎಂದು ಘೋಷಿಸಲ್ಪಟ್ಟಿರುವ ಶಹಾಪುರ ತಾಲ್ಲೂಕಿನಲ್ಲಿಯೇ ಒಟ್ಟು 32,795 ಹೆಕ್ಟೇರ್‌ನಲ್ಲಿ ಬೆಳೆಹಾನಿ ಆಗಿದೆ. 
 
ಇಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದಾರೆ. ಸರ್ಕಾರ ಬರ ಪರಿಹಾರ ನೀಡಿದರೆ ಒಂದಷ್ಟು ಕೃಷಿ ಸಾಲ ತೀರಿಸಬಹುದು ಎಂದು ರೈತರು ಅಂದುಕೊಂಡಿದ್ದರು. ಆದರೆ, ಈಗ ಬರ ಪರಿಹಾರ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದಾಗಿ ತೊಂದರೆಗೆ ಸಿಲುಕಿದ್ದಾರೆ.
 
**
ಪತ್ರ ಬರೆಯಲು ಚಿಂತನೆ
‘ಪರಿಹಾರ ತಂತ್ರಾಂಶದ ಸಮಸ್ಯೆ ರಾಜ್ಯದಾದ್ಯಂತ ಇದೆ. ಜಂಟಿಖಾತಾ ಇರುವ ರೈತರು ಒಂದೇ ಪಹಣಿ ಹೊಂದಿದ್ದಾರೆ. ಹಾಗಾಗಿ, ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿಲ್ಲ. ಯಾವ ರೈತರಿಗೂ ಅನ್ಯಾಯ ಆಗಬಾರದು. ಹಾಗಾಗಿ, ಕಾಲಾವಕಾಶಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ’ ಎನ್ನುತ್ತಾರೆ ಉಪ ವಿಭಾಗಾಧಿಕಾರಿ ಜಗದೀಶ ನಾಯಕ.
 
**
ಕೇಂದ್ರ ಸರ್ಕಾರ ತನ್ನ ಪಾಲಿನ ಬರ ಪರಿಹಾರ ₹ 1,782 ಕೋಟಿ ಮಂಜೂರು ಮಾಡಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲನ್ನು ಇನ್ನೂ ಮಂಜೂರು ಮಾಡಿಲ್ಲ.  
-ಮಲ್ಲಿಕಾರ್ಜುನ ಸತ್ಯಂಪೇಟೆ,
ರಾಜ್ಯ ರೈತಸಂಘದ ಕಾರ್ಯದರ್ಶಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.