ADVERTISEMENT

ಪರೇಶ ಮೇಸ್ತ ಸಾವಿನ ಪ್ರಕರಣ: ಉತ್ತರಕನ್ನಡ ತ್ವೇಷಮಯ; ಮೂರು ದಿನ ಜಿಲ್ಲೆಯಲ್ಲಿ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 5:12 IST
Last Updated 12 ಡಿಸೆಂಬರ್ 2017, 5:12 IST
ಪ್ರತಿಭಟನಾಕಾರರು ಕುಮಟಾದ ಮಾಸ್ತಿ ಕಟ್ಟೆ ವೃತ್ತದ ರಸ್ತೆಯಲ್ಲಿ ಟೈರ್‌ಗೆ ಹಚ್ಚಿದ್ದ ಬೆಂಕಿಯನ್ನು ನಂದಿಸಲು ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ
ಪ್ರತಿಭಟನಾಕಾರರು ಕುಮಟಾದ ಮಾಸ್ತಿ ಕಟ್ಟೆ ವೃತ್ತದ ರಸ್ತೆಯಲ್ಲಿ ಟೈರ್‌ಗೆ ಹಚ್ಚಿದ್ದ ಬೆಂಕಿಯನ್ನು ನಂದಿಸಲು ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ   

ಕಾರವಾರ/ಕುಮಟಾ: ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಸೋಮವಾರ ಕುಮಟಾ ಮತ್ತು ಕಾರವಾರದಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

ಕುಮಟಾದಲ್ಲಿ ಉದ್ರಿಕ್ತರು ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಕಾರು ಸುಟ್ಟಿದ್ದಾರೆ. ಕಲ್ಲು ತೂರಾಟದಲ್ಲಿ ಕುಮಟಾ ಪಿಎಸ್ಐ ಇ.ಸಿ. ಸಂಪತ್, ದಾಂಡೇಲಿ ಮಹಿಳಾ ಎಎಸ್ಐ ಮಂಜುಳಾ ರಾವೋಜಿ ಸೇರಿದಂತೆ ಸುಮಾರು ಹತ್ತು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಮಾಧ್ಯಮದವರ ಮೇಲೂ ಕಲ್ಲು ತೂರಾಟ ನಡೆದಿದ್ದು, ಪತ್ರಕರ್ತರೊಬ್ಬರ ತಲೆಗೆ ಗಾಯವಾಗಿದೆ. ಈ ಸಂದರ್ಭ ಫೋಟೊ ತೆಗೆದ ಸಂಯುಕ್ತ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕರ ಕ್ಯಾಮೆರಾ ಕಸಿದುಕೊಂಡ ಉದ್ರಿಕ್ತರು, ಅದನ್ನು ನೆಲಕ್ಕೆ ಬಡಿದು ಪುಡಿ ಮಾಡಿದ್ದಾರೆ.

ADVERTISEMENT

ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜತೆಗೆ ಅಶ್ರುವಾಯುವನ್ನೂ ಸಿಡಿಸಿದರು. ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಹಾಗೂ ಹತ್ತಕ್ಕೂ ಹೆಚ್ಚು ಬೈಕ್‌ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚಾಲಕನ ಸಮೇತ ಕಾರಿಗೆ ಬೆಂಕಿ: ಬೆಳಿಗ್ಗೆ 10 ಗಂಟೆಗೆ ಕುಮಟಾದ ಮಾಸ್ತಿಕಟ್ಟೆ ವೃತ್ತದಿಂದ ಆರಂಭವಾದ ಮೆರವಣಿಗೆ ನೂರು ಮೀಟರ್‌ ಸಾಗುತ್ತಿ
ದ್ದಂತೆಯೇ ಕಲ್ಲು ತೂರಾಟ ಆರಂಭವಾಯಿತು. ಪೊಲೀಸ್‌ ಸಿಬ್ಬಂದಿ ಹಾಗೂ ಮಾಧ್ಯಮದವರ ಮೇಲೂ ಕಲ್ಲು ತೂರಲಾಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಐ.ಜಿ.ಪಿ ಹೇಮಂತ ನಿಂಬಾಳ್ಕರ್ ಕಾರಿನಿಂದ ಇಳಿದ ನಂತರ, ಚಾಲಕ ಒಳಗಿದ್ದಾಗಲೇ ಕಾರಿಗೆ ಬೆಂಕಿ ಹಚ್ಚಲಾ
ಯಿತು. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ, ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಭುಗಿಲೆದ್ದ ಕಾರವಾರ ಸ್ವಯಂ ಪ್ರೇರಿತ ಬಂದ್‌ಗೆ ಬಿಜೆಪಿ ಕರೆ ನೀಡಿದ್ದರಿಂದ ಸೋಮವಾರ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟು ತೆರೆಯಲಿಲ್ಲ. ಕೆಲ ಅಂಗಡಿಗಳನ್ನು ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದರು. ಸಾರಿಗೆ ಬಸ್ಸುಗಳ ಸಂಚಾರ ಕೂಡ ತಡೆದರು. ಬಳಿಕ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು.

ಈ ಸಂದರ್ಭದಲ್ಲಿ ಕೆಲವರು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಕಾರವಾರದಲ್ಲಿ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಸ್ಪತ್ರೆ, ಔಷಧ ಅಂಗಡಿಗಳು ಹೊರತು ಪಡಿಸಿ ಉಳಿದ ಮಳಿಗೆಗಳು ಬಾಗಿಲು ಮುಚ್ಚಿದ್ದವು.

ಹೆದ್ದಾರಿ ತಡೆ, ಟೈರ್‌ಗೆ ಬೆಂಕಿ

ನಗರದ ಲಂಡನ್‌ ಸೇತುವೆ ಬಳಿಗೆ ತೆರಳಿ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು ನಂತರ ಟೈರಿಗೆ ಬೆಂಕಿ ಹಚ್ಚಿದರು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ವಾಹನದ ಮೇಲೂ ಕಲ್ಲು ತೂರಿದ್ದರಿಂದ ವಾಹನದ ಮುಂದಿನ ಗಾಜು ಪುಡಿಯಾಯಿತು.

ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಜಿ.ಎನ್.ನಾಯ್ಕ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಮನವಿಗೆ ಜಗ್ಗದೇ ಹೆದ್ದಾರಿ ತಡೆಯನ್ನು ಮುಂದುವರಿಸಿದರು. ಸುಮಾರು ಮೂರು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ 2 ಕಿ.ಮೀ.ವರೆಗೆ ವಾಹನ ಸಾಲುಗಟ್ಟಿ ನಿಂತಿದ್ದವು.

ಲಾಠಿ ಪ್ರಹಾರ
ನಗರದ ಕುಟಿನ್ಹೊ ರಸ್ತೆಯಲ್ಲಿ, ಬಾಗಿಲು ತೆರೆದಿದ್ದ ಮುಸ್ಲಿಂ ಸಮುದಾಯದ ‘ಮೂನ್‌ಲೈಟ್‌’ ಹೋಟೆಲ್‌ ಮೇಲೂ ಕಲ್ಲು ತೂರಿದರು. ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಉದ್ರಿಕ್ತರು ವಾಗ್ವಾದಕ್ಕಿಳಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಪ್ರಚೋದಿತ ಹಾಗೂ ವ್ಯವಸ್ಥಿತ ಕೃತ್ಯ–ಎಸ್ಪಿ

‘ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾ ಕೃತ್ಯಗಳು ಪ್ರಚೋದಿತವಾಗಿದ್ದು ಅತ್ಯಂತ ವ್ಯವಸ್ಥಿತವಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಇಲ್ಲದ ಕಾರಣ ಹಿಂಸೆಯನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ತಿಳಿಸಿದ್ದಾರೆ.

ಹಿಂದೆಂದೂ ನಡೆದಿರಲಿಲ್ಲ: ಶಾಸಕಿ ಶಾರದಾ ಶೆಟ್ಟಿ

‘ಕುಮಟಾ ಇತಿಹಾಸದಲ್ಲಿ ಇಂಥ ಹಿಂಸಾಚಾರ ಹಿಂದೆಂದೂ ನಡೆದಿರಲಿಲ್ಲ. ರಾಜಕೀಯ ಉದ್ದೇಶದಿಂದ ಇದನ್ನೆಲ್ಲ ಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಶಾಂತಿಯುತ ಮೆರವಣಿಗೆ ಎಂದು ಹೇಳಿ, ಐಜಿಪಿ ಕಾರಿಗೆ ಬೆಂಕಿ ಹಚ್ಚುವವರೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದು ವಿಪರ್ಯಾಸದ ಸಂಗತಿ’ ಎಂದಿರುವ ಶಾಸಕಿ ಶಾರದಾ ಶೆಟ್ಟಿ, ಶಾಂತಿ ಕಾಪಾಡುವ ಮೂಲಕ ಕುಮಟಾಕ್ಕೆ ಕೆಟ್ಟ ಹೆಸರು ಬರುವುದನ್ನು ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶಾಸಕಿ ಮನೆಗೂ ಕಲ್ಲು
ಮೆರವಣಿಗೆ ಸಂದರ್ಭ ಪ್ರತಿಭಟನಾಕಾರರು ಸ್ಥಳೀಯ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೂ ಕಲ್ಲು ತೂರಿದರು.
ಶಾಸಕರ ಅಂಗ ರಕ್ಷಕ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರಿಗೆ ರಕ್ಷಣೆ ನೀಡಲಾಯಿತು. ಆದರೆ, ಈ ಬಗ್ಗೆ ಶಾಸಕಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

* ಉದ್ರಿಕ ಜನರು ಕಲ್ಲು ತೂರಾಟ ನಡೆಸಿದ್ದರಿಂದ ಕೆಲ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ, ಕೆಲ ವಾಹನಗಳು ಕೂಡ ಜಖಂಗೊಂಡಿವೆ. ಮಧ್ಯಾಹ್ನದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

–ವಿನಾಯಕ ವಿ ಪಾಟೀಲ, ಎಸ್ಪಿ

‘ಸಾಯಿಸಿದ ಲಕ್ಷಣಗಳಿಲ್ಲ’

‘ಆಯುಧದಿಂದ ಹಲ್ಲೆ ನಡೆಸಿದ ಗುರುತುಗಳಾಗಲಿ ಅಥವಾ ಉಸಿರುಗಟ್ಟಿಸಿ ಸಾಯಿಸಿರುವ ಲಕ್ಷಣಗಳಾಗಲಿ ಪರೇಶ್‌ ಮೇಸ್ತ ಮೃತದೇಹದಲ್ಲಿ ಕಂಡುಬಂದಿಲ್ಲ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಂಕರ್‌ ಎಂ.ಬಕ್ಕನ್ನವರ ಹೊನ್ನಾವರ ಪೊಲೀಸರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ಡಿ.8ರಂದು ಪರೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಈಗ ವರದಿ ಬಂದಿದೆ. ಸಹಜವಾಗಿ ಮೃತಪಟ್ಟಿದ್ದಾರೆಯೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಕುರಿತಾದ 19 ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರಿಸಲಾಗಿದೆ.

‘ಸುಟ್ಟ ಗಾಯದ ಗುರುತು ಕಂಡುಬಂದಿಲ್ಲ. ಆದರೆ ದೇಹದ ಎರಡು ಕಡೆ ತರಚಿದ ಗಾಯಗಳಿವೆ. ಉಗುರು ಅಥವಾ ಪಿನ್‌ನಿಂದ ಚುಚ್ಚಿರುವುದು ಕಂಡುಬಂದಿಲ್ಲ. ಇನ್ನು ಮರ್ಮಾಂಗವಾಗಲಿ ಅಥವಾ ಇತರ ಅಂಗಾಂಗಗಳಾಗಲಿ ವಿರೂಪಗೊಂಡಿಲ್ಲ. ತಲೆಗೂ ಯಾವುದೇ ರೀತಿ ಪೆಟ್ಟು ಬಿದ್ದಿಲ್ಲ. ದೇಹದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್‌ ಬಿದ್ದಿಲ್ಲ. ಹಗ್ಗ ಬಿಗಿದ ಗುರುತು ಸಹ ಎಲ್ಲೂ ಇಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಜಿಲ್ಲೆಯಾದ್ಯಂತ 14ರವರೆಗೆ ನಿಷೇಧಾಜ್ಞೆ
ಕಾರವಾರ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿ.14ರವರೆಗೆ ಸಭೆ, ಸಮಾರಂಭ, ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿದ್ದಾರೆ.
ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಹೊನ್ನಾವರ ಶಾಂತ

ಹೊನ್ನಾವರ: ಹಿಂದೂ ಯುವಕನ ಅನುಮಾನಾಸ್ಪದ ಸಾವಿನ ನಂತರ, ಭುಗಿಲೆದ್ದಿದ್ದ ಪಟ್ಟಣದಲ್ಲಿ ಸೋಮವಾರ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಶಾಲೆ–ಕಾಲೇಜುಗಳು ಪುನರಾರಂಭಗೊಂಡಿದ್ದು, ಹಾಜರಾತಿ ವಿರಳವಾಗಿತ್ತು. ವಹಿವಾಟು ಆರಂಭಿಸಿದ್ದ ವರ್ತಕರು, ಕುಮಟಾದಲ್ಲಿ ಹಿಂಸಾಚಾರ ನಡೆದಿರುವ ವಿಷಯ ತಿಳಿದು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಬಂದ್ ಮಾಡಿದರು.

ಸಮೀಪದ ಜಲವಳ್ಳಿ ಕ್ರಾಸ್‌ ಬಳಿ ಆಂಬುಲೆನ್ಸ್‌ನಲ್ಲಿ ತೆರಳುತ್ತಿದ್ದ ಮುಸ್ಲಿಂ ಮಹಿಳೆಯರು ಹಾಗೂ ಚಾಲಕನ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ತಮ್ಮ ವಾಹನದಲ್ಲಿ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದರು ಎಂದು ತಿಳಿದುಬಂದಿದೆ.

ಸಿಬಿಐಗೆ ವಹಿಸುವಂತೆ ಮನವಿ

‘ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಸಿಬಿಐ ಅಥವಾ ಎನ್‍ಐಎಗೆ ವಹಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಲಾಗುವುದು. ರಾಜ್ಯ ಸರ್ಕಾರ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರದ ತನಿಖೆಗೆ ಅವಕಾಶ ಮಾಡಿಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೋಮವಾರ ಶಿರಸಿಯಲ್ಲಿ ಒತ್ತಾಯಿಸಿದರು.

ಮುಖ್ಯಾಂಶಗಳು

* ಶಾಸಕಿ ಶಾರದಾ ಶೆಟ್ಟಿ ಮನೆ ಮೇಲೆ ಕಲ್ಲು ತೂರಾಟ

* ಶಿರಸಿ ಬಂದ್ ಇಂದು

* ಕುಮಟಾ–ಹೊನ್ನಾವರ ಹೆದ್ದಾರಿ 3 ತಾಸು ಬಂದ್‌

ಅಬ್ದುಲ್ ಗಫೂರ್

ಪತಿಯನ್ನು ಹುಡುಕಿಕೊಡುವಂತೆ ಮನವಿ

ಶಿರಸಿ: ನಾಲ್ಕು ದಿನಗಳಿಂದ ಕಾಣೆಯಾಗಿರುವ ತಮ್ಮ ಪತಿ ಅಬ್ದುಲ್‌ ಗಫೂರ್‌ ಅಬ್ದುಲ್‌ ಜಬ್ಬಾರ್‌ ಸುಂಠಿ ಅವರನ್ನು ಹುಡುಕಿಕೊಡುವಂತೆ, ತಾಲ್ಲೂಕಿನ ಬಿಳಿಗಿರಿಕೊಪ್ಪದಲ್ಲಿರುವ ಜುವೇರಿಯಾ ಒತ್ತಾಯಿಸಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನನ್ನ ಪತಿ ಮರಳು ಲಾರಿ ಚಾಲಕರಾಗಿದ್ದಾರೆ. 15 ದಿನಗಳಿಂದ ಪ್ರತಿದಿನವೂ ಮರಳು ಗಾಡಿಗೆ ಹೋಗಿ, ರಾತ್ರಿ 10 ಗಂಟೆಗೆ ವಾಪಸ್ಸಾಗುತ್ತಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆ 5ಕ್ಕೆ ಹೋದವರು ಇದುವರೆಗೂ ಮನೆಗೆ ಬಂದಿಲ್ಲ. ಅವರ ಫೋನ್‌ ಕೂಡ ಸ್ವಿಚ್ಛ್‌ ಆಫ್‌ ಆಗಿದೆ. ಇದರಿಂದ ಆತಂಕವಾಗಿದೆ. ಐವರು ಚಿಕ್ಕಮಕ್ಕಳೊಂದಿಗೆ ಬದುಕುತ್ತಿರುವ ನನಗೆ ದಿಕ್ಕೇ ತೋಚದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಗಫೂರ್‌ ಅವರ ಸೋದರ ಅಬ್ದುಲ್‌ ಖುದ್ದೂಸ್‌ ಮಾತನಾಡಿ, ‘ ಅಣ್ಣ, ಹೊನ್ನಾವರದ ಗೇರುಸೊಪ್ಪ ರಸ್ತೆಯ ಸಮೀಪದ ಜಾಗದಿಂದ ಮರಳು ತುಂಬಿಕೊಂಡು ಗಾಡಿಯಲ್ಲಿ ಬರುತ್ತಿದ್ದ. ಈ ವೇಳೆ ಬೈಕಿನಲ್ಲಿ ಬಂದ ನಾಲ್ವರು ನನ್ನ ಅಣ್ಣನನ್ನು ಹೊಡೆದಿದ್ದಾಗಿ ತಿಳಿದುಬಂದಿದೆ. ಗಾಡಿ ಜಖಂಗೊಂಡಿದೆ. ಹೊನ್ನಾವರದಲ್ಲಿ ಗುಂಪು ಘರ್ಷಣೆ ನಡೆದಿರುವ ಸಂದರ್ಭದಲ್ಲೇ ಈ ರೀತಿ ನಾಪತ್ತೆಯಾಗಿರುವುದು ನಮ್ಮ ಆತಂಕವನ್ನು ಹೆಚ್ಚಿಸಿದೆ’ ಎಂದರು.

ಮನವಿ ಸಲ್ಲಿಕೆ: ‘ಗೇರುಸೊಪ್ಪದಿಂದ ಶಿರಸಿಗೆ ಮರಳು ತರುವ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಗಫೂರ್ ಅವರನ್ನು ಪತ್ತೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯಬಾರದು ಎಂದು ಒತ್ತಾಯಿಸಿ ಬಿಳಗಿರಿಕೊಪ್ಪ, ಉಂಚಳ್ಳಿ ಭಾಗದ ಗ್ರಾಮಸ್ಥರು ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್ಪಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಗಫೂರ್‌ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

* ನನ್ನ ಲಾರಿಯ ಚಾಲಕನಾಗಿ ಹೋಗಿದ್ದ ಅಬ್ದುಲ್ ಗಫೂರ್‌ ಶುಕ್ರವಾರ 9.30 ಸುಮಾರಿಗೆ ಕರೆ ಮಾಡಿದ್ದ. ನಂತರ ಪುನಃ ನಾನು 11.30ರ ವೇಳೆಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು

–ಪರಮೇಶ್ವರಪ್ಪ ಕೋಣಾವರ
ಮರಳು ಲಾರಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.