ADVERTISEMENT

‍ಪರೋಕ್ಷ ಸಮೀಕ್ಷೆಗೆ ಮುಂದಾದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾರರ ಒಲವುನಿಲುವು ಅರಿಯಲು ಇದೇ 23ರಿಂದ ಅ.15ರವರೆಗೆ ‘ಮನೆ ಮನೆಗೆ ಕಾಂಗ್ರೆಸ್‌ ’ ಎಂಬ ಕಾರ್ಯಕ್ರಮದ ಮೂಲಕ ಪರೋಕ್ಷ ಸಮೀಕ್ಷೆ ನಡೆಸಲು ರಾಜ್ಯ ಕಾಂಗ್ರೆಸ್‌ ತೀರ್ಮಾನಿಸಿದೆ.

ಕಾರ್ಯಕ್ರಮದ ಭಾಗವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಮತದಾರನ ಮನೆಗೆ ತೆರಳಿ, ರಾಜ್ಯ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಕಿರುಹೊತ್ತಿಗೆಯನ್ನು ಹಂಚಲಿದ್ದಾರೆ.

ಜೊತೆಗೆ, 11 ಪ್ರಶ್ನೆಗಳನ್ನು ಒಳಗೊಂಡ ನಮೂನೆಯೊಂದರಲ್ಲಿ ಕುಟುಂಬದ ಮತದಾರರ ಸಂಖ್ಯೆ, ಬೆಂಬಲಿಸುವ ಪಕ್ಷದ ಮಾಹಿತಿ ಸಂಗ್ರಹಿಸಲಿದ್ದಾರೆ.

ADVERTISEMENT

‘ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಭಾಗವಾಗಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದಲ್ಲಿ ಒಟ್ಟು 54,261 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಅಧ್ಯಕ್ಷ ಮತ್ತು ಬೂತ್‌ ಮಟ್ಟದ ಏಜೆಂಟರನ್ನು ನೇಮಿಸಲಾಗಿದೆ. ಅಲ್ಲದೆ, 13ರಿಂದ 20ರಷ್ಟು ಸದಸ್ಯರಿರುವ ಸಮಿತಿ ರಚಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮಾಧ್ಯಮಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ಮತಗಟ್ಟೆ ಸಮಿತಿಯ 6.50 ಲಕ್ಷ ಸದಸ್ಯರ ಎಲ್ಲ ವಿವರಗಳನ್ನು ಸಂಗ್ರಹಿಸಲಾಗುವುದು. ಈ ಸದಸ್ಯರನ್ನು ಸುಲಭವಾಗಿ ಸಂಪರ್ಕಿಸಲು ಎಲ್ಲರ ಮೊಬೈಲ್‌ ಸಂಖ್ಯೆಯನ್ನೂ ಪಡೆಯಲಾಗುವುದು.

ವಾಟ್ಸ್ ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಹೀಗೆ ಸಾಮಾಜಿಕ ಜಾಲ ತಾಣಗಳಿಗೆ ಈ ಮೊಬೈಲ್‌ ಸಂಖ್ಯೆ ನೋಂದಾಯಿಸಿ, ಪಕ್ಷದ ಸಾಧನೆಗಳನ್ನು ಹಂಚಲು ಉದ್ದೇಶಿಸಲಾಗಿದೆ’ ಎಂದರು.

‘2013ರ ಚುನಾವಣೆಯಲ್ಲಿ ಬ್ಲಾಕ್‌ ಮಟ್ಟದಲ್ಲಿ ಕಾಂಗ್ರೆಸ್‌ ನಡಿಗೆ ಜನರ ಬಳಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಗೆ ಒಬ್ಬ ಕೆಪಿಸಿಸಿ ಪದಾಧಿಕಾರಿಯನ್ನು ನೇಮಿಸಲಾಗಿದೆ.

ಕಾರ್ಯಕ್ರಮದ ಮೂಲಕ ಪ್ರತಿ ಮತಗಟ್ಟೆಯಲ್ಲಿ 50 ಮತಗಳು ಹೆಚ್ಚಳವಾದರೂ, ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ಗಳಿಸಲುಸಾಧ್ಯ’ ಎಂದೂ ‍ಪರಮೇಶ್ವರ ಲೆಕ್ಕ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.