ADVERTISEMENT

ಪಿಂಜಾರ ಸಮುದಾಯದ ಶಕ್ತಿ ಪ್ರದರ್ಶನ

ಬಿಜೆಪಿ ಅಧಿಕಾರಕ್ಕೆ ಬಂದರೆ ‘ಪಿಂಜಾರ ಅಭಿವೃದ್ಧಿ ನಿಗಮ’ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ವಿಜಯಪುರದಲ್ಲಿ ಮಂಗಳವಾರ ನಡೆದ ಪಿಂಜಾರರ ಜನ ಜಾಗೃತಿ ಸಮ್ಮೇಳನದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿದರು. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಐ.ಎ.ಪಿಂಜಾರ (ಎಡದಿಂದ ಕುಳಿತಿರುವ ಐದನೇಯವರು), ಮಹ್ಮದ ಇಕ್ಬಾಲ್ ಎನ್‌.ನದಾಫ, ಯಮ್ಮಿಗನೂರ ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಇದ್ದಾರೆ   -–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಮಂಗಳವಾರ ನಡೆದ ಪಿಂಜಾರರ ಜನ ಜಾಗೃತಿ ಸಮ್ಮೇಳನದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿದರು. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಐ.ಎ.ಪಿಂಜಾರ (ಎಡದಿಂದ ಕುಳಿತಿರುವ ಐದನೇಯವರು), ಮಹ್ಮದ ಇಕ್ಬಾಲ್ ಎನ್‌.ನದಾಫ, ಯಮ್ಮಿಗನೂರ ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಇದ್ದಾರೆ -–ಪ್ರಜಾವಾಣಿ ಚಿತ್ರ   

ವಿಜಯಪುರ: ಸಮಸ್ಯೆಗೆ ಪರಿಹಾರ, ಸಂವಿಧಾನಬದ್ಧ ಹಕ್ಕಿಗಾಗಿ ಮಂಗಳವಾರ ನಗರದಲ್ಲಿ ಪಿಂಜಾರ ಸಮುದಾಯ ತನ್ನ ಶಕ್ತಿ ಪ್ರದರ್ಶನ ನಡೆಸಿತು.

ಹಿರಿಯರು, ಮುತ್ಸದ್ದಿಗಳು, ಚಿಂತಕರು, ಆಸಕ್ತರು ಚಿಂತನ–ಮಂಥನ ನಡೆಸಿ, ಸರ್ಕಾರದ ಗಮನ ಸೆಳೆಯಲು ನಡೆಸಬೇಕಾದ ಹೋರಾಟದ ರೂಪುರೇಷೆ, ವಿವಿಧ ಬೇಡಿಕೆ ಈಡೇರಿಕೆಯ ಪ್ರಸ್ತಾವನೆಯನ್ನು ಮಂಡಿಸಿದರು.

ಪಿಂಜಾರ/ನದಾಫ/ಮನಸೂರ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಐ.ಎ.ಪಿಂಜಾರ ಮಾತನಾಡಿ, ‘25 ವರ್ಷಗಳಿಂದ ಎಲ್ಲ ಪಕ್ಷಗಳು ಪಿಂಜಾರ ಸಮುದಾಯವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿವೆ. ಆದರೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ.

ADVERTISEMENT

ನಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟಕ್ಕೆ ತರುವಂತಹ ನಾಯಕರು ಇಲ್ಲದಂತಾಗಿದೆ. ಇದರಿಂದ ಯಾವೊಂದು ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಅನಿವಾರ್ಯವಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಲು ಸಿದ್ಧರಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ನಗರದಲ್ಲಿ ಜನ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಸಂವಿಧಾನ ದೇಶದ ಎಲ್ಲ ಸಮುದಾಯಕ್ಕೆ ಮೀಸಲಾತಿ ನೀಡಿದ್ದರೂ, ಪ್ರಬಲರಿಗೆ ಮಾತ್ರ ಹೆಚ್ಚಿನ ಅವಕಾಶ ದೊರೆಯುತ್ತಿದ್ದು, ಬಹುತೇಕರು ಸೌಲಭ್ಯ ವಂಚಿತರಾಗಿದ್ದಾರೆ. ಮುಸ್ಲಿಮರಲ್ಲಿ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಪಿಂಜಾರ ಸಮುದಾಯಕ್ಕೆ ಇದುವರೆಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಈ ಸಮುದಾಯದ ಜನರು ನಮ್ಮತ್ತ ಬಂದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪಿಂಜಾರ ಅಭಿವೃದ್ಧಿ ನಿಗಮ’ ಸ್ಥಾಪಿಸುವ ಭರವಸೆಯನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ನೀಡಿದರು.

ಯಮ್ಮಿಗನೂರ ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ, ಮಹ್ಮದ ಇಕ್ಬಾಲ್ ಎನ್‌.ನದಾಫ ಸಾನ್ನಿಧ್ಯ ವಹಿಸಿದ್ದರು. ಮಹಾಮಂಡಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ ಗೋರನಕೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಎನ್‌.ಎ.ಮುಲ್ಲಾ, ಖಜಾಂಚಿ ಮಹ್ಮದ್‌ಗೌಸ ನದಾಫ ಉಪಸ್ಥಿತರಿದ್ದರು. 

* ವಿರೋಧದ ನಡುವೆಯೂ ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ನಡೆಸಿದ ಜಾತಿ ಗಣತಿಯ ವರದಿಯನ್ನು ವಾರದೊಳಗೆ ಬಹಿರಂಗಗೊಳಿಸಬೇಕು
-ಜಗದೀಶ ಶೆಟ್ಟರ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.