ADVERTISEMENT

ಪಿಎಸ್‌ಐ ರೇವತಿ ರಾಜೀನಾಮೆ

ಮೇಲಧಿಕಾರಿಗಳಿಂದ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 21:30 IST
Last Updated 28 ಆಗಸ್ಟ್ 2016, 21:30 IST
ಪಿಎಸ್‌ಐ ರೇವತಿ ರಾಜೀನಾಮೆ
ಪಿಎಸ್‌ಐ ರೇವತಿ ರಾಜೀನಾಮೆ   

ಭಟ್ಕಳ (ಉತ್ತರ ಕನ್ನಡ): ಜೀವಬೆದರಿಕೆ ಪ್ರಕರಣ  ದಾಖಲಿಸಿಕೊಳ್ಳದ ಕಾರಣ ಅಮಾನತುಗೊಂಡಿರುವ ನಗರ ಠಾಣೆ ಸಬ್ಇನ್‌ಸ್ಪೆಕ್ಟರ್‌ ಎಂ.ರೇವತಿ, ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಮೂರು ತಿಂಗಳ ಹಿಂದಷ್ಟೇ ಅವರು ಸಬ್‌ಇನ್‌ಸ್ಪೆಕ್ಟರ್‌ ಆಗಿ ಈ ಠಾಣೆಗೆ ಬಂದಿದ್ದರು. ಪಟ್ಟಣದ ಉದ್ಯಮಿ ಸೈಯದ್‌ ಮೊಹಸಿನ್‌ ಅವರಿಗೆ ಜುಲೈನಲ್ಲಿ ಐದಾರು ಮಂದಿಯ ಗುಂಪು ₹ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿತ್ತು. ಈ ಕುರಿತು ದೂರು ನೀಡಲು ಹೋದಾಗ, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ರೇವತಿ, ರಾಜಿಯಾಗಲು ಒತ್ತಡ ಹೇರಿದ್ದರು ಎನ್ನಲಾಗಿದೆ.

ಬಳಿಕ ಸೈಯದ್‌ ಬೆಂಗಳೂರಿಗೆ ತೆರಳಿ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಕರ್ತವ್ಯಲೋಪ ಎಸಗಿದ ಕಾರಣಕ್ಕೆ ರೇವತಿ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ ಅವರಿಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದರು. ಅದರಂತೆ ಶನಿವಾರ ಆದೇಶವನ್ನು ರೇವತಿ ಅವರಿಗೆ ತಲುಪಿಸಲಾಗಿತ್ತು.

ಇದಕ್ಕೆ ಪ್ರತಿಯಾಗಿ ಅವರು ಸರ್ಕಲ್‌ ಇನ್‌ಸ್ಪೆಕ್ಟರ್‌ ಸುರೇಶ್‌ ನಾಯಕ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

‘ಕರ್ತವ್ಯಲೋಪ ಎಸಗಿರುವ ಕುರಿತು ಹೆಚ್ಚುವರಿ ಎಸ್ಪಿ ಸಲ್ಲಿಸಿದ್ದ ವರದಿ ಆಧರಿಸಿ ಅವರನ್ನು ಶನಿವಾರ ಅಮಾನತುಗೊಳಿಸಿದ್ದೆ. ಅದು ಭಾನುವಾರ ಬೆಳಿಗ್ಗೆ ಅವರ ಕೈ ತಲುಪಿದೆ. ಆನಂತರ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ನನ್ನ ಕೈಸೇರಿಲ್ಲ’ ಎಂದು ಎಸ್ಪಿ ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.