ADVERTISEMENT

ಪಿಡಬ್ಲ್ಯುಡಿಯಲ್ಲಿ ರೂ. 1450 ಕೋಟಿ ದುಂದು

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
ವಿಧಾನಪರಿಷತ್ತಿನಲ್ಲಿ ಸೋಮವಾರ ಬಿಜೆಪಿ ಸದಸ್ಯರು ನಡೆಸಿದ ಧರಣಿಯ ಕಾರಣಕ್ಕೆ ಕಲಾಪ ಮುಂದೂಡಿದ ಬಳಿಕ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರೊಂದಿಗೆ ಮಾತುಕತೆ­ಯಲ್ಲಿ ತೊಡ­ಗಿದ್ದರು. ಸಚಿವರಾದ ಎಚ್‌.ಎಸ್‌. ಮಹದೇವ ಪ್ರಸಾದ್‌, ಎಚ್‌.ಆಂಜನೇಯ, ಖಮರುಲ್‌ ಇಸ್ಲಾಂ ಮತ್ತು ಎಸ್‌.ಆರ್‌.ಪಾಟೀಲ್‌ ಇದ್ದರು	          –ಪ್ರಜಾವಾಣಿ ಚಿತ್ರ
ವಿಧಾನಪರಿಷತ್ತಿನಲ್ಲಿ ಸೋಮವಾರ ಬಿಜೆಪಿ ಸದಸ್ಯರು ನಡೆಸಿದ ಧರಣಿಯ ಕಾರಣಕ್ಕೆ ಕಲಾಪ ಮುಂದೂಡಿದ ಬಳಿಕ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರೊಂದಿಗೆ ಮಾತುಕತೆ­ಯಲ್ಲಿ ತೊಡ­ಗಿದ್ದರು. ಸಚಿವರಾದ ಎಚ್‌.ಎಸ್‌. ಮಹದೇವ ಪ್ರಸಾದ್‌, ಎಚ್‌.ಆಂಜನೇಯ, ಖಮರುಲ್‌ ಇಸ್ಲಾಂ ಮತ್ತು ಎಸ್‌.ಆರ್‌.ಪಾಟೀಲ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯೋಜನೆಗಳ ಆದ್ಯತಾ ಪಟ್ಟಿ ತಯಾರಿಕೆ ಹಾಗೂ ನಿಧಿ ಹಂಚಿಕೆಗೆ ರಚಿಸಲಾಗಿದ್ದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿ ನಿಷ್ಕ್ರಿಯವಾಗಿದ್ದರಿಂದ 2007ರಿಂದ 2012ರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಾಮಗಾರಿಗಳಿಗೆ ಅನಗತ್ಯವಾಗಿ ರೂ.1,449.76 ಕೋಟಿ ಹೆಚ್ಚುವರಿ ವೆಚ್ಚವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಭಿಪ್ರಾಯಪಟ್ಟಿದೆ.

ಲೋಕೋಪಯೋಗಿ ಇಲಾಖೆಗೆ ಸಂಬಂ­­ಧಿಸಿದಂತೆ ಸಮಿತಿ ನೀಡಿರುವ ವರದಿ­ಯನ್ನು ವಿಧಾನಸಭೆಯಲ್ಲಿ ಗದ್ದ­ಲದ ವಾತಾವರಣದ ನಡುವೆಯೇ ಮಂಡಿ­ಸಲಾಯಿತು. ಈಗಾಗಲೇ ಮಹಾ­ಲೆಕ್ಕಪರಿಶೋಧಕರು ಗುರುತಿಸಿರುವ ಲೋಪ­ಗಳನ್ನು ಸಮಿತಿ ವರದಿ ಸಹ ಪುಷ್ಟೀಕರಿಸಿದೆ. ಲೆಕ್ಕ ಪರಿಶೋಧಕರ ಆಕ್ಷೇಪಗಳಿಗೆ ಇಲಾಖೆಯಿಂದ ನೀಡಲಾದ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಆದ್ಯತಾ ಪಟ್ಟಿ ತಯಾರಿಕೆ ಹಾಗೂ ನಿಧಿ ಹಂಚಿಕೆ ಮಾಡುವಾಗ ಮಾರ್ಗ­ಸೂಚಿ ಹಾಗೂ ಮಾನದಂಡ ನಿಯಮ ಉಲ್ಲಂಘನೆ ಮಾಡಿದ್ದರಿಂದ ಕಾಮಗಾರಿ ಗುಣಮಟ್ಟ ಹಾಗೂ ವೆಚ್ಚ ಎರಡರ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅದು ತಿಳಿಸಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2011–12ರ ಆರ್ಥಿಕ ವರ್ಷ­ದಲ್ಲಿ ಒದಗಿಸಲಾದ ಅನುದಾನದ ಶೇ 80ರಷ್ಟು ಮೊತ್ತವನ್ನು ಬಾಕಿ ಪಾವ­ತಿಗೆ ಬಳಸಲಾಗಿದೆ ಎಂಬುದು ಲೆಕ್ಕ ಪರಿ­ಶೋಧನೆ­ಯಿಂದ ಬೆಳಕಿಗೆ ಬಂದಿದೆ. ನಿರೂಪಿತ ಉದ್ದೇಶಗಳಿಗೆ ಅನುದಾನ ಬಳಕೆ ಮಾಡಿಕೊಳ್ಳದೆ ಲೋಪ ಎಸಗ­ಲಾ­ಗಿದೆ. ಜ್ಯೇಷ್ಠತೆ ಆಧಾರದ ಮೇಲೆ ಬಿಲ್‌ ಪಾವತಿ ಮಾಡಬೇಕಿತ್ತು. ಆ ನಿಯ­ಮ­ವನ್ನೂ ಪಾಲನೆ ಮಾಡಲಾಗಿಲ್ಲ ಎಂದು ತಪ್ಪುಗಳನ್ನು ಪಟ್ಟಿ ಮಾಡಲಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶ­ಗ­ಳಲ್ಲಿ ರಸ್ತೆಗೆ ಸಂಬಂಧಿಸಿದ ಪ್ರದೇಶ ಒತ್ತುವರಿಯಾಗಿದೆ. ಕರ್ನಾಟಕ ರಾಜ್ಯ ಹೆದ್ದಾರಿಗಳ ಕಾಯ್ದೆ–1954ರ ಪ್ರಕಾರ ಮಾರ್ಗದ ಹಕ್ಕು ನಿಯಂತ್ರಣಕ್ಕಾಗಿ ಬಿಲ್ಡಿಂಗ್‌ ಲೈನ್‌ ಮತ್ತು ಕಂಟ್ರೋಲ್‌ ಲೈನ್‌­ಗಳ ಮಾನದಂಡದಂತೆ ಅಂತಹ ಒತ್ತುವರಿ ತೆರವುಗೊಳಿಸಬೇಕು. ಇದ­ರಿಂದ ರಸ್ತೆ ವಿಸ್ತರಣೆ ಮಾಡುವಾಗ ಸರ್ಕಾರಕ್ಕೆ ಪರಿಹಾರದ ಸ್ವರೂಪದಲ್ಲಿ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದು ಹೇಳಿದೆ.

ಜೆಡಿಎಸ್‌ನ ಎಚ್‌.ಡಿ. ರೇವಣ್ಣ ನೇತೃತ್ವದ ಈ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಒಟ್ಟು 30 ಸದಸ್ಯ­ರಿ­ದ್ದಾರೆ. ಸಮಿತಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನೂ ಮಾಡಿದೆ. ಆದ್ಯತೆ ಮೇಲೆ ರಸ್ತೆಗಳ ಮಾರ್ಗದ ಹಕ್ಕು ನಿಯಂತ್ರಣಕ್ಕಾಗಿ ಲಭ್ಯವಿರುವ ಭೂಮಿಯನ್ನು ಸಮೀಕ್ಷೆ ಮಾಡಿಸಬೇಕು ಮತ್ತು ಅದನ್ನು ಸ್ವಾಧೀನ ಮಾಡಿಕೊಳ್ಳ­ಬೇಕು. ಗುತ್ತಿಗೆದಾರರಿಂದ ಪಡೆಯ­ಲಾದ ಠೇವಣಿಗಳು, ಅವಧಿ ಮೀರಿದ್ದರೆ ಅಂಥವುಗಳನ್ನು ರಾಜಸ್ವ ಎಂದು ಪರಿಗ­ಣಿಸಿ, ಆ ಖಾತೆಗೆ ಜಮಾ ಮಾಡಿಕೊಳ್ಳ­ಬೇಕು.

ಗುತ್ತಿಗೆದಾರರ ಬ್ಯಾಂಕ್‌ ಖಾತರಿ­ಗ­ಳನ್ನು ಸಂಬಂಧಪಟ್ಟ ಬ್ಯಾಂಕ್‌ಗಳಿಂದ ದೃಢೀಕರಿಸಿಕೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಪರವಾನಗಿ ಪಡೆಯಲು ಪಾವ­ತಿಸುವ ಮೊತ್ತ ಹಾಗೂ ಇತರ ಸಂದಾಯಗಳನ್ನು ಖಜಾನೆ ಪಾವತಿ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹೊಂದಾ­ಣಿಕೆ ಮಾಡಬೇಕು. ಕಟ್ಟಡ­ಗಳು ಮತ್ತು ಆಸ್ತಿಗಳ ದಾಖಲೆಗಳನ್ನು ನಿರ್ವಹಿಸಬೇಕು. ನಕ್ಷೆ ಹಾಗೂ ವಿನ್ಯಾ­ಸದ ವಿವರವನ್ನು ಗುತ್ತಿಗೆದಾರರಿಗೆ ಕಡ್ಡಾಯವಾಗಿ ಕೊಡಬೇಕು.

ಕಾಮಗಾರಿಗಳ ಆರ್ಥಿಕ ಹಾಗೂ ಭೌತಿಕ ಸಾಧನೆಯಲ್ಲಿ ವ್ಯತ್ಯಾಸವಾ­ಗಿದ್ದು, ಇದರಿಂದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅದನ್ನು ತಪ್ಪಿಸಲು ಯೋಜನಾ ಮೌಲ್ಯಮಾಪನ ಹಾಗೂ ಪರಿಶೀಲನಾ ತಂತ್ರಜ್ಞಾನ (ಪರ್ಟ್‌) ಮೂಲಕ ಕಾಮಗಾರಿ ವಿಶ್ಲೇ­ಷಿ­ಸುವ ವ್ಯವಸ್ಥೆ ಜಾರಿಗೆ ತರಬೇಕು. ಮುಖ್ಯ ಎಂಜಿನಿಯರ್‌ ಅವರ ಹಂತ­ದಲ್ಲಿ ನಡೆಸುವ ಶಿಸ್ತು ಕ್ರಮಗಳ ಪ್ರಗತಿ ಹಾಗೂ ಸ್ಥಿತಿಗತಿಗಳನ್ನು ನಿಯಮಿತವಾಗಿ ಪರಿಶೀಲಿಸಲು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.