ADVERTISEMENT

ಪಿಯು ಫಲಿತಾಂಶ: ಬಾಲಕಿಯರೇ ಮೊದಲಿಗರು

ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಮೇ 2016, 20:07 IST
Last Updated 25 ಮೇ 2016, 20:07 IST
ಪಿಯು ಫಲಿತಾಂಶ: ಬಾಲಕಿಯರೇ ಮೊದಲಿಗರು
ಪಿಯು ಫಲಿತಾಂಶ: ಬಾಲಕಿಯರೇ ಮೊದಲಿಗರು   

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.

ಒಟ್ಟಾರೆ ಶೇ 57.20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು,  ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶ ಶೇ 3ರಷ್ಟು ಕುಸಿತ ಕಂಡಿದೆ.

ಕಲಾ ವಿಭಾಗದಲ್ಲಿ  ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದು ಐಎನ್‌ಡಿಪಿ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಪಿ. ಅನಿತಾ (585), ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ಬಸವೇಶ್ವರನಗರದ ವಿವಿಎಸ್‌ ಸರ್ದಾರ್‌ ಪಟೇಲ್ ಪಿಯು ಕಾಲೇಜಿನ ಟಿ. ರಕ್ಷಿತಾ (596) ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ.ಬಿ. ದರಬಾರ ಪಿಯು ಕಾಲೇಜು ವಿದ್ಯಾರ್ಥಿನಿ ಸಹನಾ ಕುಲಕರ್ಣಿ, ಮಲ್ಲೇಶ್ವರ ಎಂಇಎಸ್‌ ಪಿಯು ಕಾಲೇಜಿನ ವಿ.ಛಾಯಾಶ್ರೀ ಮತ್ತು ವಿವಿ ಪುರದ ಎಸ್‌.ಬಿ. ಮಹಾವೀರ್ ಜೈನ್‌ ಕಾಲೇಜು ವಿದ್ಯಾರ್ಥಿನಿ ದೀಕ್ಷಾ ನಾಯಕ್‌ ಸಮಾನವಾಗಿ 594 ಅಂಕಗಳನ್ನು ಪಡೆದು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.  ಗ್ರಾಮಾಂತರ ಪ್ರದೇಶದವರಿಗಿಂತ ನಗರ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಬುಧವಾರ ಫಲಿತಾಂಶ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ‘ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದ 6,36,368 ವಿದ್ಯಾರ್ಥಿಗಳಲ್ಲಿ 3,64,013 ಮಂದಿ ತೇರ್ಗಡೆಯಾಗಿದ್ದಾರೆ’ ಎಂದರು.

ಕಳೆದ ವರ್ಷದ ಫಲಿತಾಂಶ ಶೇ 60.54 ಇತ್ತು.  ಪರೀಕ್ಷಾ ಕ್ರಮದಲ್ಲಿ ಸುಧಾರಣೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಪೊಲೀಸ್‌ ಭದ್ರತೆ ಹೆಚ್ಚಳ ಮುಂತಾದ ಕ್ರಮಗಳು ಫಲಿತಾಂಶ ಕುಸಿಯಲು ಕಾರಣ ಎಂದು ಹೇಳಿದರು.

‘ಗಣಿತ ವಿಷಯದ ಉತ್ತರ ಪತ್ರಿಕೆಗಳಿಗೆ ಕೃಪಾಂಕ ನೀಡಿಲ್ಲ. ಪಠ್ಯದ ಹೊರತಾದ ಪ್ರಶ್ನೆಗಳಿದ್ದರೆ ಮಾತ್ರ ಕೃಪಾಂಕ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದೆ ಎಂದು ತಜ್ಞರ ಸಮಿತಿ ವರದಿ ನೀಡಿತ್ತು. ಇಲಾಖೆಯಿಂದ ಯಾವುದೇ ನಿರ್ದೇಶನ ನೀಡದೆ, ಮುಖ್ಯ ಮೌಲ್ಯಮಾಪಕರ ವಿವೇಚನೆಗೆ ಬಿಡಲಾಗಿತ್ತು’ ಎಂದರು.
 

ಕಲಾ ವಿಭಾಗದಲ್ಲೇ ಹೆಚ್ಚು ಫೇಲ್‌
ವಿಜ್ಞಾನ, ವಾಣಿಜ್ಯಕ್ಕಿಂತಲೂ ಕಲಾ ವಿಭಾಗ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ADVERTISEMENT

ವಿಜ್ಞಾನ (ಸೈನ್ಸ್‌) ತುಂಬಾ ಕಠಿಣ. ಕಲಾ ವಿಭಾಗ (ಆರ್ಟ್ಸ್‌) ತೆಗೆದುಕೊಂಡರೆ ಸುಲಭವಾಗಿ ಉತ್ತೀರ್ಣರಾಗಬಹುದು ಎಂಬ ಅಭಿಪ್ರಾಯ ಇತ್ತು. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ಕಲಾ ವಿಭಾಗವನ್ನೇ ಆಯ್ದುಕೊಳ್ಳುತ್ತಾರೆ. ಆದರೆ, ಈ ಬಾರಿ ವಿಜ್ಞಾನದಲ್ಲಿ ಶೇ 66.25, ವಾಣಿಜ್ಯ ವಿಭಾಗದಲ್ಲಿ ಶೇ 64.16 ಮತ್ತು ಕಲಾ ವಿಭಾಗದಲ್ಲಿ ಶೇ 42.12ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನುತ್ತೀರ್ಣರಿಗೆ ವಿಶೇಷ ತರಬೇತಿ
‘ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ಪೂರಕ ಪರೀಕ್ಷೆ ನಡೆಸಲಾಗುವುದು. ಈ ಅವಧಿಯೊಳಗೆ ಅವರಿಗೆ ವಿಶೇಷ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪ್ರತಿ ವಿಷಯಕ್ಕೆ ನಿತ್ಯ ಒಂದು ತಾಸು ಆಯಾ ಕಾಲೇಜಿನಲ್ಲಿಯೇ ಉಚಿತ ತರಬೇತಿ ನೀಡಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ಹೇಳಿದರು.

****
ವಿಜ್ಞಾನ ವಿಭಾಗ ಶೇ 95ರಷ್ಟು ಅಂಕ ಮಾತ್ರ ನಿರೀಕ್ಷಿಸಿದ್ದೆ.  ಜೆಇಇ ಪರೀಕ್ಷೆಗೆ ನಡೆಸಿದ ತಯಾರಿ ಈ ಪರೀಕ್ಷೆಗೂ ಸಹಕಾರಿಯಾಯಿತು. ಮುಂದೆ ವಿಜ್ಞಾನಿಯಾಗಬೇಕೆಂದಿದ್ದೇನೆ.
-ರಕ್ಷಿತಾ ಟಿ (596), ವಿವಿಎಸ್‌ ಸರ್ದಾರ್‌ ಪಟೇಲ್‌ ಕಾಲೇಜು, ಬೆಂಗಳೂರು

ಶೇಕಡ 97 ಅಂಕ ನಿರೀಕ್ಷಿಸಿದ್ದೆ.  ಕಾಲೇಜಿನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ  ಇಷ್ಟೇ ಅಂಕ ಬರುತ್ತಿತ್ತು. ಗಣಿತ ವಿಷಯಕ್ಕೆ ಮಾತ್ರ ಟ್ಯೂಷನ್‌ ಪಡೆದಿದ್ದೆ. ಮುಂದೆ ಸಿಎ ಮಾಡುತ್ತೇನೆ.
–ಛಾಯಾಶ್ರೀ(594), ವಾಣಿಜ್ಯ, ಎಂಇಎಸ್‌ ಮಲ್ಲೇಶ್ವರ, ಬೆಂಗಳೂರು

ನಿರೀಕ್ಷೆಗಿಂತ ಹೆಚ್ಚು ಅಂಕ ಬಂದಿದೆ.  ವಿಷಯವನ್ನು ಇಷ್ಟಪಟ್ಟು ದಿನಕ್ಕೆ ಐದು ಗಂಟೆ ಓದುತ್ತಿದ್ದೆ.   ಗಣಿತ ನನ್ನ ಆಸಕ್ತಿಯ ವಿಷಯ. ಹಾಗಾಗಿ ಗ್ರೇಸ್‌ ಅಂಕಗಳಿಲ್ಲದಿದ್ದರೂ ನೂರು ಅಂಕ ನಿರೀಕ್ಷಿಸಿದ್ದೆ.  ಮುಂದೆ ಕಂಪ್ಯೂಟರ್‌ ಎಂಜಿನಿಯರಿಂಗ್‌ ಮಾಡಬೇಕೆಂದಿದ್ದೇನೆ.
ಎಂ. ರಮ್ಯಾ (594), ವಿಜ್ಞಾನ, ಎನ್‌ಎಂಕೆಆರ್‌ವಿ, ಬೆಂಗಳೂರು

ಮೊದಲ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ರಾಜಕೀಯಶಾಸ್ತ್ರ ಮತ್ತು ಅರ್ಥಶಾಸ್ತ್ರ ನನ್ನ ಆಸಕ್ತಿಯ ವಿಷಯ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ಮುಂದೆ ಐಎಫ್‌ಎಸ್‌ ಅಧಿಕಾರಿಯಾಗುವ ಗುರಿ ಇದೆ.
–ತಾನಿಯಾ ಮಾರ್ಥಾ ಥಾಮಸ್‌ (580), ಕಲಾ, ಕ್ರೈಸ್ಟ್‌ ಕಾಲೇಜು, ಬೆಂಗಳೂರು

ಮನಶಾಸ್ತ್ರ ನನ್ನ ಇಷ್ಟದ ವಿಷಯ. ಹಾಗಾಗಿ ಕಲಾ ವಿಭಾಗಕ್ಕೆ ಸೇರಿದ್ದೆ. ಕಲಾ ವಿಷಯವಾಗಿದ್ದರೂ ನಿರಂತರ ಅಧ್ಯಯನ ಮಾಡಿದ್ದೆ. ಮುಂದೆ ಮನಶಾಸ್ತ್ರದಲ್ಲಿ ಪದವಿ ಪಡೆದು  ಐಎಎಸ್‌ ಅಧಿಕಾರಿಯಾಗುವುದು ನನ್ನ  ಗುರಿ.
ಬಿ.ಜಿ.ಅನುಶ್ರೀ (578) ,ಕಲಾ, ಮೌಂಟ್‌ ಕಾರ್ಮೆಲ್

ಇಷ್ಟು ಅಂಕ ನಿರೀಕ್ಷಿಸಿದ್ದೆ.  ಕಾಲೇಜಿನಲ್ಲಿ ನಡೆಸುತ್ತಿದ್ದ ಎಲ್ಲ ಪರೀಕ್ಷೆಗಳಲ್ಲಿ ಇಷ್ಟೇ ಅಂಕ ಗಳಿಸುತ್ತಿದ್ದೆ. ಟ್ಯೂಷನ್‌ಗೆ ಹೋಗಿಲ್ಲ. ಪ್ರತಿದಿನದ ಪಾಠಗಳನ್ನು ಅಂದೇ ಮನದಟ್ಟಾಗುವಂತೆ ಓದುತ್ತಿದ್ದೆ. ಮುಂದೆ ಸಿಎ ಮಾಡಬೇಕೆಂದಿದ್ದೇನೆ.
–ಲೋಲಿಕಾ (594), ವಾಣಿಜ್ಯ, ಪಿಇಎಸ್‌ ಬನಶಂಕರಿ, ಬೆಂಗಳೂರು

ಮೊದಲ ವರ್ಷದ ಪರೀಕ್ಷೆಯಲ್ಲೂ ಶೇಕಡ 97ರಷ್ಟು ಅಂಕ ಗಳಿಸಿದ್ದೆ. ಹಾಗಾಗಿ ಈ ಬಾರಿ ಹೆಚ್ಚು ಅಂಕ ಬರುವ ನಿರೀಕ್ಷೆ ಇತ್ತು. ಮುಂದೆ ಬಿಕಾಂ ಜೊತೆಗೆ ಸಿಎ ಮಾಡಬೇಕೆಂದಿದ್ದೇನೆ.
–ನಾಗಪೂಜಾ (593), ವಾಣಿಜ್ಯ, ಪಿಇಎಸ್‌ ಕಾಲೇಜು, ಹನುಮಂತನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.