ADVERTISEMENT

ಪಿಯು: ಮೇ 2ಕ್ಕೆ ಉಪನ್ಯಾಸಕರ ಹಾಜರಾತಿ ಕಡ್ಡಾಯ– ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ಬೆಂಗಳೂರು: ಮೇ ಅಂತ್ಯದಿಂದ ಪಿಯು ತರಗತಿಯನ್ನು ಪ್ರಾರಂಭಿಸಿ ಎನ್ನುವ ಉಪನ್ಯಾಸಕರ ಮನವಿಯನ್ನು ತಿರಸ್ಕರಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ, ಮೇ 2ರಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ, ಈಗಾಗಲೇ ಎಲ್ಲಾ ಕಾಲೇಜುಗಳಲ್ಲಿ ಲಗತ್ತಿಸಿರುವ ಪ್ರಥಮ ಮತ್ತು ದ್ವಿತೀಯ ಪಿಯು ದಾಖಲಾತಿ ಮತ್ತು ವೇಳಾ ಪಟ್ಟಿಯ ಪ್ರಕಾರವೇ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.

ಶೈಕ್ಷಣಿಕ ಅವಧಿ ಪ್ರಾರಂಭವಾಗುವ ದಿನದಂದು ಕರ್ತವ್ಯಕ್ಕೆ ಹಾಜರಾಗದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮ 106 (ಎ) ದಂತೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ನಿಯಮ ಏನಿದೆ?: ಕರ್ನಾಟಕ ನಾಗರೀಕ ಸೇವಾ ನಿಯಮ 106 (ಎ) ಪ್ರಕಾರ ರಜೆ ಮಂಜೂರು ಮಾಡಿಸಿಕೊಳ್ಳದೆ ಕರ್ತವ್ಯಕ್ಕೆ ಗೈರು ಹಾಜರಾದರೆ ಅದನ್ನು ದುರ್ನಡೆ ಎಂದು ಪರಿಗಣಿಸಲಾಗುತ್ತದೆ. ಗೈರು ಹಾಜರಾಗುವ ದಿನಗಳಲ್ಲಿ ಸಂಬಳ ಕಡಿತಗೊಳಿಸಲಾಗುತ್ತದೆ. ಹೀಗಿದ್ದೂ ಗೈರಾದ ದಿನಗಳನ್ನು ರಜೆದಿನಗಳಿಂದ ತೆಗೆಯಲಾಗುತ್ತದೆ.

ಮತದಾನಕ್ಕೆ ರಜೆ: ವಿಧಾನಸಭಾ ಚುನಾವಣೆ ಅಂಗವಾಗಿ ಮೇ 11 ಹಾಗೂ 12ರಂದು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಇಲಾಖೆ ಆದೇಶಿಸಿದೆ.
**
ಕಾಲೇಜಿನ ಸಮಯ ಬದಲು 
ಬಿಸಿಲು ಹೆಚ್ಚಿರುವ ಕಾರಣ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರ್ಗಿ ವಿಭಾಗದ ಜಿಲ್ಲೆಗಳಲ್ಲಿನ ಸರ್ಕಾರಿ ಕಚೇರಿಗಳ ಸಮಯ ಬದಲಿಸಲಾಗಿದೆ. ಅದೇ ರೀತಿ ಈ ಜಿಲ್ಲೆಗಳಲ್ಲಿ ಪದವಿಪೂರ್ವ ಕಾಲೇಜುಗಳ ಸಮಯವನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.