ADVERTISEMENT

ಪುಸ್ತಕಗಳ ದರ ಏರಿಸಲು ಸರ್ಕಾರ ನಿರ್ಧಾರ

ಪ್ರತಿ ಪುಟಕ್ಕೆ 70 ಪೈಸೆ ನಿಗದಿ, 500 ಪುಸ್ತಕ ಖರೀದಿ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳ ದರ ಏರಿಕೆ ಮತ್ತು ಪ್ರತಿಗಳ ಸಂಖ್ಯೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರತಿ ಪುಟಕ್ಕೆ 50 ಪೈಸೆಯಿಂದ 70 ಪೈಸೆಗೂ ಮತ್ತು ಪುಸ್ತಕಗಳ ಖರೀದಿ ಸಂಖ್ಯೆಯನ್ನು 300 ರಿಂದ 500 ಪ್ರತಿಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಗ್ರಂಥಾಲಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಬೆಳಗಾವಿ ಅಧಿವೇಶನದ ಬಳಿಕ ಈ ಸಂಬಂಧ ಆದೇಶ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಪ್ರತಿ ಪುಟದ ದರ ಏರಿಕೆ ಮತ್ತು ಪುಸ್ತಕಗಳ ಖರೀದಿ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಕಾಶಕರಿಗೆ ಸಿಹಿ ಸುದ್ದಿ. ಆದರೆ, ಇದರ ಪ್ರಯೋಜನ ಗ್ರಂಥಾಲಯ ಇಲಾಖೆಗೆ ಕಳಪೆ ಪುಸ್ತಕಗಳನ್ನು ಪೂರೈಕೆ ಮಾಡುವ ದಂಧೆಯಲ್ಲಿ ತೊಡಗಿರುವವರಿಗೆ ಆಗಬಹುದು’ ಎಂಬ ಆತಂಕ ಪ್ರಕಾಶಕರ ವಲಯದಲ್ಲಿ ವ್ಯಕ್ತವಾಗಿದೆ.

ADVERTISEMENT

‘ಪ್ರತಿ ಪುಟಕ್ಕೆ ದರವನ್ನು 70 ಪೈಸೆಗೆ ಹೆಚ್ಚಿಸಲು ಸರ್ಕಾರ ಮುಂದಾಗಿರುವುದರಿಂದ ಶೇ 40 ರಷ್ಟು ಏರಿಕೆ ಮಾಡಿದಂತಾಗುತ್ತದೆ. ಕಳೆದ 10 ವರ್ಷಗಳಿಂದ ದರ ಹೆಚ್ಚಳ ಆಗಿರಲಿಲ್ಲ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಇದರ ಪ್ರಯೋಜನ ನಕಲಿ ಪ್ರಕಾಶಕರಿಗೆ ಆಗುತ್ತದೆ. ಗ್ರಂಥಾಲಯ ವ್ಯವಹಾರಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ತಜ್ಞರನ್ನು ಆಯ್ಕೆ ಸಮಿತಿಗೆ ನೇಮಿಸಬೇಕು. ಇಲ್ಲವಾದರೆ ಅಕ್ರಮಕ್ಕೆ ದಾರಿಯಾಗುತ್ತದೆ’ ಎಂದು ಪ್ರಕಾಶಕರೊಬ್ಬರು ತಿಳಿಸಿದರು.

‘ಪುಸ್ತಕ ಪ್ರತಿಗಳ ಸಂಖ್ಯೆಯನ್ನು 300 ರಿಂದ 500 ಕ್ಕೆ ಹೆಚ್ಚಿಸುವುದು ಮತ್ತು ಗರಿಷ್ಠ ವ್ಯವಹಾರದ ಮಿತಿಯನ್ನು ₹ 1 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಸುವ ಪ್ರಸ್ತಾವ ಒಳ್ಳೆಯದೆ. ಕಮಿಷನ್‌ ಪಡೆಯುವ ಅಧಿಕಾರಿಗಳಿಂದ ಉತ್ತಮ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಗುತ್ತದೆ ಎಂಬುದನ್ನು ಕಾದುನೋಡಬೇಕು’ ಎಂದು ಅವರು ಹೇಳಿದರು.

ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಎ. ರಮೇಶ್‌ ಉಡುಪ ಮಾತನಾಡಿ, ಕನ್ನಡಕ್ಕೊಂದು ದರ ಇತರ ಭಾಷೆಗಳಿಗೆ ಬೇರೆ ದರ ನೀಡಲಾಗುತ್ತಿದೆ. ಕನ್ನಡದ ಪುಸ್ತಕಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಗ್ರಂಥಾಲಯ ಇಂಗ್ಲಿಷ್‌ ಹಾಗೂ ಇತರ ಭಾಷೆಗಳ ಪುಸ್ತಕಗಳನ್ನು ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಿದೆ. ಪುಸ್ತಕ ಖರೀದಿಗಾಗಿ ನಿಗದಿ ಮಾಡುವ ಮೊತ್ತದಲ್ಲಿ ಶೇ 25 ರಷ್ಟು ಹಣವನ್ನು ಇತರ ಭಾಷೆಗಳ ಪುಸ್ತಕಗಳ ಖರೀದಿಗೆ ನೀಡಲಾಗುತ್ತಿದೆ ಎಂದರು.

ಕನ್ನಡದಲ್ಲಿ ಪ್ರತಿ ವರ್ಷ 7,000 ಹೊಸ ಪುಸ್ತಕಗಳು ಪ್ರಕಟವಾಗುತ್ತಿವೆ.  ಇದರಲ್ಲಿ 2,000 ಮಾರಾಟವಾದರೆ ಉಳಿದ ಪುಸ್ತಕಗಳು ಗ್ರಂಥಾಲಯಕ್ಕೆ ಹೋಗುತ್ತದೆ. ಸಾಕಷ್ಟು ಪುಸ್ತಕಗಳಲ್ಲಿ ಹಳೆ ಪುಸ್ತಕಗಳಿಗೆ ಮುಖ ಪುಟ ಬದಲಿಸಿ, ಪ್ರಥಮ ಮುದ್ರಣ ಎಂದು ಮುದ್ರಿಸುತ್ತಾರೆ. ಕೆಟ್ಟ ಮತ್ತು ಅನರ್ಹ ಪುಸ್ತಕಗಳು ಆಯ್ಕೆ ಆಗುತ್ತಿವೆ. ಸರ್ಕಾರದ ದರ ಮತ್ತು ಪ್ರತಿಗಳ ಸಂಖ್ಯೆ ಹೆಚ್ಚಿಸುವ ನಿರ್ಧಾರ ಇಂತಹ ದಂಧೆಯಲ್ಲಿ ತೊಡಗಿರುವವರಿಗೆ ಪ್ರಯೋಜನ ಆಗುತ್ತದೆ ಎಂದು ಅವರು ಹೇಳಿದರು.

ಗ್ರಂಥಾಲಯಕ್ಕೆ ಮಾರುವುದಕ್ಕೆಂದೇ ಇರುವ ಪ್ರಕಾಶಕರಿಗೆ ಕಡಿವಾಣ ಹಾಕಬೇಕು. ಇದಕ್ಕೆ ಆಯ್ಕೆ ಸಮಿತಿಯಲ್ಲಿ ನೇಮಕ ಮಾಡುವಾಗ ಪುಸ್ತಕಗಳ ಬಗ್ಗೆ ಅರಿವು ಇರುವವರನ್ನೇ ನೇಮಿಸಬೇಕು. ಈಗಿನ ನೇಮಕದ ಮಾನದಂಡ ಸರಿಯಾಗಿಲ್ಲ ಎಂದು ಉಡುಪ ತಿಳಿಸಿದರು.

ಪಕ್ಕದ ತಮಿಳುನಾಡಿನಲ್ಲಿ ಹೆಚ್ಚು ದರ ಇದೆ ಮತ್ತು ಹೆಚ್ಚು ಪ್ರತಿಗಳನ್ನು ಖರೀದಿಸಲಾಗುತ್ತಿದೆ. ರಾಜ್ಯದಲ್ಲಿ ದರ ಹೆಚ್ಚಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಹತ್ತು ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಪರಿಷ್ಕರಣೆಗಾಗಿ ಹೋರಾಟ ನಡೆಸಿದ್ದೆವು. ಇದರಿಂದ ಪ್ರಕಾಶಕರಿಗೆ ಪ್ರಯೋಜನ ಆಗುತ್ತದೆ ಎಂದು ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಹಳ್ಳಿ ತಿಳಿಸಿದರು.

ನಿಯಮಾನುಸಾರವೇ ಆಯ್ಕೆ

ದರ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುಸ್ತಕ ಆಯ್ಕೆಯನ್ನು ನಿಯಮಾನುಸಾರವೇ ನಡೆಸಲಾಗುತ್ತದೆ. ಯಾರಾದರೂ ಅಕ್ರಮ ಎಸಗಿರುವುದು ಕಂಡು ಬಂದರೆ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ ಕುಮಾರ್ ಹೊಸಮನಿ ತಿಳಿಸಿದರು.

ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿರುವ ಗ್ರಂಥಾಲಯ ಸೆಸ್‌ ₹ 251 ಕೋಟಿಯನ್ನು ನಮಗೆ ನೀಡಿಲ್ಲ. ಆ ಹಣ ಬಂದರೆ ಹೆಚ್ಚು ಪುಸ್ತಕಗಳನ್ನು ಖರೀದಿಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.